ದ.ಕ.ಜಿಲ್ಲೆಯಲ್ಲಿ ಅವಕಾಶಗಳನ್ನು ಸೃಷ್ಠಿಸುವ – ಸಾಧ್ಯತೆಗಳನ್ನು ಅನ್ವೇಷಣೆಗೊಳಿಸುವುದೇ ಯುವ ವಿಕಾಸ್ ಸಂಕಲ್ಪ : ಕ್ಯಾ.ಚೌಟ
ಸುಂದರ ಭಾರತ್ ಪ್ರತಿಷ್ಠಾನ ನೇತೃತ್ವದಲ್ಲಿ ಜಿಲ್ಲೆಯ115 ಸರಕಾರಿ ಶಾಲೆಗಳಿಗೆ ನೋಟ್ ಬುಕ್ ವಿತರಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಹೊಸ ಅವಕಾಶಗಳನ್ನು ಸೃಷ್ಠಿಸುವ ಮತ್ತು ಸಾಧ್ಯತೆಗಳನ್ನು ಅನ್ವೇಷಣೆಗೊಳಿಸುವುದೇ ಯುವ ವಿಕಾಸ್ ಸಂಕಲ್ಪ ಎಂದು ದ.ಕ. ಜಿಲ್ಲಾ ಲೋಕಸಭಾ ಸದಸ್ಯರಾದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಜೂ.16ರಂದು ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟರ ಕಚೇರಿ ನೇತೃತ್ವದಲ್ಲಿ ನಡೆದ ಯುವ ವಿಕಾಸ್ ಮಾಹಿತಿ ಕಾರ್ಯಾಗಾರ ಹಾಗೂ 115 ಸರಕಾರಿ ಶಾಲೆಗಳಿಗೆ ಸುಂದರ ಭಾರತ್ ಪ್ರತಿಷ್ಠಾನ ಬೆಂಗಳೂರು ಇವರು ನೀಡುವ ನೋಟ್ ಬುಕ್ ವಿತರಿಸಿ ಅವರು ಮಾತನಾಡಿದರು.

“ದ.ಕ. ಜಿಲ್ಲೆಯ ಯುವ ಶಕ್ತಿಗಳನ್ನು ಜಾಗೃತಗೊಳಿಸುವ, ಅವರ ಭವಿಷ್ಯಕ್ಕೆ ಶಕ್ತಿ ಕೊಡುವ ನಿಟ್ಟಿನಲ್ಲಿ ಯುವ ವಿಕಾಸ್ ಕಾರ್ಯಕ್ರಮವನ್ನು ಹಮ್ಕಿಕೊಳ್ಳಲಾಗಿದ್ದು, ಇದು ನಮ್ಮ ಮೊದಲ ಪ್ರಯತ್ನ. ನಮ್ಮ ಜಿಲ್ಲೆಯಲ್ಲಿಯೇ ಯುವಕರಿಗೆ ಉದ್ಯೋಗ ಅವಕಾಶವನ್ನು ತಿಳಿಸಿಕೊಡುವ, ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕೊಡುವ ಪ್ರಯತ್ನದ ಹೆಜ್ಜೆ ನಮ್ಮದು. ಅದಕ್ಕಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಅವರಿಗೆ ಕೊಡಿಸುವ ಕೆಲಸ ಮಾಡುತ್ತೇವೆ. ಯುವ ಜನರು ಭಯಮುಕ್ತರಾಗಿ ಬದುಕು ಕಟ್ಟಿಕೊಳ್ಳಲು, ಸ್ವತಂತ್ರವಾಗಿ ಯೋಚಿಸುವ ವಾತಾವರಣ ಸೃಷ್ಟಿಸಲಾಗುವುದು ಎಂದು ಚೌಟರು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಶುಭಹಾರೈಸಿದರು.















ಸುಂದರ ಭಾರತ್ ಪ್ರತಿಷ್ಠನಾ ಬೆಂಗಳೂರು ಇದರ ವತಿಯಿಂದ ಜಿಲ್ಲೆಯ 115 ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ 12 ಸಾವಿರ ಪುಸ್ತಕವನ್ನು ನೀಡಲಾಗುತ್ತಿದ್ದು, ತಾಲೂಕು ಪಂಚಾಯತ್ ನಲ್ಲಿ ಸಾಂಕೇತಿಕವಾಗಿ ಕೆಲವು ಶಾಲೆಗಳಿಗೆ ವಿತರಿಸಲಾಯಿತು.

ಸುಂದರ ಭಾರತ ಪ್ರತಿಷ್ಠಾನವನ್ನು ಸುಳ್ಯಕ್ಕೆ ಪರಿಚಯಿಸಿದರೆಂಬ ಕಾರಣಕ್ಕೆ ಕೋಲ್ಚಾರು ಶಾಲಾ ಶಿಕ್ಷಕಿ ಜಲಜಾಕ್ಷಿ ಕೆ.ಟಿ. ಯವರನ್ನು ಗೌರವಿಸಲಾಯಿತು.
ಪುಸ್ತಕ ಸ್ವೀಕರಿಸಿದವರ ಪರವಾಗಿ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಸಹಕರಿಸಿದ ಸುಳ್ಯ ಸರಕಾರಿ ಪ್ರೌಢಶಾಲೆಯ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಆರಂಭದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ ನಡೆಯಿತು. ಬಳಿಕ ಅದೇ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದ ಪಾತ್ರಾಭಿನಯದ ಪ್ರದರ್ಶನ ನಡೆಯಿತು.
ಬೆಂಗಳೂರು ಸುಂದರ ಭಾರತ ಪ್ರತಿಷ್ಠಾನದ ಪ್ರತಾಪ್ ರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಕೋಲ್ಚಾರು ಶಾಲಾ ಶಿಕ್ಷಕಿ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.










