ಬೆಳ್ಳಾರೆ – ಅಯ್ಯನಕಟ್ಟೆ – ಚೊಕ್ಕಾಡಿ ರಸ್ತೆ ಇಕ್ಕೆಲಗಳು ಸಂಪೂರ್ಣ ಹಾನಿ

0

ಬಸ್ಸು ಸಂಚಾರ ಸ್ಥಗಿತ !

ಬೊಳ್ಳೂರುರಿಂದ ಹೋರಾಟದ ಎಚ್ಚರಿಕೆ

ಬೆಳ್ಳಾರೆ – ಅಯ್ಯನಕಟ್ಟೆ – ಚೊಕ್ಕಾಡಿ ರಸ್ತೆ ಮಾರ್ಗವಾಗಿ ಅಳವಡಿಸಲಾಗುತ್ತಿರುವ 33 ಕೆ. ವಿ. ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಪೈಪ್ ಅಳವಡಿಕೆ ಕಾಮಗಾರಿಯಿಂದಾಗಿ ಖಾಸಗಿ ವಾಹನ ಮತ್ತು ಬಸ್ಸು ಸಂಚಾರ ಸ್ಥಗಿತಗೊಂಡಿದ್ದು ಇದನ್ನು ತಕ್ಷಣ ಸರಿಪಡಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ನಾಯಕ ರಾಧಾಕೃಷ್ಣ ಬೊಳ್ಳೂರು ಎಚ್ಚರಿಕೆ ನೀಡಿದ್ದಾರೆ.

ಸುಳ್ಯಕ್ಕೆ ಬಹು ಬೇಡಿಕೆಯ 110 ಕೆ ವಿ ಹಾಗೂ ಬೆಳ್ಳಾರೆ ಮಾರ್ಗವಾಗಿ ಸುಳ್ಯಕ್ಕೆ 33 ಕೆ ವಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ ಹಾಗೂ ಬಹು ಗ್ರಾಮ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದು ಇದರ ಫಲವಾಗಿ ರಸ್ತೆಯ ಇಕ್ಕೆಲಗಳಲ್ಲಿ ಟ್ರೆಂಚ್ ಅಗೆಯುವ ಮೂಲಕ ಕೇಬಲ್ ಮತ್ತು ಪೈಪ್ ಲೈನ್ ಕಾಮಗಾರಿ ನಡೆಸಲಾಗುತ್ತಿದೆ. ಇದರ ಪರಿಣಾಮವಾಗಿ ಕಾಂಕ್ರೀಟ್ , ಟಾರ್ ರಸ್ತೆಗಳು ಕೆಲ ಕಡೆಗಳಲ್ಲಿ ತುಂಡರಿಸಲಾಗಿದೆ. ಅಲ್ಲದೇ ಎರಡು ಕಡೆಗಳಲ್ಲಿ ಟ್ರೆಂಚ್ ನಿರ್ಮಾಣದ ಹಿನ್ನೆಲೆಯಲ್ಲಿ ಬಸ್ಸುಗಳ ಓಡಾಟವು ಇದೀಗ ಈ ಮಾರ್ಗದಲ್ಲಿ ಕಡಿತವಾಗಿದೆ . ಈ ಹಿಂದೆ ನಮ್ಮ ನೇತೃತ್ವದಲ್ಲಿ ಗ್ರಾಮಸ್ಥರು ಬಹುಗ್ರಾಮ ಕುಡಿಯುವ ನೀರಿನ ಯೋಜನಾ ನಿರ್ದೇಶಕ ಶ್ರೀನಿವಾಸ್ ಕುಲಕರ್ಣಿ ಹಾಗೂ ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಿ 50% 500 ಮೀಟರ್ ಟ್ರೆಂಚ್ ಆದಾಗ ಕೇಬಲ್ ಅಳವಡಿಕೆ ಮಾಡಿ ಎಂದು ಸೂಚಿಸಿದ್ದೆವು. ಇದು ಕೇವಲ ಕೆಲ ದಿನಗಳವರೆಗೆ ಸಾಗಿತ್ತು. ಮತ್ತೆ ಗುತ್ತಿಗೆದಾರರು ತಮ್ಮ ವರಸೆಯಲ್ಲೆ ಕೆಲಸಗಳನ್ನು ಮಾಡುತ್ತಿದ್ದು ಸ್ಥಳೀಯ ಅಧಿಕಾರಿಗಳ ಮಾತುಗಳನ್ನು ಗಣನೆಗೆ ಪಡೆಯದೇ ಸ್ಥಳೀಯ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಉಡಾಫೆಯ ಉತ್ತರಗಳನ್ನು ನೀಡುತ್ತಾರೆ. ಸ್ವತಃ ಸುಳ್ಯ ಮೆಸ್ಕಾಂ ಎಇಇ ಹರೀಶ್ ನಾಯ್ಕ್ ರವರ ಗ್ರಾಮವು ಇದಾಗಿದ್ದು ಈ ರೀತಿಯ ತೊಂದರೆಗಳಾದಾಗ ಅವರು ಅಸಹಾಯಕರಾಗಿ ಇದ್ದಾರೆ. ಇದಕ್ಕೆ ಸರಕಾರ ಹಾಗೂ ಜನಪ್ರತಿನಿಧಿಗಳು ಕಾರಣ. ತಕ್ಷಣವೇ ಸರಕಾರಿ ಬಸ್ಸುಗಳ ಹಾಗೂ ಖಾಸಗಿ ವಾಹನಗಳ ಸಂಚಾರ ಯಥಾಸ್ಥಿತಿಗೆ ಮರಳಬೇಕು ಹಾಗೂ ಕಾಮಗಾರಿ ಸಮರ್ಪಕವಾಗಿ ನಡೆಸಬೇಕು. ಇಲ್ಲದಿದ್ದರೆ ಹೋರಾಟದ ದಾರಿ ಅನಿವಾರ್ಯವಾಗಿದೆ ಎಂದು ರಾಧಾಕೃಷ್ಣ ಬೊಳ್ಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.