ಕಲ್ಲಪ್ಪಳ್ಳಿ : ಪ್ರಾಕೃತಿಕ ವಿಕೋಪ ಭೀತಿ – ರಾಜ್ಯ ಸರಕಾರದಿಂದ ಹತ್ತು ಕುಟುಂಬಗಳಿಗೆ ನೂತನ ಮನೆ ನಿರ್ಮಾಣ – ಕೀ ಹಸ್ತಾಂತರ

0

ಪ್ರಾಕೃತಿಕ ವಿಕೋಪದ ಭೀತಿಯಿಂದ ಬವಣೆ ಅನುಭವಿಸುತ್ತಿದ್ದ ಕಲ್ಲಪಳ್ಳಿ ಬಳಿಯ ಕಮ್ಮಾಡಿಯ ಹತ್ತು ಕುಟುಂಬಗಳಿಗೆ ಶಾಶ್ವತ ಸೂರು ನಿರ್ಮಾಣ ಕಾರ್ಯ ಕೇರಳ ರಾಜ್ಯ ಸರಕಾರದಿಂದ ಆಗಿದ್ದು, ಅದರ ಕೀ ಹಸ್ತಾಂತರ ಕಾರ್ಯ ಹಾಗೂ ಅಲ್ಲಿಗೆ ಪರಪ್ಪ ಬ್ಲಾಕ್ ಪಂಚಾಯತ್ ವತಿಯಿಂದ ಮಾಡಿದ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆ ಜೂ.21 ರಂದು ಕಲ್ಲಪಳ್ಳಿಯ ಬಾಟೋಳಿಯಲ್ಲಿ ನಡೆಯಿತು.
ಕೇರಳ ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಸಚಿವರಾದ ಓ.ಆರ್.ಕೇಳು ಕೀ ಹಸ್ತಾಂತರಿಸಿದರೆ, ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಉದ್ಘಾಟನೆ ನೆರವೇರಿಸಿದರು.

ಪನತ್ತಡಿ ಗ್ರಾಮ ಪಂಚಾಯತ್ ನ ಆರನೇ ವಾರ್ಡ್‌ ನಲ್ಲಿರುವ ಕಮ್ಮಾಡಿ ನೈಸರ್ಗಿಕ ವಿಕೋಪ ಪೀಡಿತ ಪ್ರದೇಶವಾಗಿದ್ದು, ಪ್ರತಿ ಮಳೆಗಾಲದಲ್ಲಿ ಇಲ್ಲಿನ ಜೀವನ ಕಷ್ಟಕರವಾಗುತ್ತಿತ್ತು. ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯತು ಈ ಪ್ರದೇಶದ 10 ಪರಿಶಿಷ್ಟ ಪಂಗಡದ ಕುಟುಂಬಗಳನ್ನು ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ಆಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸುತ್ತಿತ್ತು. ಇವರಿಗೆ ಕೇರಳ ರಾಜ್ಯ ಸರ್ಕಾರ ತಲಾ 6 ಸೆಂಟ್ಸ್ ಮನೆ ನಿವೇಶನವನ್ನು ಒದಗಿಸಿದ್ದಲ್ಲದೆ ಮನೆ ನಿರ್ಮಾಣಕ್ಕೆ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯ ವತಿಯಿಂದ ತಲಾ 6 ಲಕ್ಷ ರೂ. ಮಂಜೂರು ಮಾಡಿತು. ಕೇರಳ ರಾಜ್ಯ ಸರ್ಕಾರ ಹಾಗೂ ಪನತ್ತಡಿ ಗ್ರಾಮ ಪಂಚಾಯತು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಫಲವಾಗಿ ಸಂತ್ರಸ್ತ ಕುಟುಂಬಗಳ ಪುನರ್ವಸತಿ ಕಾಮಗಾರಿಯನ್ನು ಪೂರ್ತಿಗೊಳಿಲಾಯಿತು. ಅಲ್ಲದೆ ಪರಪ್ಪ ಬ್ಲಾಕಿನ ವಾರ್ಷಿಕ ಪದ್ದತಿಯಲ್ಲಿ 9,20,000 ರೂಪಾಯಿ ವೆಚ್ಚದಲ್ಲಿ ಹತ್ತು ಕುಟುಂಬಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನ ಮಾಡಲಾಯಿತು.
ಪೂರ್ಣಗೊಂಡಿರುವ ಹತ್ತು ಮನೆಗಳ ಫಲಾನುಭವಿಗಳಿಗೆ ಮನೆಗಳ ಕೀ ಹಸ್ತಾಂತರ ಕಾರ್ಯ ಹಾಗೂ ಕುಡಿಯುವ ನೀರಿನ ಯೋಜನೆಯ ಉದ್ಘಾಟನಾ ಸಮಾರಂಭವನ್ನು ಜೂ. 21ರಂದು ಹಮ್ಮಿಕೊಳ್ಳಲಾಗಿತ್ತು.

