ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಸಿಬ್ಬಂದಿ ವರ್ಗದವರಿಗೆ ತರಬೇತಿ ಕಾರ್ಯಾಗಾರ

0

ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಯ ವತಿಯಿಂದ ಸಿಬ್ಬಂದಿಗಳಿಗೆ ಅಗ್ನಿ ನಿವಾರಣೆ ಕ್ರಮ ಮತ್ತು ಅಗ್ನಿಶಮನದ ಬಗ್ಗೆ ತಮ್ಮ ಇಲಾಖೆಯಿಂದ ಒಂದು ದಿನದ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಾಗಾರ ಜೂ. 12 ರಂದು ನಡೆಯಿತು.

ತರಬೇತಿ ಕಾರ್ಯಾಗಾರದಲ್ಲಿ ಅಗ್ನಿಶಾಮಕ ಇಲಾಖೆಯ ಮಾಹಿತಿ, ಬೇರೆ ಬೇರೆ ವಿಧಗಳ ಅಗ್ನಿ ಅವಘಡಗಳು, ನಿವಾರಣಾ ಹಾಗೂ ಮುನ್ನೆಚ್ಚರಿಕಾ ಕ್ರಮ, ಪ್ರಥಮ ಚಿಕಿತ್ಸಾ ವಿಧಾನ, ಅಗ್ನಿ ಅವಘಡದ ತುರ್ತು ಪರಿಸ್ಥಿತಿಯಲ್ಲಿ ಪಾಲಿಸಬೇಕಾದ ಕ್ರಮಗಳು ಮುಂತಾದವುಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಅವಘಡಗಳನ್ನು ನಿಯಂತ್ರಿಸುವ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ಮಾಡಿಕೊಟ್ಟರು.

ಮನೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಅಡುಗೆ ಅನಿಲ ಸಿಲಿಂಡರ್‌ ಮತ್ತು ಅನಿಲ ಗೀಜರ್‌ಗಳ ಬಳಕೆ, ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಮೊಬೈಲ್ ಚಾರ್ಜರ್, ಕಟ್ಟಡಗಳಲ್ಲಿ ಬೆಂಕಿ ಅವಘಡ, ಸಿ.ಎನ್.ಜಿ ವಾಹನಗಳು ಹಾಗೂ ಇನ್ನಿತರ ಅಗ್ನಿ ಅವಘಡಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಮತ್ತು ಅಪಾಯದಿಂದ ಪಾರಾಗಲು ಬೇಕಾದ ಸೂಕ್ತ ಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿಗಳನ್ನು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ಕುಮಾರ್, ಪಾಂಡೇಶ್ವರ- ಮಂಗಳೂರು ಅಗ್ನಿಶಾಮಕ ಇಲಾಖೆಯ ಪ್ರವೀಣ್ ಕೆ. ಎನ್., ಸುಳ್ಯದ ಪ್ರಮುಖ ಅಗ್ನಿಶಾಮಕ ಅಧಿಕಾರಿ ನಾಗರಾಜ್ ಪೂಜಾರಿ ನೀಡಿದರು.

ಕಾರ್ಯಕ್ರಮದಲ್ಲಿ ಸುಳ್ಯ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳು, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ., ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ‌. ಹರ್ಷಿತಾ ಎಂ., ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಭಾಗಿಯಾಗಿ ತರಬೇತಿ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಂಡರು.