ಡಾ. ಶಿಶಿಲರಿಗೆ ಕೊ.ಅ. ಉಡುಪ ಸಾಹಿತ್ಯ ಪ್ರಶಸ್ತಿ

0


ಜನಪ್ರಿಯ ಮಾಸಪತ್ರಿಕೆ ಯುಗ ಪುರುಷದ ಸಂಸ್ಥಾಪಕ ಕೊಡತ್ತೂರು ಅನಂತ ಪದ್ಮನಾಭ ಉಡುಪ ಸ್ಮಾರಕ ವಾರ್ಷಿಕ ಪ್ರಶಸ್ತಿಯನ್ನು ೨೦೨೫ಲ್ಲಿ ಪ್ರಖ್ಯಾತ ಸಾಹಿತಿ ಡಾ. ಪ್ರಭಾಕರ ಶಿಶಿಲರಿಗೆ ನೀಡಲಾಗುತ್ತದೆ.


ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಶಿಶಿಲರು ಕನ್ನಡದ ಹಿರಿಯ ಸಾಹಿತಿಯಾಗಿದ್ದು, ಇದುವರೆಗೆ ೫೦ ಕನ್ನಡ ಮತ್ತು ೪ ತುಳು ಸೃಜನಶೀಲ ಕೃತಿಗಳನ್ನು ರಚಿಸಿರುತ್ತಾರೆ. ಇವರ ೧೭೫ ಅರ್ಥಶಾಸ್ತ್ರ ಕೃತಿಗಳು ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಅವಲೋಕನ ಕೃತಿಗಳಾಗಿವೆ. ಇವರ ಪುಂಸ್ತ್ರೀ ಕಾದಂಬರಿ ೧೪ ಭಾಷೆಗಳಿಗೆ ಮತ್ತು ಮತ್ಸ್ಯಗಂಧಿ ಕಾದಂಬರಿ ೬ ಭಾಷೆಗಳಿಗೆ ಅನುವಾದಗೊಳ್ಳುತ್ತಿದೆ. ಶ್ರೀಯುತರ ಆತ್ಮಕಥನ ಬೊಗಸೆ ತುಂಬಾ ಕನಸು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ಮತ್ಸ್ಯಗಂಧಿ ಯಕ್ಷಗಾನ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ. ಯಕ್ಷಗಾನ ಹವ್ಯಾಸಿ ಕಲಾವಿದರಾಗಿರುವ ಶಿಶಿಲರು ಬರೆದ ಯಕ್ಷಗಾನ ಕಲಾವಲೋಕನ ಅಕಾಡೆಮಿಕ್ ಆಗಿ ರಚಿಸಿದ ಮೊದಲ ಯಕ್ಷಗಾನ ಕೃತಿಯಾಗಿದೆ.


ಇದೇ ಜುಲೈ ೨೫ರಂದು ಅಪರಾಹ್ನ ೪ಕ್ಕೆ ಕಿನ್ನಿಗೋಳಿಯಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರಗಲಿದೆ. ಪ್ರಶಸ್ತಿಯು ಹಾರ, ಸ್ಮರಣಿಕೆ, ಶಾಲು ಮತ್ತು ರೂ. ೧೦,೦೦೦/- ನಗದು ಒಳಗೊಂಡಿದೆಯೆಂದು ಯುಗ ಪುರುಷ ಸಂಪಾದಕ, ಸಂಘಟಕ ಭುವನಾಭಿರಾಮ ಉಡುಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.