ಸುದ್ದಿಗೋಷ್ಠಿಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ
ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯು ಸರ್ವೆ ಇಲಾಖೆಯ ಅಧಿಕಾರಿಗಳಿಂದ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡದೆ ಡೀಮ್ಡ್ ಅರಣ್ಯ ಜಮೀನನ್ನು ಜಂಟಿ ಸರ್ವೆ ನಡೆಸಲು ಹೊರಟಿರುವುದು ರೈತ ವಿರೋಧಿಯಾಗಿದೆ. ಸ್ಥಳಿಯಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಅಧಿಕಾರಿಗಳು ಸರ್ವೆ ನಡೆಸಲು ಸುತ್ತೋಲೆಯನ್ನು ಹೊರಡಿಸಿರುವುದನ್ನು ನಾವು ವಿರೋಧಿಸುತ್ತೇವೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ತಿಳಿಸಿದ್ದಾರೆ.









ಸುಬ್ರಹ್ಮಣ್ಯದಲ್ಲಿ ಸೆ.26 ರಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿಯ ಸರ್ವೆ ವ್ಯವಸ್ಥೆ ರೈತರಿಗೆ ಮಾರಕವಾಗಿದೆ.ತಕ್ಷಣ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ವ್ಯವಸ್ಥೆಯನ್ನು ನಿಲ್ಲಿಸಬೇಕು.ಪ್ಲೋಟಿಂಗ್ ಆಗದ ರೈತರ ಭೂಮಿಯನ್ನು ಪ್ಲೋಟಿಂಗ್ ಮಾಡಿಕೊಡಬೇಕು.ಹಲವಾರು ವರ್ಷದಿಂದ ಕೃಷಿ ಮಾಡಿಕೊಂಡು ನಿವೇಶನ ಹೊಂದಿರುವ ರೈತರಿಗೆ ಹಕ್ಕು ಪತ್ರ ನೀಡಬೇಕು. ಮುಂದೆ ಡೀಮ್ಡ್ ಅರಣ್ಯ ಪ್ರದೇಶಲ್ಲಿರುವ ರೈತರಿಗೆ ಇದರಿಂದ ತೊಂದರೆ ನೀಡುವ ಕಾರ್ಯ ನಡೆಯುವ ಸಾಧ್ಯತೆ ದಟ್ಟವಾಗಿದೆ. ಆದುದರಿಂದ ರೈತರಿಗೆ ತೊಂದರೆ ಅಗುವ ಈ ವ್ಯವಸ್ಥೆ ಯನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.
ಹೋರಾಟ ಅನಿವಾರ್ಯ
ಅಧಿಕಾರಿಗಳು ಕೃಷಿ ವಿರೋಧಿ ನೀತಿಯನ್ನು ಈ ರೀತಿಯಾಗಿ ಅಳವಡಿಸಿಕೊಳ್ಳುತ್ತಿದ್ದಾರೆ.ಭಾರತದ ಬೆನ್ನೆಲುಬಾದ ಕೃಷಿಯನ್ನು ನಾಶಮಾಡಲು ಮತ್ತು ರೈತರಿಗೆ ತೊಂದರೆ ನೀಡಿ ಕೃಷಿ ಮಾಡದಂತೆ ಮಾಡುವ ವ್ಯವಸ್ಥೆ ಇದಾಗಿದೆ. ಆದುದರಿಂದ ತಕ್ಷಣ ಜಿಲಾಡಳಿತ ಎಚ್ಚೆತ್ತುಕೊಂಡು ಸರ್ವೆಯನ್ನು ನಿಲ್ಲಿಸಬೇಕು. ಅಲ್ಲದೆ ಶಾಸಕರು ಸೇರಿದಂತೆ ಇತರ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಸರ್ವೆ ಕಾರ್ಯ ಮಾಡಬೇಕು. ಈ ಬಗ್ಗೆ ವಿಶೇಷ ಗ್ರಾಮ ಸಭೆ ಕರೆದು ಸಾರ್ವಜನಿಕರಿಗೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು.ಅಲ್ಲದೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಡೀಮ್ಡ್ ಫಾರೆಸ್ಟ್ ಅನ್ನು ಕಾಯ್ದಿರಿಸಬೇಕು. ಜಿಪಿಎಸ್ ಸರ್ವೆ ಬದಲು ಮ್ಯಾನ್ಯುವಲ್ ಸರ್ವೆ ಆಗಬೇಕು.ತರಾತುರಿಯಲ್ಲಿ ಸರ್ವೆ ಆಗದೆ ವ್ಯವಸ್ಥಿತವಾಗಿ ಸರ್ವೆ ಮಾಡಬೇಕು. ತಪ್ಪಿದಲ್ಲಿ ಈ ಯೋಜನೆ ವಿರುದ್ದ ರೈತರೆಲ್ಲರನ್ನೂ ಸೇರಿಸಿಕೊಂಡು ವೇದಿಕೆ ವತಿಯಿಂದ ಹೋರಾಟ ಮಾಡುತ್ತೇವೆ ಎಂದು ಕಿಶೋರ್ ಎಚ್ಚರಿಸಿದರು.
