ಸವಣೂರಿನಲ್ಲಿ ಶೀಂಟೂರು ಸ್ಮೃತಿ – 2025

0

ಸೈನ್ಯ, ಕೃಷಿ, ಸಹಕಾರಿ, ಶಿಕ್ಷಕ ಎಲ್ಲಾ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿದವರು ಶೀಂಟೂರು ನಾರಾಯಣ ರೈಯವರು – ಸೂಂತೋಡು ಹೂವಯ್ಯ

ಉತ್ತಮ ಕೃಷಿಕನಾಗಿ, ಸೈನಿಕನಾಗಿ ದೇಶ ಸೇವೆಯಲ್ಲಿ, ಅತ್ಯುತ್ತಮ ಶಿಕ್ಷಕನಾಗಿ, ಸಹಕಾರಿಯಾಗಿ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಂಡು ಆದರ್ಶ ವ್ಯಕ್ತಿತ್ವದಿಂದ ಬಾಳಿದವರು ಶೀಂಟೂರು ನಾರಾಯಣ ರೈಯವರಯ. ಶಿಸ್ತು ಮತ್ತು ಸಮಯಪಾಲನೆಗೆ ಆಧ್ಯತೆ ನೀಡುತ್ತಿದ್ದರು. ಅವರ ಆದರ್ಶಗಳನ್ನು ತಮ್ಮಲ್ಲಿ ಬೆಳೆಸಿಕೊಂಡು, ಅವರ ವಿದ್ಯಾದಾನದ ಕನಸನ್ನು ನನಸಾಗಿಸಿದವರು ಸೀತಾರಾಮ ರೈಯವರು ಎಂದು ಸೂಂತೋಡು ಹೂವಯ್ಯ ಹೇಳಿದರು. ಅವರು ಆ. 14ರಂದು ಸವಣೂರಿನಲ್ಲಿ ನಡೆದ ಶೀಂಟೂರು ಸ್ಮೃತಿ – 2025ರಲ್ಲಿ ಶೀಂಟೂರು ಸಂಸ್ಮರಣೆ ಮಾಡುತ್ತಾ ನುಡಿದರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಹಕಾರಿರತ್ನ ಸವಣೂರು ಕೆ. ಸೀತಾರಾಮ ರೈಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸುತ್ತಾ ನಮ್ಮ ಸಂಸ್ಥೆಯ ಸ್ಥಾಪಕರರಾದ ನನ್ನ ತಂದೆ ಶೀಂಟೂರು ನಾರಾಯಣ ರೈಯವರು 2ನೇ ಮಹಾಯುದ್ಧದಲ್ಲಿ ಭಾರತೀಯ ಸೇನಾನಿಯಾಗಿ ಬರ್ಮಾದಲ್ಲಿ ಕರ್ತವ್ಯ ನಿರ್ವಹಿಸಿ ಸೇನಾ ನಿವೃತ್ತಿಯ ಬಳಿಕ ಶಿಕ್ಷಕರಾಗಿದ್ದು, ಸಹಕಾರಿ ಮತ್ತು ಕೃಷಿ ಕ್ಷೇತ್ರದಲ್ಲಿ ದುಡಿದವರು. ಅವರ ಪ್ರೇರಣೆಯಿಂದ ಸವಣೂರು ವಿದ್ಯಾಗಂಗೋತ್ರಿಯಲ್ಲಿ 2001ರಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಎಲ್.ಕೆ.ಜಿ, 1ನೇ ತರಗತಿ, 8ನೇ ತರಗತಿ ಮತ್ತು ಪ್ರಥಮ ಪಿಯುಸಿಯನ್ನು ಆರಂಭಿಸಿದೆ. ಇಂದು ಸಂಸ್ಥೆಯು ನಿರಂತರವಾಗಿ ಉತ್ತಮ ಫಲಿತಾಂಶ ಮತ್ತು ಸರ್ವತೋಮುಖ ಸಾಧನೆಗಳೊಂದಿಗೆ ಮುಂದುವರಿಯುತ್ತಿದೆ. ಸಂಸ್ಥೆಯ ದಶಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ವಿನಯ ಹೆಗ್ಡೆಯವರು ಪ್ರಸ್ತಾಪಿಸಿ ಮುಂದಿಟ್ಟ ಯೋಜನೆಯೇ ಶೀಂಟೂರು ನಾರಾಯಣ ರೈ ಶಿಕ್ಷಣ ಪ್ರತಿಸ್ಥಾನ ಸವಣೂರು ಆಗಿದ್ದು, ಆ ಸಂದರ್ಭದಲ್ಲಿ ಎಜೆ ಆಸ್ಪತ್ರೆಯ ಸಂಸ್ಥಾಪಕರಾದ ಡಾ. ಎ.ಜೆ ಶೆಟ್ಟಿಯವರು ರೂ.10ಲಕ್ಷ, ಕುಲಪತಿಯಾಗಿದ್ದ ವಿನಯ ಹೆಗ್ಡೆ ರೂ. 2 ಲಕ್ಷ ರೂಪಾಯಿಯನ್ನು ನೀಡಿದ್ದರು. ಈಗ ಅದು 36ಲಕ್ಷ ಆಗಿದೆ. ಇದರಿಂದ ಬರುವ ಬಡ್ಡಿ ಹಣವನ್ನು ಪ್ರತೀವರ್ಷ ಪ್ರತಿಭಾವಂತ ಮತ್ತು ಆರ್ಥಿಕ ಸಂಕಷ್ಟದಲ್ಲಿ ಇರುವ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದ್ದೇವೆ ಎಂದರು. ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನ ಆಡಳಿತ ನಿರ್ದೇಶಕರಾದ ಬಲರಾಮ ಆಚಾರ್ಯ ಶೀಂಟೂರು ನಾರಾಯಣ ರೈಯವರ ಪುತ್ಥಳಿಗೆ ಹಾರಾರ್ಪಣೆ ಮಾಡಿದರು. ಬಳಿಕ ಸಭಾಂಗಣದಲ್ಲಿ ಶೀಂಟೂರು ನಾರಾಯಣ ರೈಯವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪನಮನ ಸಲ್ಲಿಸಿದರು. ಬಲರಾಮ ಆಚಾರ್ಯ ಕರ್ಣಲ್ ರಾಜೇಶ್ ಹೊಳ್ಳರನ್ನು ಸನ್ಮಾನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ ವಹಿಸಿದ್ದರು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ಕರ್ನಲ್ ರಾಜೇಶ್ ಹೊಳ್ಳ ಎಸ್.ಎಂ ರವರಿಗೆ ಶೀಂಟೂರು ಸನ್ಮಾನ ಮಾಡಲಾಯಿತು. ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ ನ ಟ್ರಸ್ಟಿಗಳಾದ ಸುಂದರ ರೈ ನಡುಮನೆ ಮತ್ತು ಶ್ರೀಮತಿ ರಶ್ಮಿ ಎಲ್. ಶೆಟ್ಟಿ, ಸೀತಾರಾಮ ರೈಯವರ ಪತ್ನಿ ಶ್ರೀಮತಿ ಕಸ್ತೂರಿಕಲಾ ಎಸ್. ರೈ ಮತ್ತು ಶ್ರೀಮತಿ ಮಮತಾ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶೃತಾ ಜೈನ್, ವಿಧಿಶ, ಶ್ರಾವ್ಯ, ದೇಚಮ್ಮ, ತೇಹಸ್ವಿನಿ, ಕೃಪಾಲಿ, ಮಾನಸ ಮತ್ತು ಮೋಕ್ಷ ಪ್ರಾರ್ಥಿಸಿದರು. ವಿದ್ಯಾರ್ಥಿ ಶಂತನುಕೃಷ್ಣ ಕೆ.ಎ ಸಂವಿಧಾನದ ಪೀಠಿಕೆ ವಾಚಿಸಿದರು. ಸಹ ಶಿಕ್ಷಕಿ ಲಿಖಿತಾ ಎಂ.ಎನ್. ಲೋಕೇಶ್ ಎಸ್.ಆರ್ ರನ್ನು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ರಾಜಲಕ್ಷ್ಮೀ ಎಸ್‌. ರೈ ಕರ್ನಲ್ ರಾಜೇಶ್ ಹೊಳ್ಳರನ್ನು, ಸಹ ಶಿಕ್ಷಕಿ ಶ್ರೀಮತಿ ಚೇತನಾ ಸೂಂತೋಡು ಹೂವಯ್ಯರನ್ನು ಮತ್ತು ಪದವಿ ಕಾಲೇಜು ಉಪನ್ಯಾಸಕಿ ಶ್ರೀಮತಿ ಸುಮ ಎಸ್. ಬಲರಾಮ ಆಚಾರ್ಯರನ್ನು ಸಭೆಗೆ ಪರಿಚಯಿಸಿದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಶಶಿಕಲಾ ಎಸ್. ಆಳ್ವ ಸನ್ಮಾನಪತ್ರ ವಾಚಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಎನ್. ಜಯಪ್ರಕಾಶ್ ರೈ ವಂದಿಸಿದರು. ಪದವಿ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಪ್ರತಿಭಾ ಎಸ್ ಕಾರ್ಯಕ್ರಮ ನಿರೂಪಿಸಿದರು. ಶೈಕ್ಷಣಿಕ ಸಾಲಿನಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಪುರಸ್ಕಾರ ವಿತರಿಸಲಾಯಿತು. ಪುತ್ತೂರು, ಸುಳ್ಯದ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸೀತಾರಾಮ ರೈಯವರ ಬಂಧುಗಳು, ಹಿತೈಷಿಗಳು, ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಬೋಧಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ದಾನಗಳಲ್ಲಿ ಶ್ರೇಷ್ಠ ದಾನ ವಿದ್ಯಾದಾನ. ಶಿಕ್ಷಣ ಬದುಕಿಗೆ ದಾರಿ ಮಾಡಿಕೊಡುತ್ತದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಕನಸನ್ನು ತುಂಬಿದರೆ ಮಾತ್ರ ಅವರು ದೊಡ್ಡವರಾದದ ನಿರ್ಧಿಷ್ಟ ಗುರಿಯನ್ನು ತಲುಪುವುದಕ್ಕೆ ದಾಧ್ಯ – ಲೋಕೇಶ್ ಎಸ್.ಆರ್

