ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

0

ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ರುಕ್ಮಯ್ಯದಾಸ್ ರವರು ಧ್ವಜಾರೋಹಣವನ್ನು ನೆರವೇರಿಸಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಕಿಶೋರ್ ರವರು ನಮ್ಮ ದೇಶವು ತಾಂತ್ರಿಕ ಮತ್ತು ವೈಜ್ಞಾನಿಕವಾಗಿ ಎಷ್ಟು ಅಭಿವೃದ್ಧಿ ಹೊಂದಿದೆ ಎಂಬುದನ್ನು ‘ಆಪರೇಷನ್ ಸಿಂಧೂರ ‘ಮುಖಾಂತರ ಜಗತ್ತಿಗೆ ಪರಿಚಯಿಸಿದೆ. ನಾವೆಲ್ಲರೂ ನಮ್ಮ ಸ್ವಾತಂತ್ರ್ಯವನ್ನು ದೇಶದ ಅಭಿವೃದ್ಧಿಗಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ಶ್ರೀ ಅಬುಸಾಲಿಯವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ನೆನಪಿಸಿದರು.

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನರ್ಸರಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ,ಪದಬಂಧ, ಸೃಜನಶೀಲ ಬರವಣಿಗೆ,ಭಾಷಣ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಘೋಷವಾಕ್ಯಗಳನ್ನು ಹೇಳುವುದು, ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಬರೆಯುವುದು,ಏಕಪಾತ್ರ ಅಭಿನಯ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಹಾಡು, ಛದ್ಮವೇಷ ನೃತ್ಯದ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿಕೊಟ್ಟರು.

ಸ್ವಾತಂತ್ರ್ಯೋತ್ಸವದ ಸಂದೇಶವನ್ನು ಸಾರುವ ವಿವಿಧ ಕರ ಕುಶಲ ವಸ್ತುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರುಕ್ಮಯ್ಯ ದಾಸ್, ನಿರ್ದೇಶಕರಾದ ಲೀಲಾವತಿ ರುಕ್ಮಯ್ಯ ದಾಸ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಕಿಶೋರ್ ಕುಮಾರ್, ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಶೋಭ ಕಿಶೋರ್, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು, ಶಿಕ್ಷಕ – ರಕ್ಷಕ ಸಂಘದ ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ತಿಷಾ ಖದೀಜಾ ನಿರೂಪಿಸಿ ವಂದಿಸಿದರು.