ಅಡ್ಕಾರು : ಮನೆ ನುಗ್ಗಿ ಮಹಿಳೆಯ ಕುತ್ತಿಗೆಯಿಂದ ಚಿನ್ನ ಎಳೆದು ಪರಾರಿಯಾದ ಪ್ರಕರಣ : ನ್ಯಾಯಾಲಯದಲ್ಲಿ ಆರೋಪ ಸಾಬೀತು

0

ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಮನೆ ನುಗ್ಗಿ ಮಹಿಳೆಯ ಕುತ್ತಿಗೆಯಿಂದ‌ ಚಿನ್ನ ಎಳೆದು‌ ಪರಾರಿಯಾದ ಪ್ರಕರಣದ ವಿಚಾರಣೆ ‌ನ್ಯಾಯಾಲಯದಲ್ಲಿ ನಡೆದು ಆರೋಪಿಯ ಆರೋಪ ಸಾಬೀತಾಗಿದ್ದು, ನ್ಯಾಯಾಧೀಶರು ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆಂದು ತಿಳಿದುಬಂದಿದೆ.

ಆರೋಪಿತ ಸಲೀಂ ಎಂಬಾತ ದಿನಾಂಕ 28.11.2022 ರಂದು ಬೆಳಿಗ್ಗೆ 9.45 ಗಂಟೆಗೆ ಜಾಲ್ಸೂರು ಗ್ರಾಮದ ಬೈತಡ್ಕದಲ್ಲಿರುವ ಕಮಲ ಅಡ್ಕಾರು ರವರ ಮನೆಗೆ ಕೆಎಲ್ 60 ಜೆ 3378 ನೇ ಪ್ಯಾಶನ್ ಎಕ್ಸ್ ಪ್ರೋ ಮೋಟಾರ್ ಸೈಕಲ್ ನಲ್ಲಿ ಬಂದು ಕಮಲರೊಂದಿಗೆ ಪರಿಚಯಸ್ಥರಂತೆ ಮಾತಾಡಿ ಕುಡಿಯಲು ನೀರು ಕೇಳಿ, ಕಮಲರವರು ಮನೆಯೊಳಗೆ ನೀರು ತರಲೆಂದು ಹೋದಾಗ ಅವರನ್ನು ಹಿಂಬಾಲಿಸಿ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆಯ ಅಡುಗೆ ಕೋಣೆಯಲ್ಲಿ ಕಮಲ ರವರ ಕುತ್ತಿಗೆಯನ್ನು ಹಿಂದಿನಿಂದ ಎರಡೂ ಕೈಗಳಿಂದ ಬಿಗಿಯಾಗಿ ಹಿಡಿದು, ಆ ಬಳಿಕ ಬೊಬ್ಬೆ ಹಾಕಿದರೆ ಕೊಂದು ಬಿಡುತ್ತೇನೆಂದು ಜೀವ ಬೆದರಿಕೆಯೊಡ್ಡಿ , ಬಳಿಕ ಒಂದು‌ ಕೈಯಲ್ಲಿ ಬಾಯನ್ನು ಬಿಗಿಯಾಗಿ ಹಿಡಿದು, ಇನ್ನೊಂದು ಕೈಯಿಂದ ಕುತ್ತಿಗೆಯಲ್ಲಿ ಧರಿಸಿದ್ದ ಒಟ್ಟು 23.873 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತು ಸುಲಿಗೆ ಮಾಡಿಕೊಂಡು ಹೋಗುವ ಸಮಯ ಚಿನ್ನದ ಸರ ಎರಡು ತುಂಡಾಗಿದ್ದು, ಅದರಲ್ಲಿ 13.23 ಗ್ರಾಂ ತೂಕದ ಚಿನ್ನವು ತನ್ನ ಮನೆಯಲ್ಲಿ ಬಿದ್ದಿರುತ್ತದೆ. ಆಪಾದಿತನು ತಾನು ಸುಲಿಗೆ ಮಾಡಿದ 10.850 ಗ್ರಾಂ ತೂಕದ ತೂಕದ ಸರದ ತುಂಡಿನೊಂದಿಗೆ ತಾನು ಬಂದಿದ್ದ ಮೋಟಾರ್ ಸೈಕಲ್ ನಲ್ಲಿ ಪರಾರಿಯಾಗಿರುತ್ತಾನೆ. ಈ ಪ್ರಕರಣ ಸುಳ್ಯ ಪೋಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಬಿ.ಮೋಹನ್ ಬಾಬು ರವರ ಸಮಕ್ಷಮ ನಡೆದು 2025 ಫೆ 24 .ರಂದು ಆರೋಪಿತನ ಅಪರಾಧ ಸಾಬೀತಾಗಿ ಆತನನ್ನು ದೋಷಿ ಎಂದು ತೀರ್ಪು ನೀಡಿ ಶಿಕ್ಷೆಯನ್ನು ಕೆಳಕಂಡಂತೆ ಪ್ರಕಟಿಸಿರುತ್ತಾರೆ.

ಭಾರತೀಯ ದಂಡ ಸಂಹಿತೆ ಕಲಂ 386 ಕ್ಕೆ 3 ವರ್ಷ ಸಾದಾ ಕಾರಾಗೃಹ ವಾಸ ಮತ್ತು ₹10,000/- ದಂಡ. ದಂಡ ತೆರಲು ತಪ್ಪಿದ್ದಲ್ಲಿ 6 ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ವಾಸ. ಕಲಂ 448 ರಡಿಯಲ್ಲಿ 6 ತಿಂಗಳ ಸಾದಾ ಕಾರಾಗೃಹ ವಾಸ ಮತ್ತು ₹1,000/- ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಕಾರಾಗೃಹ ವಾಸ. ಈ ಎರಡೂ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಾಗತಕ್ಕದ್ದೆಂದು ಆದೇಶಿಸಲಾಗಿದೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರು ನಡೆಸಿ ವಾದ ಮಂಡಿಸಿರುತ್ತಾರೆ.