ಕ್ಯಾಂಪ್ಕೋ ಉಳಿಸಲು ಸ್ವತಂತ್ರ ಅಭ್ಯರ್ಥಿಗಳಿಬ್ಬರ ಗೆಲ್ಲಿಸಿ

0


ಸದಸ್ಯರಿಗೆ ಅಣ್ಣಾ ವಿನಯಚಂದ್ರ ಮನವಿ

ಪ್ರತಿಷ್ಠಿತ ಅಂತರ್ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಗೆ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ಒಟ್ಟು ೧೯ ನಿರ್ದೇಶಕ ಸ್ಥಾನಗಳ ಪೈಕಿ ೧೩ ಸ್ಥಾನಗಳಿಗೆ ಸಹಕಾರ ಭಾರತಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು,ಉಳಿದ ೬ ಸ್ಥಾನಗಳಿಗೆ ನ.೨೩ರಂದು ಚುನಾವಣೆ ನಡೆಯಲಿದೆ.ಸಹಕಾರ ಭಾರತಿಯ ೬ ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.ಕ್ಯಾಂಪ್ಕೋ ಉಳಿಯಬೇಕು ಮತ್ತು ಆರೋಗ್ಯ ಪೂರ್ಣವಾಗಿ ಬೆಳೆಯಬೇಕೆಂಬ ನಿಟ್ಟಿನಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿರುವ ಎಂ.ಜಿ.ಸತ್ಯನಾರಾಯಣ ಮತ್ತು ರಾಮಪ್ರತೀಕ್ ಕೆ ಅವರನ್ನು ಗೆಲ್ಲಿಸುವಂತೆ ವಿಧಾನಪರಿಷತ್ ಮಾಜಿ ಸದಸ್ಯ ಅಣ್ಣ ವಿನಯಚಂದ್ರ ಅವರು ಪತ್ರಿಕಾಗೋಷ್ಟಿಯಲ್ಲಿ ಮನವಿ ಮಾಡಿದ್ದಾರೆ.


ಕ್ಯಾಂಪ್ಕೋ ಸ್ಥಾಪಕ ವಾರಣಾಸಿ ಸುಬ್ರಾಯ ಭಟ್ ಅವರೊಂದಿಗೆ ಆರಂಭದಲ್ಲಿ ಒಡನಾಡಿಯಾಗಿದ್ದ ಎಂ.ಜಿ.ಸತ್ಯನಾರಾಯಣ ಅವರು ಸುಬ್ರಾಯ ಭಟ್ಟರೊಂದಿಗೆ ಚೀಲ ಹಿಡಿದುಕೊಂಡು ಹೋಗಿದ್ದವರು.ಎಂ.ಜಿ.ಸತ್ಯನಾರಾಯಣ ಅವರು ಪ್ರತಿ ವರ್ಷ ಕ್ಯಾಂಪ್ಕೋ ಮಹಾಸಭೆಗೆ ಹೋಗಿ ರೈಟಿಂಗ್‌ನಲ್ಲಿ ಪ್ರಶ್ನೆ ಮಾಡುತ್ತಿದ್ದರು.ರೈತರ ಪ್ರಮುಖ ಬೇಡಿಕೆಯಾಗಿರುವ ಕುಮ್ಕಿ ಹಕ್ಕಿನ ಬಗ್ಗೆ ಕೋರ್ಟಿಗೆ ಹೋಗಿ ಹೋರಾಟ ಮಾಡಿ ಸರ್ಕಾರದ ಜೊತೆಗೂ ಹೋರಾಟ ಮಾಡಿದವರು.ಎಸ್‌ಕೆಸಿಎಂಸಿನ ಗೋಲ್‌ಮಾಲ್ ಬಗೆಗೆ ನಾನು ಮತ್ತವರು ಕೋರ್ಟಿಗೆ ಹೋದವರು.ತಪ್ಪನ್ನು ತಪ್ಪು ಎಂದು ಹೇಳುವ ಯಶಸ್ವಿ ನಿರ್ದೇಶಕರಾಗಿ ಸತ್ಯನಾರಾಯಣ ಅವರು ರೈತ ಸದಸ್ಯರ ಪರವಾಗಿ ಕೆಲಸ ಮಾಡಿಯಾರು ಎಂಬ ನಂಬಿಕೆಯಿದೆ.ಇನ್ನೋರ್ವ ಸ್ವತಂತ್ರ ಅಭ್ಯರ್ಥಿ ರಾಮ್‌ಪ್ರತೀಕ್ ಅವರು ಪ್ರೊಫೆಶನಲ್ ಆಗಿ ಯೋಚನೆ ಮಾಡುವವರು.ಆಡಳಿತ ಮಂಡಳಿ ಮಾಡುವ ತಪ್ಪುಗಳನ್ನು ಪ್ರಶ್ನಿಸಲು ಈ ಇಬ್ಬರು ಗೆದ್ದರೂ ಸಾಕು ಎಂದ ಅವರು, ಕ್ಯಾಂಪ್ಕೋ ಉಳಿಯಬೇಕು ಮತ್ತು ಆರೋಗ್ಯಪೂರ್ಣವಾಗಿ ಬೆಳೆಯುವ ಉzಶದಿಂದ ಸದಸ್ಯರು ಇವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಅಣ್ಣಾ ವಿನಯಚಂದ್ರ ಮನವಿ ಮಾಡಿದರು.ಇವರಿಬ್ಬರೂ ಗೆದ್ದರೆ ವಾರಣಾಸಿ ಸುಬ್ರಾಯ ಭಟ್ ಅವರ ಕನಸು ಏನಿತ್ತೋ ಅದಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಲಿದ್ದಾರೆ.