ತಿಂಗಳೊಳಗೆ ಸರ್ವೆಗೆ ಸುತ್ತೋಲೆ:
ಡೀಮ್ಡ್ ಫಾರೆಸ್ಟ್ ಜಮೀನು ಗಳನ್ನು ಸಮೀಕ್ಷೆ ನಡೆಸಲು ಜಂಟಿ ಪರಿಶೀಲನಾ ತಂಡಗಳನ್ನು ರಚಿಸಿ ಗ್ರಾಮ ಮಟ್ಟದಲ್ಲಿ ಕ್ಷೇತ್ರ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ.ಅಲ್ಲದೆ ತಾಲೂಕು ಜಂಟಿ ಪರಿಶೀಲನಾ ಸಮಿತಿ ರಚಿಸಿ ಡೀಮ್ಸ್ ಫಾರೆಸ್ಟ್ ಜಮೀನುಗಳನ್ನು ಸಮೀಕ್ಷೆ ನಡೆಸಲು ಜಂಟಿ ಪರಿಶೀಲನಾ ತಂಡಗಳನ್ನು ರಚಿಸಿ ಗ್ರಾಮ ಮಟ್ಟದಲ್ಲಿ ಕ್ಷೇತ್ರ ಪರಿಶೀಲನೆಯನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಸೆ 20 ರಿಂದ ಅ. 21ರೊಳಗೆ ವಾಸ್ತವ್ಯದ ಮನೆಗಳ ಬಗ್ಗೆ ಕೃಷಿ ಕೃತಾವಳಿ ಇರುವ ಬಗ್ಗೆ ಸಾರ್ವಜನಿಕ ಕಟ್ಟಡಗಳಿರುವ ಬಗ್ಗೆ, ಸಾರ್ವಜನಿಕ ಉದ್ದೇಶಗಳಿಗೆ ಜಮೀನು ಕಾದಿರಿಸುವ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಲು ಲಭ್ಯವಿರುವ ಜಮೀನುಗಳ ವಾಸ್ತವದ ಸ್ಥಿತಿಗತಿಯ ಬಗ್ಗೆ ನಕ್ಷೆಯಲ್ಲಿ ಗುರುತಿಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಕಿಶೋರ್ ನುಡಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ.ಸದಸ್ಯರಾದ ಗಿರೀಶ್ ಆಚಾರ್ಯ ಪೈಲಾಜೆ, ದಿಲೀಪ್ ಉಪ್ಪಳಿಕೆ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಪ್ರಮುಖರಾದ ಜಯಪ್ರಕಾಶ್ ಕೂಜುಗೋಡು, ರಮಾನಂದ ಎಣ್ಣೆಮಜಲು, ಮನೀಶ್ ಪದೇಲ ಮತ್ತಿತರರು ಉಪಸ್ಥಿತರಿದ್ದರು.










