ಯಾವುದೇ ಗೊಂದಲಕ್ಕೀಡಾಗದೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ : ಹಮೀದ್ ಕರೆ
ಕರ್ನಾಟಕ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ರವರು ಸೆ. 26 ರಂದು ಸುಳ್ಯಕ್ಕೆ ಭೇಟಿ ನೀಡಿದ್ದರು. ಅವರನ್ನು ಈ ಸಂದರ್ಭದಲ್ಲಿ ಸುಳ್ಯ ಸೂಡ ಅಧ್ಯಕ್ಷ ಕೆ ಎಂ ಮುಸ್ತಫಾ ಜನತಾರವರು ಬರಮಾಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾ ಹೇಳಿಕೆ ಮೂಲಕ ಮಾತನಾಡಿದ ಅವರು ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಹಮ್ಮಿಕೊಂಡಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಭಾಗವಹಿಸಿ ಸಮೀಕ್ಷೆಯಲ್ಲಿ ಕೇಳುವ 60 ಪ್ರಶ್ನೆಗಳಿಗೆ ಯಾವುದೇ ಗೊಂದಲಗಳಿಲ್ಲದೆ ಮಾಹಿತಿಯನ್ನು ನೀಡುವಂತೆ ತಿಳಿಸಿದರು.
ವಿಶೇಷವಾಗಿ ಅಲ್ಪಸಂಖ್ಯಾತ ವಿಭಾಗದ ಮುಸಲ್ಮಾನ ಬಾಂಧವರು ಯಾವುದೇ ಕಾರಣಕ್ಕೂ ಈ ಸಮೀಕ್ಷೆಯಿಂದ ಹೊರ ಉಳಿಯಬಾರದು. ಸಂಬಂಧಪಟ್ಟವರು ತಮ್ಮ ತಮ್ಮ ಮನೆಗೆ ಸಮೀಕ್ಷೆಗೆ ಬಂದಾಗ ಅವರಿಗೆ ನಿಮ್ಮ ಕುಟುಂಬದ ಸರಿಯಾದ ಮಾಹಿತಿಗಳನ್ನು ನೀಡಬೇಕಾಗಿದೆ.















ಅಲ್ಲದೆ ಧರ್ಮ ಇಸ್ಲಾಂ, ಜಾತಿ ಮುಸ್ಲಿಂ ಉಪಜಾತಿ ನೀಡುವ ಸಂದರ್ಭದಲ್ಲಿ ನಿಮ್ಮ ನಿಮ್ಮ ಮನೆಯಲ್ಲಿ ಮಾತನಾಡುವ ಭಾಷೆಯ ಮುಂದಕ್ಕೆ ಮುಸ್ಲಿಂ ಎಂದು ಸೇರಿಸಿ ನೀಡಬೇಕಾಗಿದೆ ಎಂದು ಹೇಳಿದರು.ಬ್ಯಾರಿಗಳು ಆಗಿದ್ದಲ್ಲಿ ಬ್ಯಾರಿ ಮುಸ್ಲಿಂ ಅಥವಾ ಮತ್ತೆ ಯಾವುದಾದರೂ ಮಾತೃಭಾಷೆ ಇದ್ದವರಾದರೆ ಆ ಭಾಷೆಯ ಮುಂದೆ ಮುಸ್ಲಿಂ ಎಂದು ಹೆಸರನ್ನು ನೀಡಬೇಕಾಗಿ ಹೇಳಿದರು.

ಇದು ಕೇವಲ ಜಾತಿಗಾಗಿ ಮಾಡುವ ಸಮೀಕ್ಷೆಯಲ್ಲ ಇದು ರಾಜ್ಯದ ಪ್ರತಿಯೊಂದು ವರ್ಗದ ಜನರ ಆರ್ಥಿಕ ಸ್ಥಿತಿಗತಿ ಮತ್ತು ಸಮಾಜದಲ್ಲಿ ಸರ್ವರಿಗೆ ಸಮ ಪಾಲು ಸಮ ಬಾಳು ನೀಡುವ ಉದ್ದೇಶದಿಂದ ಈ ಒಂದು ಸಮೀಕ್ಷೆ ನಡೆಯುತ್ತಿದೆ. ಆದ್ದರಿಂದ ಯಾರೂ ಕೂಡ ಗೊಂದಲಕ್ಕೆ ಇಡಾಗದೆ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ವಿರೋಧ ಪಕ್ಷದವರು ಬೇಕು ಅಂತಲೇ ಇದನ್ನು ವಿರೋಧಿಸುತ್ತಾ ಬರುತ್ತಿದ್ದಾರೆ. ಆದ್ದರಿಂದ ಅಂಥವರ ಮಾತಿಗೆ ಬೆಲೆ ನೀಡದೆ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೋಶಾಧಿಕಾರಿ ಮಹಮ್ಮದ್ ಬಪ್ಪಳಿಗೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಜಂಮಿಯ್ಯತುಲ್ ಫಲಾಹ್ ಸಂಸ್ಥೆಯ ಹಿರಿಯ ಸದಸ್ಯ ಎಂ ಎಚ್ ಇಕ್ಬಾಲ್, ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಕೆ ಎಂ ಮುಸ್ತಫ,ನಗರ ಪಂಚಾಯತ್ ಸದಸ್ಯರುಗಳಾದ ಶರೀಫ್ ಕಂಠಿ ಹಾಗೂ ರಿಯಾಜ್ ಕಟ್ಟೆಕ್ಕಾರ್ಸ್ ವಕೀಲರಾದ ಮೂಸಾ ಪೈಂಬೆಚ್ಚಾಲು ಉಪಸ್ಥಿತರಿದ್ದರು.
ಸೂಡಾ ಅಧ್ಯಕ್ಷ ಮುಸ್ತಫ ಜನತಾ ಅತಿಥಿಗಳಿಗೆ ಶಾಲು ಹೊದಿಸಿ ಗೌರವಿಸಿದರು.