ಪರಿವಾರದ ಹೊರಗಿನವರಲ್ಲ: ಸ್ವತಂತ್ರ ಅಭ್ಯರ್ಥಿಗಳಿಬ್ಬರೂ ಪರಿವಾರದ ಹೊರಗೆ ಇಲ್ಲ.ಪರಿವಾರದ ಒಳಗೇ ಇರುವವರು.ಒಟ್ಟಿನಲ್ಲಿ ನಮಗೆ ಕ್ಯಾಂಪ್ಕೋ ಉಳಿಯಬೇಕು ಮತ್ತು ಆರೋಗ್ಯ ಪೂರ್ಣವಾಗಿ ಬೆಳೆಯಬೇಕೆಂದು ಹೇಳಿದರು.


ವಾರಣಾಶಿ ಸುಬ್ರಾಯ ಭಟ್ಟರ ದೂರದರ್ಶಿತ್ವದ ಫಲವಾಗಿ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಸ್ಥಾಪಿತವಾದ ಕ್ಯಾಂಪ್ಕೋ ಮುಂದೆ ಸದೃಢವಾಗಿ ಬೆಳೆದು ನಿಂತಾಗ ವಾರಣಾಶಿ ಸುಬ್ರಾಯ ಭಟ್ಟರನ್ನೇ ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಪ್ರಯತ್ನಿಸಿ ಯಶಸ್ಸು ಕಂಡರು.ಕ್ಯಾಂಪ್ಕೋ ಆಡಳಿತ ಮಂಡಳಿಯನ್ನು ಕೆಲವು ಸ್ಥಾಪಿತ ಹಿತಾಸಕ್ತಿಗಳು ತಮ್ಮ ಕಪಿಮುಷ್ಟಿಗೆ ತೆಗೆದುಕೊಂಡಿದ್ದಾರೆ.ಅಂಥವರ ಕಪಿಮುಷ್ಟಿಯಿಂದ ಪಾರು ಮಾಡಿ ಕ್ಯಾಂಪ್ಕೋ ಉಳಿಸುವುದು ಬೆಳೆಗಾರರಿಗೆ ಅಗತ್ಯವಾಗಿದೆ.ಕ್ಯಾಂಪ್ಕೋ ಸಂಸ್ಥೆಯನ್ನು ಕೋಟಿ ಲೆಕ್ಕದ ನಷ್ಟಕ್ಕೆ ಗುರಿಪಡಿಸುವ ಸ್ಥಾಪಿತ ಹಿತಾಸಕ್ತಿಗಳ ಮೇಲೆ ಹದ್ದಿನ ಕಣ್ಣಿರಿಸಬೇಕಾಗಿದೆ ಎಂದರು.