ಜಗತ್ತಿನ ಜನಸಂಖ್ಯೆಯಲ್ಲಿ ಶೆ. 65 ಭಾಗ 35 ವರ್ಷದ ಯುವಕರಿದ್ದಾರೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ಅದು ನಿಮ್ಮ ಜೀವನಕ್ಕೆ ದಾರಿ ತೋರಿಸುತ್ತದೆ. ಆ ನಿಟ್ಟಿನಲ್ಲಿ ಶೀಂಟೂರು ನಾರಾಯಣ ರೈಯವರು ಆಗಿನ ಕಾಲದಲ್ಲಿ ಶಿಕ್ಷಣದ ಮಹತ್ವವನ್ನು ಅರಿತು ಅದನ್ನು ತಮ್ಮ ಪುತ್ರ ಸೀತಾರಾಮ ರೈಯವರ ಮೂಲಕ ಸಾಕಾರಗೊಳಿಸಿದ್ದಾರೆ – ಕರ್ನಲ್ ರಾಜೇಶ್ ಹೊಳ್ಳ

ಒಬ್ಬ ಟೀಚರ್ ತಮ್ಮ ಸೇವಾ ಅವಧಿಯಲ್ಲಿ ಸುಮಾರು 10. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಾರೆ. ವಿದ್ಯಾರ್ಥಿಗೆ ಅರ್ಥವಾಗುವುದಿಲ್ಲ ಎನ್ನುವವ ಶಿಕ್ಷಕನಾಗಿಯೇ ಉಳಿಯುತ್ತಾನೆ. ಅರ್ಥ ಆಗುವ ಹಾಗೆ ಶಿಕ್ಷಣ ನೀಡುವವ ಗುರುವಾಗುತ್ತಾನೆ. ಶೀಂಟೂರು ನಾರಾಯಣ ರೈಯವರಿಗೆ ನಿರ್ದಿಷ್ಟ ಗುರಿ ಇತ್ತು. ಅದನ್ನು ಸಾಧಿಸುವ ಭಲ ಇತ್ತು. ಇಚ್ಛಾಶಕ್ತಿ ಇತ್ತು. ಆದ್ದರಿಂದ ಇವತ್ತಿಗೂ ಅವರನ್ನು ನೆನಪಿಸಿಕೊಳ್ಳುತ್ತೇವೆ. ವಿದ್ಯಾರ್ಥಿಗಳಾದ ನೀವೂ ಹಿರಿಯರ ಆದರ್ಶಗಳನ್ನು ಪಾಲಿಸಿಕೊಂಡು, ಶಿಕ್ಷಕರ, ಪೋಷಕರ ಮಾರ್ಗದರ್ಶದಿಂದ ನಿರ್ದಿಷ್ಟ ಗುರಿಯೆಡೆಗೆ‌ ನಿಷ್ಠೆಯಿಂದ ಮುಂದೆ ಸಾಗಿ ಆಗ ಯಶಸ್ಸು ತಾನಾಗಿಯೇ ಬರುತ್ತದೆ – ಅಶ್ವಿನ್ ಎಲ್. ಶೆಟ್ಟಿ