ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ನೇಮಕ ವಿರುದ್ಧದ ದಾವೆಗೆ ಟ್ವಿಸ್ಟ್
ಸಮಿತಿ ಸದಸ್ಯನಿಂದಲೇ ಅಧ್ಯಕ್ಷರ ವಿರುದ್ಧ ದೂರು – ಕೋರ್ಟಲ್ಲಿ ಹೇಳಿಕೆ
ರಾಜ್ಯದ ಪ್ರತಿಷ್ಠಿತ ಮತ್ತು ಅತಿ ಹೆಚ್ಚು ಆದಾಯ ತರುವ ದೇವಾಲಯವಾದ ಕುಕ್ಕೆ ಸುಬ್ರಹಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಿದ ವಿಧಾನದ ಕುರಿತು ಹೂಡಲಾಗಿರುವ ದಾವೆಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ವ್ಯವಸ್ಥಾಪನಾ ಸಮಿತಿಯನ್ನು ವಜಾ ಮಾಡಬೇಕೆಂದು ವ್ಯವಸ್ಥಾಪನಾ ಸಮಿತಿಯ ಸದಸ್ಯರಲ್ಲೊಬ್ಬರು ಧಾರ್ಮಿಕ ದತ್ತಿ ಇಲಾಖೆಯ ಕಮಿಷನರ್‌ರಿಗೆ ದೂರುತ್ತಿರುವುದಲ್ಲದೆ, ದಾವೆಯನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಕ್ಕೂ ಆ ಬಗೆಗೆ ಲಿಖಿತ ಹೇಳಿಕೆ ನೀಡಿದ್ದಾರೆಂದು ತಿಳಿದುಬಂದಿದೆ.

ಸುಮಾರು ಆರು ತಿಂಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿ ರಾಜ್ಯ ಧಾರ್ಮಿಕ ಪರಿಷತ್ ಮಾಡಿದ ನಿರ್ಣಯದ ಪ್ರಕಾರ ಧಾರ್ಮಿಕ ದತ್ತಿ ಇಲಾಖೆ ಸಮಿತಿ ರಚನೆಯ ಆದೇಶ ಹೊರಡಿಸಿತ್ತು. ಆ ಸಮಿತಿಗೆ ಸುಬ್ರಹ್ಮಣ್ಯದವರೇ ಆದ ಹರಿಶ್ ಇಂಜಾಡಿಯವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಈ ನೇಮಕದ ವಿರುದ್ಧ ಸುಬ್ರಹ್ಮಣ್ಯದ ಉದ್ಯಮಿ ಆಕಾಶ್ ಎಂಬವರು ನ್ಯಾಯಾಲಯದ ಮೆಟ್ಟಿಲೇರಿ ಈ ನೇಮಕ ವಿಧಾನ ಸರಿಯಲ್ಲವೆಂದೂ, ಅದಕ್ಕೆ ತಡೆಯಾಜ್ಞೆ ನೀಡಬೇಕೆಂದೂ ಕೋರಿದ್ದರು. ದಾವೆಗೆ ಅವರು ಸರಕಾರಿ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿಸಿದ್ದರು.
ಈ ದಾವೆ ವಿಚಾರಣೆಯಾಗುವಾಗ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನೂ ಪಾರ್ಟಿ ಮಾಡಬೇಕೆಂದು ಹರೀಶ್ ಇಂಜಾಡಿಯವರ ಪರ ನ್ಯಾಯವಾದಿಗಳು ಕೋರಿಕೊಂಡ ಮೇರೆಗೆ ವ್ಯ.ಸಮಿತಿಯ ಎಲ್ಲಾ ಸದಸ್ಯರನ್ನು ಪ್ರತಿವಾದಿಗಳನ್ನಾಗಿ ಮಾಡಿ ಕೋರ್ಟ್ ಆದೇಶ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಅಧ್ಯಕ್ಷ ಹರೀಶ್ ಇಂಜಾಡಿಯವರು ತಮ್ಮ ಪರ ವಾದ ಮಂಡನೆ ಮಾಡಿದ್ದರು. ಪರಿಣಾಮವಾಗಿ ನೇಮಕಕ್ಕೆ ತಡೆಯಾಜ್ಞೆ ದೊರೆಯದೆ ವಿಚಾರಣೆ ನಡೆಯುತ್ತಲೇ ಇತ್ತು.
