ಸಹಕಾರಿ ಕ್ಷೇತ್ರದಿಂದ ಜನೋಪಯೋಗಿ ಸೇವೆ : ಡಾ| ಎಂ.ಎನ್.ಆರ್.
ಸಹಕಾರಿ ಕ್ಷೇತ್ರವು ಜನರ ಬಳಿ ತೆರಳಿ ಸಮರ್ಪಕ ಸೇವೆ ನೀಡುವುದರಿಂದ, ರಾಷ್ಟ್ರೀಕೃತ ಬ್ಯಾಂಕ್‌ಗಿಂತ ವಿಭಿನ್ನವಾಗಿದೆ. ಗ್ರಾಮಾಂತರ ಪ್ರದೇಶದ ಜನತೆಗೆ ನೆರವಾಗುವ ಉದ್ದೇಶದಿಂದ, ಇದೀಗ ಕುಂಟಾಡಿಯಲ್ಲಿ ವಿಸ್ತರಣಾ ಕೌಂಟರ್ ತೆರೆಯಲಾಗಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಕುಂಟಾಡಿ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಕಾರ್ಕಳ ಶಾಖೆಯ ವಿಸ್ತರಣಾ ಕೌಂಟರ್ ಉದ್ಘಾಟಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಸಹಕಾರಿ ಸಂಸ್ಥೆಗಳಿಗೂ ಬ್ಯಾಂಕ್ ಎಂಬ ಪದ ಬಳಕೆ ಮಾಡುವಂತೆ ಹಾಗೂ ಸರಕಾರದ ಹಣ ವಿತರಣೆಯಂತಹ ಕಾರ್ಯವನ್ನು ಈ ಸಹಕಾರಿ ಸಂಸ್ಥೆಯ ಮೂಲಕ ನಡೆಸುವಂತೆ ಮನವಿ ಮಾಡಿದ್ದು, ಈ ಬಗ್ಗೆ ಕೇಂದ್ರ ಸರಕಾರದ ಜತೆ ಮಾತುಕತೆ ಕೂಡಾ ನಡೆಸಲಾಗುತ್ತಿದೆ ಎಂದರು.















ಕುಂಟಾಡಿ ಶ್ರೀ ರಕ್ತೇಶ್ವರಿ ದೈವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ. ಪ್ರಥ್ವಿರಾಜ್ ಬಿ. ರೈ ತಿರ್ತಬೆಟ್ಟು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮೂರಿನಲ್ಲಿ ಹುಟ್ಟಿದವರು ಐ.ಎ.ಎಸ್, ಕೆ.ಎ.ಎಸ್ ಹಾಗೂ ನ್ಯಾಯಾಧೀಶರು ಆಗಿರುವುದು ಈ ಕುಂಟಾಡಿಯ ಹೆಮ್ಮೆ. ಇದೀಗ ಬ್ಯಾಂಕಿಗ್ ವ್ಯವಹಾರಕ್ಕೂ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಿ ಕೊಡಲಾಗಿದೆ ಎಂದರು.
ಶ್ರೀ ಕೆ. ಜೈರಾಜ್ ಬಿ. ರೈ – ವಿಷನ್ ೨೦೩೦
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈ ಮಾತನಾಡಿ, ೨೦೩೦ರ ಸಾಲಿಗೆ ನಮ್ಮ ಸಹಕಾರಿ ಸಂಸ್ಥೆಯು ೨ ಸಾವಿರ ಕೋಟಿ ರೂ. ವ್ಯವಹಾರ, ೨೦ ರಿಂದ ೨೫ ಕೋಟಿ ರೂ. ಲಾಭದ ಜೊತೆಗೆ ೩೧ ಶಾಖೆಯಿಂದ ೪೦ ಶಾಖೆಯನ್ನು ಹೊಂದುವ ಗುರಿ ಇರಿಸಿಕೊಂಡಿದ್ದೇವೆ. ಪ್ರಸ್ತುತ ನನ್ನ ಹುಟ್ಟೂರಿನ ಜನತೆಗೆ ನೆರವಾಗುವ ರೀತಿಯಲ್ಲಿ ಈ ವಿಸ್ತರಣಾ ಕೌಂಟರ್ ತೆರೆಯಲಾಗಿದೆ. ಆರ್ಥಿಕ ಚಟುವಟಿಕೆ ಜತೆಗೆ ಈ ಗ್ರಾಮ ಸರ್ವಾಂಗೀಣ ಅಭಿವೃದ್ಧಿ ಸಾಧಿಸಬೇಕು ಎನ್ನುವುದು ಉದ್ದೇಶ ಎಂದರು.
