`ನಿಧಿ ಫುಡ್ಸ್’ನ ರಾಧಾಕೃಷ್ಣ ಇಟ್ಟಿಗುಂಡಿಯವರಿಗೆ ರಾಷ್ಟ್ರೀಯ ಪ್ರಶಸ್ತಿ
ಹಲಸಿನ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ರಾಜ್ಯ ಮತ್ತು ದೇಶಾದ್ಯಂತ ಮಾರುಕಟ್ಟೆ ಜಾಲವನ್ನು ಹೊಂದಿರುವ, ಪುತ್ತೂರಿನ ಮುಕ್ವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ನಿಧಿ ಫುಡ್ಸ್’ನ ಮಾಲಕ ನಿತ್ಯ ಚಪಾತಿಯ ರಾಧಾಕೃಷ್ಣ ಇಟ್ಟಿಗುಂಡಿಯವರಿಗೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ‘ಇನೋವೇಟಿವ್ ಎಂಟರ್ ಪ್ರೆನ್ಯೂರ್-ಅವಾರ್ಡ್ ಆಫ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ.
ಜೂ.8ರಂದು ಬೆಂಗಳೂರಿನ ಹೆಸರಘಟ್ಟದಲ್ಲಿ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ದಡಿಯಲ್ಲಿ ಆಯೋಜನೆಗೊಂಡಿದ್ದ ರಾಷ್ಟ್ರೀಯ ಆಹಾರ ಮತ್ತು ಕೃಷಿ ಸಮ್ಮೇಳನದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ದೇಶದ ೭೦೦ ಜಿಲ್ಲೆಗಳ ೨,೦೦೦ಕ್ಕೂ ಅಧಿಕ ವಿಜ್ಞಾನಿಗಳು ಮತ್ತು ರೈತರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.















ರಾಧಾಕೃಷ್ಣ ಇಟ್ಟಿಗುಂಡಿಯವರು ಹಲಸಿನ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಹೆಚ್ಚು ಒತ್ತುಕೊಟ್ಟು ರಾಷ್ಟ್ರಾದ್ಯಂತ ಮಾರುಕಟ್ಟೆ ಜಾಲವನ್ನು ವಿಸ್ತರಿಸುವ ಮುಂದಿನ ಗುರಿ ಹೊಂದಿದ್ದಾರೆ. ಈಗಾಗಲೇ ಪುತ್ತೂರಿನಲ್ಲಿ ಸುಮಾರು ಐದಾರು ವರ್ಷಗಳಿಂದ ಹಲಸಿನ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ದೇಶದಾದ್ಯಂತ ಇವರ ಉತ್ಪನ್ನಗಳು ಮಾರಾಟವಾಗುತ್ತಿವೆ. ಉದ್ಯಮ ಕ್ಷೇತ್ರದಲ್ಲಿನ ಇವರ ಈ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
‘ನಿತ್ಯ’ ಬ್ಯಾಂಡ್ ಮೂಲಕ ಜನಪ್ರಿಯ: ರಾಧಾಕೃಷ್ಣರು ಈಗಾಗಲೇ ನಿತ್ಯ ಬ್ಯಾಂಡ್ ಮೂಲಕ ಜನಪ್ರಿಯವಾಗಿರುವ ಸಿರಿಧಾನ್ಯಗಳ ವಿವಿಧ ಉತ್ಪನ್ನಗಳು, ಚಪಾತಿ, ಕುಕ್ಕೀಸ್, ಸಾವಯವ ಬೆಲ್ಲದ ಪುಡಿಗಳನ್ನು ಮಾರುಕಟ್ಟೆಯಲ್ಲಿ ವಿತರಿಸುತ್ತಿದ್ದು, ಬೃಹತ್ ಗ್ರಾಹಕ ಜಾಲವನ್ನು ಹೊಂದಿದ್ದಾರೆ. ಇದೀಗ ಹಲಸಿನ ಬೀಜಗಳ ಉತ್ಪನ್ನಗಳನ್ನು ಸಂಶೋಧಿಸಿ
ನೂತನ ಹಲಸಿನ ಬೀಜದ ಕುಕ್ಕೀಸ್, ಬಿಸ್ಕಟ್‌ಗಳನ್ನು ಉತ್ಪಾದಿಸಿದ್ದು ಮುಂದೆ ಇನ್ನೂ ಹಲವು ಉತ್ಪನ್ನಗಳನ್ನು ತರಲಿದ್ದಾರೆ.
ರೈತರಿಗೆ ಆರ್ಥಿಕ ಬಲವರ್ಧನೆ: ಪ್ರಸ್ತುತ ಹಲಸಿನ ಹಣ್ಣಿನ ಸೊಳೆಗಳನ್ನು ತಿಂದು ಬೀಜಗಳನ್ನು ಅರೆ ಉಪಯೋಗಿಸುವ ಇಲ್ಲವೇ ಬಿಸಾಡುವ ಪ್ರವೃತ್ತಿ ಇರುವುದು
ಸರ್ವೇ ಸಾಮಾನ್ಯವಾಗಿದೆ. ಇದೀಗ ಹಲಸಿನ ಬೀಜದ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಹಲಸಿನ ಬೀಜಗಳಿಗೂ ಉತ್ತಮ ಬೆಲೆ ಬರಲಿದೆ. ಆ ಮೂಲಕ ರೈತರ ಆದಾಯ ಮೂಲವೂ ವಿಸ್ತಾರಗೊಳ್ಳುವ ಸಾಧ್ಯತೆಯಿದೆ. ರಾಧಾಕೃಷ್ಣ ಇಟ್ಟಿಗುಂಡಿಯವರುಮೂಲತಃ ಅಮರಪಡ್ನೂರು ಗ್ರಾಮದ ಇಟ್ಟಿಗುಂಡಿ ಶೇಷಪ್ಪ ಗೌಡ ಮತ್ತು ವೀರಮ್ಮ ದಂಪತಿಯ ಪುತ್ರ.










