ಐಟಿಐಯಲ್ಲೂ ಮುತ್ತು ರತ್ನಗಳಿವೆ ಎಂಬುದು ಇಂದು ಸ್ಪಷ್ಟವಾಗಿದೆ : ಡಾ. ರೇಣುಕಾಪ್ರಸಾದ್ ಕೆ.ವಿ.

ಊರವರನ್ನು ಸೇರಿಸಿಕೊಂಡು ಎಒಎಲ್ಇ ಕಮಿಟಿ ಬಿ ಸಿಇಓ ಡಾ. ಉಜ್ವಲ್ ರ ಮೂಲಕ ಐಟಿಐ ಆಡಳಿತ ಮಂಡಳಿಗೆ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಪ್ರಾಂಶುಪಾಲರಾದ ಚಿದಾನಂದ ಗೌಡ ಮತ್ತು ತಮ್ಮೆಲ್ಲರ ಸಹಕಾರದಿಂದ ಶೇ. 100 ದಾಖಲಾತಿಯಾಗುವಂತೆ ಆಯಿತು. ಐಟಿಐಯಲ್ಲೂ ಮುತ್ತು ರತ್ನಗಳಿವೆ ಎಂಬುದು ಇವತ್ತು ಸ್ಪಷ್ಟವಾಗಿದೆ. ಇನ್ನು ಮುಂದೆ ಇತರ ಸಿಬ್ಬಂದಿಗಳೂ ವಜ್ರ ವೈಡೂರ್ಯಗಳಿವೆ ಎಂಬುದನ್ನು ತೋರಿಸಿಕೊಡಬೇಕು. ಒಂದು ಶಿಕ್ಷಣ ಸಂಸ್ಥೆಯಲ್ಲಿ ಮೆಡಿಕಲ್, ಆಯುರ್ವೇದ, ಡೆಂಟಲ್, ಐಟಿಐ ಹೀಗೆ ಎಲ್ಲಾ ವಿಭಾಗದಲ್ಲೂ ಪಾಟ ಮಾಡಿದವರೆಂದರೆ ಅದು ಭವಾನಿಶಂಕರ ಅಡ್ತಲೆಯವರು. ಅವರ ಮೇಲಿರುವ ನಂಬಿಕೆಯಿಂದ ಅವರನ್ನು ಕಮಿಟಿ ಬಿ ಯ ಆಡಳಿತಾಧಿಕಾರಿಯನ್ನಾಗಿ ನೇಮಿಸಿದ್ದೇನೆ ಎಂದು ಅಕಾಡೆಮಿ ಆಫ್ ಕಮಿಟಿ ಬಿ ಚೇರ್ಮೆನ್ ಡಾ. ರೇಣುಕಾಪ್ರಸಾದ್ ಕೆ.ವಿ ಹೇಳಿದರು. ಅವರು ಜೂ. 30ರಂದು ಕೆವಿಜಿ ಐಪಿಎಸ್ ಆಡಿಟೋರಿಯಂನಲ್ಲಿ ನಡೆದ ಕೆವಿಜಿ ಐಟಿಐಯ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಒಎಲ್ಇ ಕಮಿಟಿ ಬಿ ಕಾರ್ಯದರ್ಶಿ ಡಾ. ಜ್ಯೋತಿ ಆರ್ ಪ್ರಸಾದ್ ಮಾತನಾಡಿ ಮೆಡಿಕಲ್ ಕಾಲೇಜು ಇನ್ಸ್ಪೆಕ್ಷನ್ ಸಂದರ್ಭದಲ್ಲಿ ಫುಡ್ ಕಮಿಟಿಯ ಹೆಡ್ ಆಗಿ ಚಿದಾನಂದ ಬಾಳಿಲರವರು ಕಾರ್ಯನಿರ್ವಹಿಸಿದ್ದಾರೆ.

ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಭವಾನಿಶಂಕರ ಅಡ್ತಲೆಯವರ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ. ಅದನ್ನು ಅವರು ಉಳಿಸಿಕೊಂಡಿದ್ದಾರೆ. ಡಾ. ರೇಣುಕಾಪ್ರಸಾದ್ ರವರ ಪರ್ಸನಲ್ ಸೆಕ್ರೆಟರಿ ಆಗಿ ನೇಮಕಗೊಂಡು ಬಳಿಕ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಖಾಸಗಿ ಅನುದಾನಿತ ಐಟಿಐ ನೌಕರರ ಸಂಘ ಹುಬ್ಬಳ್ಳಿ ಇದರ ಅಧ್ಯಕ್ಷ ಎಸ್.ಆರ್. ರವಿ, ಕೆವಿಜಿ ಡೆಂಟಲ್ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಮೌರ್ಯ ಆರ್. ಕುರುಂಜಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಎಒಎಲ್ಇ ಕಮಿಟಿ ಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಮಾತನಾಡಿ ಸುಳ್ಯ ಐಟಿಐ ಮಾತ್ರವಲ್ಲದೆ ಭಾಗಮಂಡಲ ಐಟಿಐಯ ಬೆಳಗವಣಿಯಲ್ಲೂ ಚಿದಾನಂದರ ಪಾತ್ರ ಇದೆ. ಚಿದಾನಂದರು ಯಾವತ್ತೂ ಕೋಪಿಸಿಕೊಂಡವರಲ್ಲ. ಸೌಮ್ಯ ಸ್ವಭಾವದ ಮೂಲಕ ಎಲ್ಲರ ಪ್ರೀತಿ, ವಿಶ್ವಾಸವನ್ನು ಗಳಿಸಿದ್ದಾರೆ.
ಭವಾನಿಶಂಕರ ಅಡ್ತಲೆಯವರು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದವರು. ಅವರ ಅನುಭವವನ್ನು ಪರಿಗಣಿಸಿ ಡಾ. ರೇಣುಕಾಪ್ರಸಾದ್ ಕೆ.ವಿ. ಯವರು ಅವರನ್ನು ಕಮಿಟಿ ಬಿ ಯ ವಿದ್ಯಾಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು. ಕೆವಿಜಿ ಅಮರಜ್ಯೋತಿ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ ಅಭಿನಂದನಾ ಮಾತುಗಳನ್ನಾಡಿದರು. ನಿವೃತ್ತ ಪ್ರಾಂಶುಪಾಲರಾದ ಚಿದಾನಂದ ಗೌಡ ಬಾಳಿಲ ಮತ್ತು ಅವರ ಧರ್ಮಪತ್ನಿ ವೇದಾವತಿಯವರನ್ನು ಮತ್ತು ನಿವೃತ್ತ ಕಚೇರಿ ಅಧೀಕ್ಷಕರಾದ ಭವಾನಿಶಂಕರ ಅಡ್ತಲೆ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಜಯಲತಾರನ್ನು ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿ ಬೀಳ್ಕೊಟ್ಟರು.















