ಯಾಕೆ ನಿರ್ಲಕ್ಷ್ಯ – ಯಾವಾಗ ಮುಕ್ತಿ ? : ನ.ಪಂ. ಸಾಮಾನ್ಯ ಸಭೆಯಲ್ಲಿ ವಿಪಕ್ಷ ಆಕ್ರೋಶ
ಸುಳ್ಯದ ೧೧೦ ಕೆ.ವಿ. ವಿದ್ಯುತ್ ಕಾಮಗಾರಿ ಇಷ್ಟು ಸಮಯದಿಂದ ಆಗದಿರಲು ಸಮಸ್ಯೆ ಏನು ಎಂದು ನ.ಪಂ. ವಿಪಕ್ಷ ಸದಸ್ಯರು ಪ್ರಶ್ನಿಸಿದ ಹಾಗೂ ಮುಂದಿನ ಸಭೆಗೆ ಶಾಸಕರು ಹಾಗೂ ಮೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳಿದ್ದು ಸಭೆ ನಡೆಸುವ ಕುರಿತು ಅಧ್ಯಕ್ಷರು ಭರವಸೆ ನೀಡಿರುವ ಘಟನೆ ವರದಿಯಾಗಿದೆ.








ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ. ಯವರ ಅಧ್ಯಕ್ಷತೆಯಲ್ಲಿ ಎ.೨೯ರಂದು ಸಾಮಾನ್ಯ ಸಭೆ ನಡೆಯಿತು. ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಸುಧಾಕರ್, ಪಂಚಾಯತ್ ಸದಸ್ಯರುಗಳಾದ ಸರೋಜಿನಿ ಪೆಲ್ತಡ್ಕ, ಎಂ.ವೆಂಕಪ್ಪ ಗೌಡ, ಡೇವಿಡ್ ಧೀರಾ ಕ್ರಾಸ್ತ, ಬಾಲಕೃಷ್ಣ ಭಟ್ ಕೊಡೆಂಕಿರಿ, ಉಮ್ಮರ್ ಕೆ.ಎಸ್. ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ಬಾಲಕೃಷ್ಣ ರೈ ದುಗಲಡ್ಕ, ನಾರಾಯಣ ಶಾಂತಿನಗರ, ಪೂಜಿತಾ ಕೆ.ಯು., ಸುಧಾಕರ ಕುರುಂಜಿಭಾಗ್, ಸುಶೀಲ ಜಿನ್ನಪ್ಪ, ಶೀಲಾ ಕುರುಂಜಿ, ಸರೋಜಿನಿ ಪೆಲ್ತಡ್ಕ, ನಾಮನಿರ್ದೇಶಿತ ಸದಸ್ಯರುಗಳಾದ ಭಾಸ್ಕರ ಪೂಜಾರಿ ದುಗಲಡ್ಕ, ರಾಜು ಪಂಡಿತ್ ಇದ್ದರು.
ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ಸದಸ್ಯ ಎಂ.ವೆಂಕಪ್ಪ ಗೌಡರು, ನನ್ನ ವಾರ್ಡ್‌ನಲ್ಲಿ ಭಾನುವಾರದ ಗಾಳಿ ಮಳೆಯ ನಂತರ ಹೋದ ಕರೆಂಟು ಇನ್ನೂ ಬಂದಿಲ್ಲ. ವಾರ್ಡ್‌ನವರು ನನ್ನನ್ನು ಪ್ರಶ್ನಿಸುತ್ತಾರೆ. ಸುಳ್ಯದ ವಿದ್ಯುತ್ ಸಮಸ್ಯೆಗೆ ಪರಿಹಾರ ಏನು. ೧೧೦ ಕೆ.ವಿ. ಕಾಮಗಾರಿ ೨೦೦೯ರಿಂದ ಆರಂಭಗೊಂಡಿದ್ದು ೨೦೨೦ರಲ್ಲಿ ಪೂರ್ಣಗೊಳ್ಳಬೇಕಿತ್ತು. ಅಂಗಾರರು ಸಚಿವರಾದಾಗಲೂ ಕಂಪ್ಲೀಟ್ ಮಾಡಿಲ್ಲ. ಯಾಕೆ ಹೀಗೆ. ಸಮಸ್ಯೆ ಎಲ್ಲಿ ಆಗಿದೆ. ಎಂದು ಪ್ರಶ್ನಿಸಿ, ಇದಕ್ಕೆ ಸಂಬಧಿಸಿದ ಅಧಿಕಾರಿಗಳನ್ನು ಬರಲು ಮಾಡಿ ಎಂದು ಒತ್ತಾಯಿಸಿದರು. ಅಧಿಕಾರಿಗಳನ್ನು ಬರಲು ಹೇಳುತ್ತೇವೆ. ಮತ್ತು ಈ ಕುರಿತು ಸಭೆಯಲ್ಲಿ ಕೊನೆಯಲ್ಲಿ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಅಧ್ಯಕ್ಷರು ಉತ್ತರಿಸಿದರು. ಸಭೆ ಮುಗಿಯುವ ಹಂತಕ್ಕೆ ಬಂದರೂ ಅಧಿಕಾರಿಗಳು ಬರಲಿಲ್ಲ. ಆಗ ಮತ್ತೆ ೧೧೦ ಕೆ.ವಿ. ವಿಚಾರವನ್ನು ವೆಂಕಪ್ಪ ಗೌಡರು ಪ್ರಶ್ನಿಸಿದರು. ಸರಕಾರ ಹಣ ನೀಡಿದೆ ಆದರೂ ಯಾಕೆ ನಿರ್ಲಕ್ಷ್ಯ. ಎಂ.ಎಲ್.ಎ., ಎಂ.ಪಿ.ಯವರನ್ನು ಕರೆದು ಸಭೆ ಮಾಡಿ, ನಮಗೆ ಮಾಹಿತಿ ಕೊಡಿಸಿ ಎಂದು ಆಗ್ರಹಿಸಿದರು. ಆಗ ಅಧ್ಯಕ್ಷೆ ಶಶಿಕಲಾರವರು ಈ ಕುರಿತು ಈಗಾಗಲೇ ನಾನು ಶಾಸಕರ ಜತೆ ಮಾತನಾಡಿದ್ದು, ಅವರು ಸಭೆಗೆ ಬರುವುದಾಗಿ ಒಪ್ಪಿದ್ದಾರೆ. ಮುಂದಿನ ಸಭೆಗೆ ಅವರನ್ನು ಬರುವಂತೆ ಕೇಳುತ್ತೇವೆ ಎಂದು ಹೇಳಿದರಲ್ಲದೆ, ಸಬಂಧಿಸಿದ ಅಧಿಕಾರಿಗಳನ್ನು ಕರೆಯುತ್ತೇವೆ ಎಂದು ಭರವಸೆ ನೀಡಿದ ಮೇರೆಗೆ ಸಭೆ ಮುಂದುವರಿಯಿತು. ವಿಪಕ್ಷ ಸದಸ್ಯರು ಕೂಡಾ ವಿದ್ಯುತ್ ಸಮಸ್ಯೆ ಕುರಿತು ಧ್ವನಿಗೂಡಿಸಿದರು.










