ಜಾನುವಾರು ಕೊಂದು ಮಾಂಸ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸ್‌ ದಾಳಿ

0


ಆರೋಪಿಗಳು ಪರಾರಿ
ಬೆನ್ನಟ್ಟಿದ್ದ ಪೊಲೀಸರಿಂದ ಒಬ್ಬನ ಬಂಧನ


ಜಾನುವಾರುಗಳನ್ನು ಕೊಂದು ಮಾಂಸ ಮಾಡುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಪೋಲೀಸರು ಐವತ್ತೊಕ್ಲು ಗ್ರಾಮದ ಕರಿಕ್ಕಳ ಶಾಲಾ ಬಳಿಯ ಗುಡ್ಡೆಯೊಂದಕ್ಕೆ ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿದ್ದ ನಾಲ್ವರು ದುಸ್ಕರ್ಮಿಗಳು ಮಾಂಸ ಮತ್ತಿತರ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ ಹಾಗೂ ಬೆನ್ನಟ್ಟಿದ್ದ ಪೊಲೀಸರಿಗೆ ಒಬ್ಬ ಸಿಕ್ಕಿಬಿದ್ದ ಘಟನೆ ಇದೀಗ ವರದಿಯಾಗಿದೆ.

ಐವತ್ತೊಕ್ಲು ಗ್ರಾಮದ ನಿಡ್ವಾಳ ಮತ್ತು ಕರಿಕ್ಕಳ ಶಾಲಾ ಸಮೀಪದ ಗುಡ್ಡೆಯೊಂದರಲ್ಲಿ ನಾಲ್ವರು ದುಸ್ಕರ್ಮಿಗಳು ಹೋರಿಗಳನ್ನು ತಂದು ಕಟ್ಟಿ ಹಾಕಿ ಕಡಿದು ಮಾಂಸ ಮಾಡುತ್ತಿದ್ದರೆನ್ನಲಾಗಿದೆ. ಈ ಮಾಹಿತಿ ತಿಳಿದ ಪೊಲೀಸರು ಇಂದು ಅಪರಹ್ನ ಸ್ಥಳಕ್ಕೆ ದಾಳಿ ನಡೆಸಿದರು. ಪೊಲೀಸರನ್ನು ಕಂಡ ಕೂಡಲೇ ನಾಲ್ವರು ದುಸ್ಕರ್ಮಿಗಳೂ ನಾಲ್ಕು ದಿಕ್ಕಿಗೆ ಓಡಿದರೆನ್ನಲಾಗಿದೆ. ಪೋಲೀಸರೂ ಬೆನ್ನೆಟ್ಟಿದರು. ಪಡ್ಪಿನಂಗಡಿ ಸಮೀಪ ಓರ್ವ ಯುವಕ ಪೊಲೀಸರ ಕೈಗೆ ಸಿಕ್ಕಿಬಿದ್ದ ಆತ ಜಾನುವಾರುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಸ್ಥಳದ ಸಮೀಪದ ನಿವಾಸಿ ಹಮೀದ್‌ ಎಂದು ತಿಳಿದು ಬಂದಿದೆ. ಇತರ ಮೂವರು ಕಡಬ ಕಡೆಯವರು ಎನ್ನಲಾಗಿದ್ದು ಅವರು ಸಿಕ್ಕಿಲ್ಲ.
ಕಡಬ ಕಡೆಯ ವ್ಯಕ್ತಿಗಳು ಸ್ಥಳಕ್ಕೆ ಬಂದಿದ್ದ ಕಾರನ್ನು ಮತ್ತು ಸ್ಥಳದಲ್ಲಿ ಒಂದು ಹೋರಿಯನ್ನು ಕಡಿದು ಮಾಡಲಾಗಿದ್ದ ಸುಮಾರು 40 ಕೇಜಿಯಷ್ಟು ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿ ಇನ್ನೂ ಮೂರು ಹೋರಿಗಳನ್ನು ಕಡಿಯುವುದಕ್ಕಾಗಿ ಕಟ್ಟಿಹಾಕಲಾಗಿತ್ತು ಎಂದು ತಿಳಿದು ಬಂದಿದೆ.