ಡಾ| ಎಂ.ಎನ್.ಆರ್ ರವರಿಗೆ ಕುಂಟಾಡಿಯ ಗ್ರಾಮಸ್ಥರಿಂದ ಸನ್ಮಾನ :-
ಕಾರ್ಕಳದವರೇ ಆದ, ಸಹಕಾರ ರಂಗದ ಅಪೂರ್ವ ಸಾಧಕ ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್‌ರವರನ್ನು ಕುಂಟಾಡಿ ಗ್ರಾಮಸ್ಥರು ಹಾಗೂ ಶ್ರೀ ರಕ್ತೇಶ್ವರೀ ದೈವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಅಭಿಮಾನಪೂರ್ವಕವಾಗಿ ಅಭಿನಂದನೆಯನ್ನು ಸಲ್ಲಿಸಿ ಸನ್ಮಾನಿಸಲಾಯಿತು.
ಕುಂಟಾಡಿ ಶ್ರೀ ರಕ್ತೇಶ್ವರಿ ದೈವಸ್ಥಾನದ ಪ್ರಧಾನ ಅರ್ಚಕ ರಂಗನಾಥ ಭಟ್, ನವೋದಯ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಸುನಿಲ್ ಕುಮಾರ್ ಜೈನ್, ಊರಿನ ಪ್ರಮುಖರಾದ ಪ್ರವೀಣ್ ಪಾಂಡಿ ಕುರ್ಮಳಿಗುತ್ತು, ಮೋಹನ್‌ದಾಸ್ ಹೆಗ್ಡೆ ಅಡಪ್ಪಗುತ್ತು, ಸಂಪತ್ ಹೆಗ್ಡೆ ಬಂಜಿನಡ್ಕಗುತ್ತು, ಸುಭಾಶ್ಚಂದ್ರ ಹೆಗ್ಡೆ ಮಾಭಿಗುತ್ತು, ಚಂದ್ರಯ್ಯ ಬೋಂಟ್ರ ಗಡಿ ಪ್ರಧಾನರು, ಬೆರ್ಮನಬೆಟ್ಟು ಬರ್ಕೆ, ಜಯ ಪೂಜಾರಿ ಕುಲಬರ್ಕೆ, ಅಣ್ಣಿಬೋಂಟ್ರ ಪರಾಡಿ ಬರ್ಕೆ, ಯೋಗೀಶ್ ಬೋಂಟ್ರ ಕಲ್ಲಾಪು ಬರ್ಕೆ, ಸಂಘದ ನಿರ್ದೇಶಕರಾದ ರವೀಂದ್ರನಾಥ ಜಿ. ಹೆಗ್ಡೆ, ಕುಂಬ್ರ ದಯಾಕರ ಆಳ್ವ, ಪಿ.ಬಿ. ದಿವಾಕರ ರೈ, ಶಾಖಾ ವ್ಯವಸ್ಥಾಪಕ ನವೀನ್ ಕುಮಾರ್ ಹಾಗೂ ಸಂಘದ ಮಹಾಪ್ರಬಂಧಕರಾದ ಗಣೇಶ್ ಜಿ.ಕೆ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಂಟಾಡಿ ಕೃಷ್ಣರಾಜ್ ರೈ ಸ್ವಾಗತಿಸಿದರು. ಪತ್ರಕರ್ತ ನವೀನ್ ಸಾಲಿಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ನಿರ್ದೇಶಕರಾದ ಪಿ.ಬಿ. ದಿವಾಕರ್ ರೈ ವಂದಿಸಿದರು.










