ಸೌಜನ್ಯಳ ನ್ಯಾಯಕ್ಕಾಗಿ ಲೋಕಸಭಾ ಚುನಾವಣೆಯಲ್ಲಿನೋಟಾಕ್ಕೆ ಮತ ಚಲಾಯಿಸಲು : ಮಹೇಶ್ ಶೆಟ್ಟಿ ತಿಮರೋಡಿ ಕರೆ

0

2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸೌಜನ್ಯಳನ್ನು ನೆನಪಿಸಿಕೊಂಡು ನೋಟಾ ಬಟನ್ ಒತ್ತುವ ಮೂಲಕ ಸೌಜನ್ಯ ನ್ಯಾಯಕ್ಕಾಗಿ ನಮ್ಮೊಡನೆ ಕೈಜೋಡಿಸಿ.

ಲಕ್ಷಗಟ್ಟಲೆ ಓಟು ನೋಟಾಕ್ಕೆ ಬಿದ್ದರೆ ಜನರ ಮನಸ್ಸಿನಲ್ಲಿ ಏನಿದೆ ಎಂದು ಕೇಂದ್ರ ಸರಕಾರಕ್ಕೆ ಮತ್ತು ಸುಪ್ರೀಂ ಕೋರ್ಟಿನ ಗಮನಕ್ಕೆ ಬಂದು ನ್ಯಾಯ ದೊರೆಯಲು ಸಹಕಾರಿಯಾಗುತ್ತದೆ ಎಂದು ಸೌಜನ್ಯ ನ್ಯಾಯಪರ ಹೋರಾಟ ಸಮಿತಿಯ ಮುಂದಾಳು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.


ಎ.13ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಹೇಶ್ ಶೆಟ್ಟಿ ತಿಮರೋಡಿಯವರು, ಸೌಜನ್ಯ ಅತ್ಯಾಚಾರ ಹತ್ಯೆ ಪ್ರಕರಣಕ್ಕೆ ಇದು 12 ವರ್ಷ.

ಆ ಹೆಣ್ಣು ಮಗಳ ಸಾವಿಗೆ ನ್ಯಾಯ ಸಿಗಬೇಕೆಂದು 12 ವರ್ಷಗಳಿಂದಲೂ ನಾವು ಹೋರಾಟ ನಡೆಸಿಕೊಂಡು ಬರುತ್ತಿವೆ. ಆದರೆ ಇದುವರೆಗೆ ನಮಗೆ ನ್ಯಾಯ ಸಿಕ್ಕಿಲ್ಲ. ಲೋಕಸಭಾ ಚುನಾವಣೆಯ ಸಂದರ್ಭವಾದ್ದರಿಂದ ಇದು ಸಕಾಲ. ಆದ್ದರಿಂದ ಕರಾವಳಿಯ ಜನರು ಮತ ಚಲಾಯಿಸುವ ಸಂದರ್ಭ ಸೌಜನ್ಯಳಿಗಾದ ಅನ್ಯಾಯವನ್ನು ನೆನಪಿಸಿ.

ಆಕೆಗೆ ನ್ಯಾಯ ಸಿಗಲು ನೋಟಾ ಬಟನ್ ಒತ್ತಬೇಕು ಎಂಬುದು ನಮ್ಮ ವಿನಂತಿ. ನೋಟಾ ಮತ ಹೆಚ್ಚು ಬಂದಾಗ ಅದರ ಶಕ್ತಿ ಏನೆಂಬುದು ನಾವು ನೋಡಿzವೆ. ನಮ್ಮ ಪಕ್ಕದ ಚಾರ್ವಾಕದಲ್ಲಿ, ಬಿಹಾರದ ಗೋಪಾಲಗಂಜ್‌ನಲ್ಲಿ ಹೀಗೆ ಇನ್ನಿತರ ನೋಟಾಕ್ಕೆ ಹೆಚ್ಚು ಮತ ಬಂದಿರುವುದರಿಂದ ನ್ಯಾಯ ದೊರೆತಿದೆ. ಅದೇ ರೀತಿ ಇಲ್ಲಿಯೂ ನೋಟಾಕ್ಕೆ ಮತ ಚಲಾಯಿಸಿ ನಮ್ಮ ಹೋರಾಟಕ್ಕೆ ನ್ಯಾಯ ಸಿಗುತ್ತದೆ. ಈ ಘಟನೆಗೆ ತಾರ್ಕಿಕ ಅಂತ್ಯ ಸಿಗಬೇಕೆನ್ನುವುದು ಬೇಡಿಕೆ. ಬಿಜೆಪಿ - ಕಾಂಗ್ರೆಸ್ ಹೀಗೆ ರಾಜಕೀಯ ಪಕ್ಷಗಳು ನಮ್ಮ ಕೂಗನ್ನು ಕೇಳಿಸಿಕೊಂಡಿಲ್ಲ.

ಈ ಜಿಲ್ಲೆಯಲ್ಲಿ ಶೇ.85 ಹಿಂದುಗಳಿರುವ ನಾವು ಒಂದು ಹೆಣ್ಣು ಮಗಳಿಗೆ ನ್ಯಾಯ ಕೊಡಿಸಲು ಆಗುವುದಿಲ್ಲವೆಂದಾದರೆ ಹೇಗೆ? ಎಂದ ಅವರು, ಕಳೆದ ಬಾರಿ ಈ ಕ್ಷೇತ್ರದ ಸಂಸದರಿದ್ದು ದೊಡ್ಡ ಮಟ್ಟದ ಸಭೆ ನಡೆದಾಗ ಸೌಜನ್ಯಳ ತಾಯಿ ನಮ್ಮನ್ನು ಮೋದಿಯವರಲ್ಲಿಗೆ ಕರೆದುಕೊಂಡು ಹೋಗಬೇಕೆಂದು ಕೇಳಿಕೊಂಡಿದ್ದರು. ಅವರು ಭರವಸೆ ನೀಡಿದ್ದರು. ಆದರೆ ಇದುವರೆಗೆ ಕರೆದುಕೊಂಡು ಹೋಗಿಲ್ಲ.

