ಸುಳ್ಯ ನಗರ ಪಂಚಾಯತ್ ಸಭೆಯಲ್ಲಿ ಹೈಡ್ರಾಮ

0

ಒಂದೇ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ

ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರುಗಳೇ ಪರಸ್ಪರ ಮಾತಿನ ಚಕಮಕಿ ನಡೆಸಿದ ಘಟನೆ ಇಂದು ನಡೆದಿದೆ.

ಸುಳ್ಯ ನಗರದ ರಸ್ತೆ ಅವ್ಯವಸ್ಥೆಯ ಬಗ್ಗೆ ಚರ್ಚೆಗಳು ನಡೆದಾಗ ನಾಮ ನಿರ್ದೇಶಕ ಸದಸ್ಯ ಸಿದ್ದೀಕ್ ಕೊಕ್ಕೊರವರು ಸುಳ್ಯ ನಗರದ ಮುಖ್ಯ ಪೇಟೆಯ ರಸ್ತೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಪೈಪ್ ಅಳವಡಿಸಲು ತೆಗೆದ ಗುಂಡಿಗಳನ್ನು ಸಂಭಂದ ಪಟ್ಟವರು ಸರಿಯಾಗಿ ಮುಚ್ಚದೆ ಇರುವ ಕಾರಣ ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ ಕೂಡಲೇ ಸರಿಪಡಿಸಿ ಕೊಡಿ ಎಂದು ಸಭಾಧ್ಯಕ್ಷರಲ್ಲಿ ಹೇಳುತ್ತಿದ್ದರು.

ಈ ವೇಳೆ ಸದಸ್ಯರಾದ ವೆಂಕಪ್ಪ ಗೌಡರು ಎದ್ದು ನಿಂತು, ಅದು ನಮ್ಮ ವಾರ್ಡ್‌ಗೆ ಬರುತ್ತೆ. ಅದರ ಬಗ್ಗೆ ನಾವು ಮಾತಾಡುತ್ತಿದ್ದೇವೆ. ಆದ್ದರಿಂದ ನೀವು ನಮ್ಮ ವಾರ್ಡಿನ ಸಮಸ್ಯೆ ಬಗ್ಗೆ ಮಾತಾಡಬೇಡಿ ಎಂದು ಹೇಳಿದರು.


ಇದಕ್ಕೆ ಸಿದ್ದೀಕ್ ರವರು ನಗರ ಸಮಸ್ಯೆ ಎಲ್ಲರ ಸಮಸ್ಯೆ. ಅದನ್ನು ಕೇಳಬೇಡಿ, ಇದನ್ನು ಕೇಳಬೇಡಿ ಎಂದು ನೀವು ನಮ್ಮ ಬಾಯಿ ಮುಚ್ಚಿಸಲು ಬರಬೇಡಿ. ಇಲ್ಲಿ ಯಾರು ಯಾರಿಗೂ ವಾರ್ಡ್‌ಗಳನ್ನು ಬರೆದು ಕೊಡಲಿಲ್ಲ ಎಂದು ಹೇಳಿದರು.


ಈ ಮಾತಿಗೆ ಇನ್ನೂ ಕೋಪಗೊಂಡ ವೆಂಕಪ್ಪ ಗೌಡರು ನೀನು ನನಗೆ ಉತ್ತರಿಸಲು ಆಗಲಿಲ್ಲ. ಮೊನ್ನೆ ಮೊನ್ನೆಯ ಮಳೆಗೆ ಹುಟ್ಟಿ ಬಂದವರು ನೀವು. ನಾವು ಬಹಳ ವರ್ಷದಿಂದ ಈ ಪಂಚಾಯತ್‌ನಲ್ಲಿ ಇದ್ದೇವೆ ಎಂದು ಮಾತಿಗೆ ಮಾತು ಬೆಳೆಸಿದರು.


ಬಳಿಕವೂ ಸಿದ್ದೀಕ್‌ರವರು ನಾಮನಿರ್ದೇಶಕ ಸದಸ್ಯನಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಗರದ ಅಭಿವೃದ್ಧಿ ಇನ್ನಿತರ ಚರ್ಚೆಗಳ ಬಗ್ಗೆ ಮಾತನಾಡಲು ಅವಕಾಶ ನನಗೂ ಇದೆ. ಆದ್ದರಿಂದ ನಿಮ್ಮ ಕೆಲಸ ಏನು ಅದನ್ನು ನೀವು ಮಾಡಿ ನಾವು ನಮ್ಮ ಕೆಲಸವನ್ನು ಮಾಡುತ್ತೇವೆ ಎಂದು ಮರು ಉತ್ತರ ನೀಡಿದಾಗ ಮತ್ತೆ ಮಾತಿನ ಚಕಮಕಿ ಬೆಳೆದಾಗ ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆಯವರು ಮಧ್ಯಪ್ರವೇಶಿಸಿ ಪರಸ್ಪರ ನೀವು ನೀವೇ ಕಚ್ಚಾಡುವುದನ್ನು ನಿಲ್ಲಿಸಿ ಸಭೆಯನ್ನು ನಡೆಸಲು ಅನುಮತಿ ಮಾಡಿಕೊಡಬೇಕೆಂದು ಸೂಚಿಸಿದ ಮೇರೆಗೆ ಅಲ್ಲಿಗೆ ತಣ್ಣಗಾದ ಇಬ್ಬರು ಸದಸ್ಯರು ತಮ್ಮ ತಮ್ಮ ಆಸನದಲ್ಲಿ ಕುಳಿತುಕೊಂಡ ಬಳಿಕ ಚರ್ಚೆ ನಡೆಯಲು ಆರಂಭಿಸಿದವು.


ಇದೇ ರೀತಿ ಸಭೆಯ ಆರಂಭದಲ್ಲಿಯೂ ಕೂಡ ಸದಸ್ಯ ಉಮ್ಮರ್ ಹಾಗೂ ವೆಂಕಪ್ಪ ಗೌಡರ ನಡುವೆ ಇದೇ ರೀತಿ ನಗರದ ರಸ್ತೆ ಸಮಸ್ಯೆ ಬಗ್ಗೆ ಉಮ್ಮರ್‌ರವರು ಮಾತನಾಡುವಾಗ ಅವರಿಬ್ಬರ ನಡುವೆಯೂ ಮಾತಿನ ಚಕಮಕಿ ನಡೆದು ಉಮ್ಮರ್ ರವರು ನಾನು ಕಾಂಗ್ರೆಸ್ ಪಕ್ಷದ ಸದಸ್ಯನಲ್ಲ, ನಾನು ಇಂಡಿಪೆಂಡೆಂಟ್ ಅಭ್ಯರ್ಥಿಯಾಗಿ ಈ ಪಂಚಾಯತ್ ಗೆ ಬಂದವನು ಎಂಬ ಮಾತಿನವರೆಗೆ ಪರಸ್ಪರ ಮಾತಿನ ಸಮರ ನಡೆದಿತ್ತು.