ನಿರ್ಲಕ್ಷ್ಯ ವಹಿಸಿದ್ದಲ್ಲಿ ನಿಮ್ಮ ಜೀವಕ್ಕೂ ಹಾನಿ ಇತರರ ಪ್ರಾಣಕ್ಕೂ ಕುತ್ತು ಸಂಭವ
ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳು ಮತ್ತು ಇನ್ನಿತರ ಪ್ರಾಣಿಗಳು, ವಿಷಕಾರಿ ಹಾವುಗಳ ಕಡಿತಕ್ಕೆ ನೂರಾರು ಮಂದಿ ಸಾರ್ವಜನಿಕರು ತೊಂದರೆಗೀಡಾಗುತ್ತಿದ್ದಾರೆ.















ವಿಶೇಷವಾಗಿ ನಾಯಿ ಕಡಿತಕ್ಕೆ ಒಳಗಾದ ಕೆಲವರು ನಿರ್ಲಕ್ಷ್ಯ ಮಾಡಿ ತಮ್ಮ ಜೀವಕ್ಕೂ ಹಾಗೂ ಇತರ ಪ್ರಾಣಕ್ಕೂ ಕುತ್ತು ತರುವಂತಹ ಸನ್ನಿವೇಶಗಳು ಉಂಟಾಗುತ್ತಿದೆ. ನಾಯಿಗಳು ಕಚ್ಚಿದ್ದಲ್ಲಿ ರೇಬಿಸ್ ಕಾಯಿಲೆ ಮನುಷ್ಯರಿಗೆ ಕೂಡಲೇ ಹರಡುವ ಸಂಭವವಿದ್ದು ಈ ಬಗ್ಗೆ ಜನರು ಜಾಗೃತರಾಗಬೇಕಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿ ಎರಡು ಘಟನೆಗಳು ಸುಳ್ಯ ಭಾಗದಲ್ಲಿ ಸಂಭವಿಸಿ ನಾಯಿ ಕಡಿತಕ್ಕೆ ಒಳಗಾದವರು ಮಾಡಿದ ನಿರ್ಲಕ್ಷ್ಯತನ ದಿಂದ ತಮ್ಮ ಪ್ರಾಣವನ್ನು ಕಳೆದುಕೊಂಡ ಘಟನೆಯೂ ನಡೆದಿದೆ.

ಕಳೆದ ಕೆಲವು ದಿನಗಳ ಹಿಂದೆ ಕಲ್ಲುಗುಂಡಿ ಪರಿಸರದಲ್ಲಿ ಮಹಿಳೆಗೆ ನಾಯಿ ಕಡಿತದಿಂದ ಉಂಟಾದ ಘಟನೆ ಮತ್ತು ಅವರು ತಡವಾಗಿ ಆಸ್ಪತ್ರೆಗೆ ಬಂದ ಕಾರಣ ರೇಬಿಸ್ ಅಂತಿಮ ಘಟ್ಟಕ್ಕೆ ಬಂದ ಹಿನ್ನೆಲೆಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಇವರೊಂದಿಗೆ ಸಂಪರ್ಕದಲ್ಲಿದ್ದವರಿಗೂ ಕೂಡ ರೇಬಿಸ್ ಕಾಯಿಲೆ ಆತಂಕ ಉಂಟು ಮಾಡಿತ್ತು. ಇದರಿಂದಾಗಿ ಸುಮಾರು 20ಕ್ಕೂ ಹೆಚ್ಚು ಮಂದಿ ರೇಬಿಸ್ ಚುಚ್ಚುಮದ್ದನ್ನು ಪಡೆದುಕೊಳ್ಳುವ ಸನ್ನಿವೇಶವೂ ನಿರ್ಮಾಣವಾಯಿತು.
ಅಲ್ಲದೆ ಈ ಒಂದು ಚುಚ್ಚುಮದ್ದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು ಐನೂರು ರೂಪಾಯಿ ಇದ್ದು ಒಬ್ಬರ ತಪ್ಪಿಂದಾಗಿ ನೂರು ಮಂದಿಗೆ ಈ ಚುಚ್ಚುಮದ್ದು ಹಾಕುವ ಪರಿಸ್ಥಿತಿ ಬಂದಲ್ಲಿ ವಿನಾಕಾರಣ ಇಲಾಖೆಗೆ ತುಂಬಾ ನಷ್ಟ ಉಂಟಾಗುವ ಪರಿಸ್ಥಿತಿಯು ನಿರ್ಮಾಣವಾಗುತ್ತದೆ. ಆದುದರಿಂದ ಈ ರೀತಿಯ ಘಟನೆಗೆ ಒಳಗಾದಲ್ಲಿ ಕೂಡಲೇ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾವಿಸಿ ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸುಳ್ಯ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಶಿವಕುಮಾರ್ ರವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೆ ಮನೆಯ ಅಟ್ಟಿ ಮತ್ತು ತೋಟ ಪರಿಸರದಲ್ಲಿ ಹಾವುಗಳ ಕಡಿತಕ್ಕೊಳಗಾಗುವ ಘಟನೆಗಳು ಕೂಡ ಇತ್ತೀಚಿಗೆ ಹೆಚ್ಚಾಗಿ ಕಂಡು ಬರುತ್ತಿದ್ದು ತೋಟಗದ್ದೆಗಳಲ್ಲಿ ಕೆಲಸ ನಿರ್ವಹಿಸಲು ತೆರಳುವ ಸಂದರ್ಭದಲ್ಲಿ ಪ್ರತಿಯೊಬ್ಬರು ಜಾಗ್ರತೆಯನ್ನು ಪಾಲಿಸಬೇಕೆಂದು ಅವರು ತಿಳಿಸಿದ್ದಾರೆ.