ಬಿಜೆಪಿಯವರು ಬಾಯೆತ್ತಿದರೆ ಹೆಣ್ಣನ್ನು ಮಾತೆ, ಅಮ್ಮ, ತಾಯಿ ಎಂದು ಹೇಳುವ ಅವರಿಗೆ ಸೌಜನ್ಯಳಿಗೆ ನ್ಯಾಯ ಕೊಡಿಸಬೇಕೆಂದು ಯಾಕೆ ಅನಿಸಲಿಲ್ಲ. ಆಕೆ ಹೆಣ್ಣಲ್ಲವೇ? ಇಲ್ಲಿಯ ನಾಯಕರು ಕೂಡಾ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದ ಅವರು ನಮ್ಮ ಹೋರಾಟವನ್ನು ತೇಜೋವಧೆ ಮಾಡುವ ಪ್ರಯತ್ನ ಬೇಡ.

ನಾವು ಕೂಡಾ ಸನಾತನ ಹಿಂದೂ ಧರ್ಮದ ನೆಲೆಗಟ್ಟಿನಲ್ಲೇ ಇರುವವರು ಎಂದು ಹೇಳಿದರು. ಸುಳ್ಯ ದಕ್ಷಿಣ ಕನ್ನಡ ಜಿಲ್ಲೆಯ ಮುಖ ಇದ್ದ ಹಾಗೆ. ಆದ್ದರಿಂದ ಇಲ್ಲಿ ಸದ್ಯದಲ್ಲೇ ದೊಡ್ಡ ಮಟ್ಟದ ಸಾರ್ವಜನಿಕ ಸಭೆ ಆಯೋಜಿಸುತ್ತೇವೆ. ಸೌಜನ್ಯ ನ್ಯಾಯಕ್ಕಾಗಿ ನೋಟಾ ಒತ್ತುವಂತೆ ಜನರಲ್ಲಿ ಕೇಳಿಕೊಳ್ಳುತ್ತೇವೆ.

ಈಗಾಗಲೇ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಈ ಬಾರಿ ಸುಮಾರು 2 ಲಕ್ಷ ನೋಟಾ ಮತ ಸಿಗುವ ನಿರೀಕ್ಷೆ ನಮ್ಮಲ್ಲಿದೆ'' ಎಂದು ಹೇಳಿದರು. ಜಾನಪದ ಸಂಶೋಧಕ ತಮ್ಮಣ್ಣ ಶೆಟ್ಟಿ ಮಾತನಾಡಿ,ಇದು ಪ್ರಾಮಾಣಿಕರ ನಾಡು. ಸೌಜನ್ಯಳಿಗಾದ ಅನ್ಯಾಯಕ್ಕಾಗಿ ನ್ಯಾಯ ಕೊಡುವ ನಿಟ್ಟಿನಲ್ಲಿ ಎಲ್ಲ ಮಹಿಳೆಯವರು ಹಾಗೂ ಪ್ರಜ್ಞಾವಂತ ಮತದಾರರು ನೋಟಾ ಒತ್ತುವ ಮೂಲಕ ನ್ಯಾಯ ಕೊಡಿಸುತ್ತಾರೆ ಎಂದು ಹೇಳಿದರು. ರಾಮೇಶ್ವರ ಕೆಫೆ ಪ್ರಕರಣದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯುತ್ತಾರೆಂದಾದರೆ ಸೌಜನ್ಯ ಪ್ರಕರಣದಲ್ಲಿ ಯಾಕೆ ಆಗಿಲ್ಲ” ಎಂದವರು ಪ್ರಶ್ನಿಸಿದರು.


ಐವರ್ನಾಡಿನ ಕರುಣಾಕರ ಬರೆಮೇಲು ಮಾತನಾಡಿ, ಸೌಜನ್ಯಳಿಗೆ ನ್ಯಾಯ ಒದಗಿಸಿಕೊಡಲು ನಾವೆಲ್ಲರೂ ಒಂದಾಗಬೇಕು. ಆ ನಿಟ್ಟಿನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೋಟಾವನ್ನು ಒತ್ತುವ ಮೂಲಕ ಸೌಜನ್ಯಳಿಗೆ ನ್ಯಾಯ ಕೊಡಿಸಲು ಸಹಕಾರ ನೀಡಬೇಕು'' ಎಂದು ಕೇಳಿಕೊಂಡರು. ರೈತರ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಮಾತನಾಡಿ,ಒಕ್ಕಲಿಗ ಸಮುದಾಯಕ್ಕೆ ಸೇರಿದ ಹೆಣ್ಣು ಮಗಳು ಸೌಜನ್ಯಳ ನ್ಯಾಯಕ್ಕೆ ಇಲ್ಲಿಯ ಒಕ್ಕಲಿಗರು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯದ ಮಗಳಿಗೆ ನ್ಯಾಯ ಕೊಡಿಸಲು ಎಲ್ಲರೂ ಒಂದಾಗೋಣ” ಎಂದರು.


ಸೌಜನ್ಯ ನ್ಯಾಯಪರ ಹೋರಾಟ ಸಮಿತಿಯ ಎನ್.ಟಿ. ವಸಂತ ಸ್ವಾಗತಿಸಿದರು. ಕಡಬ ನೀತಿ ತಂಡದ ಅಧ್ಯಕ್ಷ ಜಯಂತ್ ಟಿ, ನ್ಯಾಯವಾದಿ ಮೋಹಿತ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.