ಕೇಸಿನ ವಾಯಿದೆಯ ದಿನವಾದ ಅ. 10 ರಂದು ಹೈಕೋರ್ಟಿಗೆ ತನ್ನ ಹೇಳಿಕೆ ನೀಡಿದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್‌ಕುಮಾರ್ ಕರಿಕ್ಕಳರವರು ” ಈ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಈ ಹಿಂದೆ ದೇವಸ್ಥಾನಕ್ಕೆ ವಂಚಿಸಿದ ಆರೋಪ ಇರುವವರಾದುದರಿಂದ ಹಾಗೂ ಉತ್ತರಾದಿಮಠದ ವಿಚಾರದಲ್ಲಿ ಹಾಗೂ ಸಂಪುಟ ನರಸಿಂಹ ಮಠದ ವಿಚಾರದಲ್ಲಿ ದೇವಸ್ಥಾನದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿರುವುದರಿಂದ ಈಗ ಆಡಳಿತ ನಡೆಸುತ್ತಿರುವ ಸಮಿತಿಯನ್ನು ವಜಾ ಮಾಡುವುದು ಒಳ್ಳೆಯದು ಎಂದು ಲಿಖಿತವಾಗಿ ತಿಳಿಸಿರುವುದಾಗಿ ತಿಳಿದುಬಂದಿದೆ.















ಈ ಬಗ್ಗೆ ಮಹೇಶ್‌ಕುಮಾರ್ ಕರಿಕ್ಕಳರನ್ನು ಸಂಪರ್ಕಿಸಿ ವಿಚಾರಿಸಿದಾಗ ” ಹರೀಶ್ ಇಂಜಾಡಿಯವರ ಮೇಲೆ ದೇವಸ್ಥಾನಕ್ಕೆ ವಂಚಿಸಿದ ಕೇಸ್ ಆಗಿತ್ತು. ಈಗ ಅವರು ಅಧ್ಯಕ್ಷರಾದ ಮೇಲೆ ದೇವಸ್ಥಾನದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಆದ್ದರಿಂದ ಅವರನ್ನು ವಜಾ ಮಾಡಬೇಕೆಂದು ನಾನು ಧಾರ್ಮಿಕ ದತ್ತಿ ಆಯುಕ್ತರಿಗೂ ಪತ್ರ ಬರೆದಿದ್ದೇನೆ. ಹೈಕೋರ್ಟಿಗೂ ನನ್ನ ಹೇಳಿಕೆ ಸಲ್ಲಿಸಿದ್ದೇನೆ. ಈ ಸಮಿತಿ ರದ್ದುಗೊಂಡರೆ ಮತ್ತೆ ಪ್ರಾಧಿಕಾರ ನೇಮಕವಾಗುತ್ತದೆ ” ಎಂದು ಹೇಳಿದರು.
ಸುದ್ದಿಯನ್ನು ಸಂಪರ್ಕಿಸಿ ಈ ಬಗ್ಗೆ ಹೇಳಿಕೆ ನೀಡಿರುವ ಹರೀಶ್ ಇಂಜಾಡಿಯವರ ಬಾವ, ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡರು ” ಮಹೇಶ್‌ಕುಮಾರ್‌ರವರನ್ನು ಸರಕಾರವೇ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ನೇಮಕಗೊಳಿಸಿರುವುದರಿಂದ ಸರಕಾರದ ನೇಮಕ ಸರಿಯಿಲ್ಲವೆಂದು ಅವರು ಸರಕಾರದ ವಿರುದ್ಧ ನ್ಯಾಯಾಲಯಕ್ಕೆ ಹೇಳಿಕೆ ಸಲ್ಲಿಸಿರುವುದು ಸಮಂಜಸವಲ್ಲ. ಅವರ ಘನತೆಗೆ ತಕ್ಕುದಲ್ಲ. ಏನಿದ್ದರೂ ಅವರ ಹೇಳಿಕೆ ಈಗ ವಿಚಾರಣೆ ನಡೆಯುತ್ತಿರುವ ಕೇಸಿನ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ತಿಳಿಸಿದ್ದಾರೆ.
” ಮಹೇಶ್ ಕುಮಾರ್ ಕರಿಕ್ಕಳರವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷತೆಗೆ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಸೂಚನೆ ಮಾಡಲೂ ಜನವಿಲ್ಲದ ಕಾರಣ ಅಧ್ಯಕ್ಷರಾಗಲು ಸಾಧ್ಯವಾಗಿರಲಿಲ್ಲ. ಆ ಕಾರಣದಿಂದಾಗಿ ಕಮಿಟಿಯೇ ವಜಾಗೊಳ್ಳಲಿ ಎಂದು ಅವರು ಹೇಳಿಕೆ ನೀಡಿದ್ದಾರೆ ” ಎಂದು ತಾವು ನ್ಯಾಯಾಲಯಕ್ಕೆ ತಿಳಿಸುತ್ತಿರುವುದಾಗಿಯೂ ವೆಂಕಪ್ಪ ಗೌಡರು ತಿಳಿಸಿದ್ದಾರೆ.