ಕಾಞಂಗಾಡ್ ಶಾಸಕ ಹಾಗೂ ಮಾಜಿ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಸರಕಾರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಓ.ಆರ್.ಕೇಳು ಫಲಾನುಭವಿಗಳಿಗೆ ಕೀ ಹಸ್ತಾಂತರ ಮಾಡಿದರು. ಕುಡಿಯುವ ನೀರಿನ ಪದ್ಧತಿಯ ಉದ್ಘಾಟನೆಯನ್ನು ಪರಪ್ಪ ಬ್ಲಾಕಿನ ಅಧ್ಯಕ್ಷೆ ಶ್ರೀಮತಿ ಎಂ.ಲಕ್ಷ್ಮಿ ನೆರವೇರಿಸಿದರು.


ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪ್ರಸನ್ನ ಪ್ರಸಾದ್ ಸ್ವಾಗತಿಸಿದರು. ಟ್ರೈಬಲ್ ಡೆವಲಪ್ ಮೆಂಟ್ ಆಫೀಸರ್ ಮಧುಸೂದನ್ ವರದಿ ಮಂಡಿಸಿದರು. ಕಾಸರಗೋಡು ಎ.ಡಿ.ಎಂ. ಪಿ.ಅಖಿಲ್ , ಉಪಾಧ್ಯಕ್ಷ ಪಿ.ಎಂ.ಕುರಿಯಾಕೋಸ್,
ಪರಪ್ಪ ಬ್ಲಾಕ್ ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಎಂ.ಪದ್ಮಾವತಿ, ಪನತ್ತಡಿ ಗ್ರಾ.ಪಂ. ಅಭಿವೃದ್ಧಿ ಕಾರ್ಯಗಳ ಸ್ಥಾಯೀಸಮಿತಿ ಅಧ್ಯಕ್ಷೆ ಶ್ರೀಮತಿ ಲತಾ ಅರವಿಂದ್, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಸುಪ್ರಿಯಾ ಶಿವದಾಸ್, ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ಹಾಗೂ ಪಂಚಾಯತಿನ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪ್ರತಿನಿಧಿಗಳು ಉಪಸ್ಥಿತರಿದ್ದು ಶುಭಹಾರೈಸಿದರು.


ಕಾರ್ಯಕ್ರಮದ ಸ್ವಾಗತ ಸಮಿತಿಯ ಸಂಚಾಲಕರಾದ ಪನತ್ತಡಿ ಗ್ರಾಮ ಪಂಚಾಯತ್ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ಗೌಡ ಕಲ್ಲಪಳ್ಳಿ ವಂದಿಸಿದರು.
ಸುಸಜ್ಜಿತವಾದ ಗೃಹ ನಿರ್ಮಾಣ ಮಾಡಿಕೊಟ್ಟ ಗುತ್ತಿಗೆದಾರರಾದ ಗಂಗಾಧರ ಹಾಗೂ ಸಹಕರಿಸಿದ ವಿ.ಎಂ.ಜೋನ್ ಮತ್ತು ಶ್ರೀಮತಿ ಲಕ್ಷ್ಮಿ ಬಾಯಿ ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.