ಕಾಲೇಜಿನ ಉಪಪ್ರಾಂಶುಪಾಲರಾದ ದಿನೇಶ್ ಮಡ್ತಿಲ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ವಿದ್ಯಾರ್ಥಿನಿಯರಾದ ಕು. ರಕ್ಷಿತಾ ಮತ್ತು ಕು. ನಿಶಾ ಪ್ರಾರ್ಥಿಸಿದರು. ಕಿರಿಯ ತರಬೇತಿ ಅಧಿಕಾರಿ ಪ್ರವೀಣ್ ಕುಮಾರ್ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ಬಿಯ ವಿವಿಧ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಸಿಬ್ಬಂದಿಗಳು, ಕೈಗಾರಿಕಾ ತರಬೇತಿ ಸಂಸ್ಥೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಿರಿಯ ತರಬೇತಿ ಅಧಿಕಾರಿಗಳಾದ ಶ್ರೀಧರ ಕರ್ಮಜೆ ಮತ್ತು ವಿಷ್ಣುಮೂರ್ತಿ ಎಂ.ಕೆ ಸನ್ಮಾನ ಪತ್ರ ವಾಚಿಸಿದರು. ಕಿರಿಯ ತರಬೇತಿ ಅಧಿಕಾರಿ ಹೊನ್ನಪ್ಪ ವಂದಿಸಿದರು. ಕೆವಿಜಿ ಕಮಿಟಿ ಬಿಯ ವಿವಿಧ ವಿದ್ಯಾಸಂಸ್ಥೆಗಳ ವತಿಯಿಂದ ಮತ್ತು ಸಾರ್ವಜನಿಕರು ನಿವೃತ್ತರನ್ನು ಸನ್ಮಾನಿಸಿದರು.
ನಮ್ಮ ವಿದ್ಯಾಸಂಸ್ಥೆಗಳ ಎಲ್ಲಾ ಸಿಬ್ಬಂದಿಗಳು ಪರಸ್ಪರ ಪ್ರೀತಿ, ಗೌರವದಿಂದ ಬೆರೆಯುತ್ತಿದ್ದೇವೆ ಎಂದರೆ ಅದು ಡಾ. ಕುರುಂಜಿಯವರಿಂದ ಬೆಳೆದು ಸಂಸ್ಕಾರ. ಚಿದಾನಂದರು ಸಾತ್ವಿಕ ಸ್ವಭಾವದ ನಿರ್ಗರ್ವಿ. ಜೀವನದಲ್ಲಿಯಾಗಲೀ, ವೃತ್ತಿಜೀವನದಲ್ಲಾಗಲೀ ಕಪ್ಪುಚುಕ್ಕಿ ಇಲ್ಲದೆ ಕರ್ತವ್ಯ ನಿರ್ವಹಿಸಿ ಆದರ್ಶ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅದೇ ರೀತಿ ಭವಾನಿಶಂಕರ ಅಡ್ತಲೆಯವರು ಸಕಲ ಕಲಾ ವಲ್ಲಭರು. ಬಾಲ್ಯದಿಂದಲೇ ಸೃಜನಶೀಲ ವ್ಯಕ್ತತ್ವದೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಬಂದಿದ್ದಾರೆ. ಅವರಲ್ಲಿರುವ ಉತ್ತಮ ಗುಣ ಸಮಾಜದಲ್ಲಿ ಗುರುತಿಸುವಂತೆ ಮಾಡಿದೆ – ಡಾ. ಯಶೋಧ ರಾಮಚಂದ್ರ
ಡಾ. ಕೆವಿಜಿಯವರು ಐಟಿಐ ನೌಕರರ ಸಂಘದ ಏಳಿಗೆಗೆ ಸಹಕಾರ ನೀಡಿದವರು. ಡಾ. ಕುರುಂಜಿಯವರು ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವಲ್ಲಿ ಪ್ರಧಾನ ಪಾತ್ರವಹಿಸಿದವರು ಡಾ. ರೇಣುಕಾಪ್ರಸಾದ್ ಕೆವಿಯವರು. ಅವರಿಗೆ ಕಷ್ಟ ಬಂದಾಗ ನಾವೆಲ್ಲಾ ಅವರ ಜೊತೆ ಇದ್ದೇವೆ. ನೀವೂ ಇರಬೇಕು. ಸಂಸ್ಥೆ ಬೆಳೆಯುವಲ್ಲಿ ನೀವೆಲ್ಲಾ ಕೈಜೋಡಿಸಿ – ಎಸ್.ಆರ್. ರವಿ