ಕ್ರೈಸ್ತಕುಟುಂಬ ಭೂಮಿ ದಾನವಾಗಿ ನೀಡಿತ್ತು: ಮೊಳಹಳ್ಳಿ ಶಿವರಾಯರನ್ನು ನೋಡಿ ಮಂಗಳೂರುನ ಕ್ರೈಸ್ತ ಕುಟುಂಬವೊಂದು ಎಸ್‌ಕೆಎಸಿಎಂಎಸ್ ಕಚೇರಿಗೆ ಜಾಗವನ್ನು ದಾನವಾಗಿ ನೀಡಿದ್ದರು.ಅಂತಹ ಸಂಸ್ಥೆಯನ್ನೇ ಮುಳುಗಿಸಲಾಯಿತು.ದ.ಕ.ಜಿಲ್ಲೆಯ ಮಾತೃಸಮಾನ ಸಂಸ್ಥೆಯಾಗಿದ್ದ ದಕ ಕೃಷಿಕರ ಮಾರಾಟ ಸಹಕಾರಿ ಸಂಸ್ಥೆ(ಎಸ್‌ಕೆಎಸಿಎಂಎಸ್)ಗೆ ಆದ ಸ್ಥಿತಿಯೇ ಕ್ಯಾಂಪ್ಕೋಗೂ ಆಗಬಾರದು ಎಂಬ ಉzಶದಿಂದ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಅಡಿಕೆ ಬೆಳೆಗಾರ ಮೂಲಚಂದ್ರ, ಅಡಿಕೆ ಕೃಷಿಕ ಸುಬ್ರಾಯ ಬಿ.ಎಸ್., ರೈತ ಸಂಘದ ಮುಖಂಡ ಶ್ರೀಧರ್ ಶೆಟ್ಟಿ ಬೈಲುಗುತ್ತು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.


ಪುಚ್ಚಪ್ಪಾಡಿ ಮಾವನ ಮನೆಯವರನ್ನು ರಾತ್ರಿ
ಮಲಗಲು ಬಿಡದೆ ನಾಮಿನೇಶನ್ ವಿದ್‌ಡ್ರಾ ಮಾಡಿಸಿದ್ರು


ಪತ್ರಕರ್ತರಾಗಿದ್ದ ಮಹೇಶ್ ಪುಚ್ಚಪ್ಪಾಡಿ ಅವರು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ನಾಮಿನೇಶನ್ ಹಾಕಿದ್ದರು.ಅವರನ್ನು ವಿದ್‌ಡ್ರಾ ಮಾಡಲು ಕೇಳಲು ಹೋದದ್ದು ಸಹಕಾರ ಭಾರತಿಯವರಲ್ಲ ಇಬ್ಬರೇ.ಯಾರು ಇಲ್ಲಿನ ಸಹಕಾರಿ ಸಂಘಗಳನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳಲು ಹೊರಟಿದ್ದಾರೋ ಅವರೇ ಮಹೇಶ್ ಪುಚ್ಚಪ್ಪಾಡಿಯವರ ನಾಮಪತ್ರವನ್ನು ವಿದ್‌ಡ್ರಾ ಮಾಡಿಸಿದ್ದರು.ಚುನಾವಣೆಗೆ ನಿಂತವರಿಗೆ ಸ್ವಲ್ಪ ಧೈರ್ಯ ಹೆಚ್ಚು ಬೇಕು.ಅವರಿಗೆ ಅದು ಇರಲಿಲ್ಲ.ಅವರ ನಾಮಿನೇಶನ್ ವಿದ್‌ಡ್ರಾ ಮಾಡಿಸುವ ವಿಚಾರದಲ್ಲಿ ಎಲಿಮಲೆಯಲ್ಲಿ ಎರಡು ಗಂಟೆ ದೊಡ್ಡ ಮೀಟಿಂಗ್ ಆದ ಬಳಿಕ ಅವರು ಪುತ್ತೂರಿಗೆ ಬಂದು ತಮ್ಮ ಆಪ್ತರ ಜೊತೆ ಡಿಸ್ಕಸ್ ಮಾಡಿದ್ದರು.ಈ ಮಧ್ಯೆ ಕೇರಳದಲ್ಲಿರುವ ಪುಚ್ಚಪ್ಪಾಡಿಯವರ ಮಾವನ ಮನೆಯವರಿಗೆ ರಾತ್ರಿಯಿಡೀ ಫೋನ್ ಮಾಡುತ್ತಾ ಮಲಗಲು ಬಿಡದೆ ಒತ್ತಡ ಹಾಕಿ ನಾಮಪತ್ರ ವಿದ್‌ಡ್ರಾ ಮಾಡಿಸಲಾಯಿತು ಎಂದು ಅಣ್ಣಾ ವಿನಯಚಂದ್ರ ಆರೋಪಿಸಿದರು.ಆದರೆ ಆ ಇಬ್ಬರು ಯಾರು ಎಂದು ಮಾತ್ರ ಹೇಳಲಿಲ್ಲ.ಪುತ್ತೂರಿಗೆ ಶಕುಂತಳಾ ಶೆಟ್ಟಿ ಬೇಡ ಮಲ್ಲಿಕಾ ಪ್ರಸಾದ್ ಬೇಕೆಂದು ಹೇಳಿದವರು ಯಾರು ಕಾರ್ಯಕರ್ತರಲ್ಲ,ಈ ಇಬ್ಬರೇ ಎಂದರು.