ಮುರುಳ್ಯ:ಬೀದಿ ನಾಯಿಗಳ ಹಾವಳಿ ಹಾಗೂ ಕಡೆಗಳಲ್ಲಿ ಬೀದಿ ದೀಪ ಅಳವಡಿಸುವಂತೆ ಎಸ್‌ಡಿಪಿಐ ವತಿಯಿಂದ ಪಂಚಾಯತ್ ಗೆ ಮನವಿ

0

ಸಮಹಾದಿ: ಮುರುಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಹಾದಿ, ಕುಕ್ಕಟ್ಟೆ, ಅಲೆಕ್ಕಾಡಿ ನಿಂತಿಕಲ್ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,ಇದರ ಬಗ್ಗೆ ಹಾಗೂ ಸಮಹಾದಿ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಬೀದಿ ದೀಪ ಅಳವಡಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಮುರುಳ್ಯ ಬ್ರಾಂಚ್ ಸಮಿತಿ ವತಿಯಿಂದ ಮುರುಳ್ಯ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಉಲ್ಲೇಖಿಸಿದಂತೆ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಗಳಲ್ಲಿ ಓಡಾಡಲು ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಹಾಗೂ ವೃದ್ಧರ ಮೇಲೆ ನಾಯಿಗಳು ಏಕಾಏಕಿ ದಾಳಿ ಮಾಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.ಬೀದಿ ನಾಯಿಗಳ ಹಾವಳಿಯಿಂದ ಶಾಲಾ ವಿದ್ಯಾರ್ಥಿಗಳು, ಮದ್ರಸಾ ವಿದ್ಯಾರ್ಥಿಗಳು,ಮಹಿಳೆಯರು ಹಾಗೂ ಸಾರ್ವಜನಿಕರಿಗೆ ರಸ್ತೆಯಲ್ಲಿ ನಡೆದಾಡಲು ಹೆದರಿಕೆಯಾಗುತ್ತಿವೆ.
ರಸ್ತೆಗಳಲ್ಲಿ ಬೈಕ್‌ನಲ್ಲಿ ಹೋಗುವ ಸವಾರರನ್ನು ನಾಯಿಗಳು ಬೆನ್ನಟ್ಟುತ್ತಿದ್ದು, ಕೆಲವರು ಬೈಕ್‌ನಿಂದ ಉರುಳಿಬಿದ್ದ ಘಟನೆಗಳೂ ನಡೆದಿವೆ.

ನಿಂತಿಕಲ್ ,ಅಲೆಕ್ಕಾಡಿ ,ಸಮಹಾದಿ, ಕುಕ್ಕಟ್ಟೆ ಹಾಗೂ ಇತರೆ ಪ್ರದೇಶಗಳಲ್ಲಿ ಬೀದಿನಾಯಿಗಳು ಗುಂಪು ಗುಂಪಾಗಿ ಓಡಾಡುತ್ತಿವೆ. ಒಂಟಿಯಾಗಿ ಓಡಾಡುವವರನ್ನು ಕಂಡರೆ, ಬೊಗಳುತ್ತಿವೆ. ದಾಳಿ ಸಹ ಮಾಡಿ ಗಾಯಗೊಳಿಸುತ್ತಿವೆ’

‘ಗುಂಪಿನಲ್ಲಿ 10ಕ್ಕೂ ಹೆಚ್ಚು ನಾಯಿಗಳು ಇರುತ್ತದೆ. ಎಲ್ಲ ನಾಯಿಗಳು ಒಟ್ಟಿಗೆ ಓಡಾಡುತ್ತವೆ. ಹಗಲು ಹಾಗೂ ರಾತ್ರಿ ಎನ್ನದೇ ಜನರ ಮೇಲೆ ದಾಳಿ ಮಾಡುತ್ತಿವೆ. ರಾತ್ರಿಯಂತೂ ಜನರ ಓಡಾಟವೇ ಕಷ್ಟವಾಗಿದೆ’

ಬೈಕ್ ಸವಾರರು ಸಂಚರಿಸುವಾಗ ತೊಂದರೆ ಕೊಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ,ಕೆಲವು ದಿನಗಳ ಹಿಂದೆ ಸಮಹಾದಿ ಮಸೀದಿ ಹತ್ತಿರ ದೇವಿಪ್ರಸಾದ್ ಎಂಬಾತ ತನ್ನ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಬೀದಿ ನಾಯಿ ಅಡ್ಡಬಂದು ಬೈಕ್ ಪಲ್ಟಿಯಾಗಿ ಅಲ್ಪಸ್ವಲ್ಪ ಗಾಯವಾಗಿತ್ತು,ಅದೇ ರೀತಿ ರಾಗಿಪೇಟೆಯ ಹಮೀದ್ ಎಂಬವರು ಸುಳ್ಯಕ್ಕೆ ಎಂದಿನಂತೆ ಬೈಕ್ ‌ನಲ್ಲಿ ಕೆಲಸಕ್ಕೆ ಹೋಗುವಾಗ ಬೆಳಗ್ಗಿನ ಹೊತ್ತಿನಲ್ಲಿ ಒಂದು ಬಾರಿ ಅಲೆಕ್ಕಾಡಿಯಲ್ಲಿ ಹಾಗೂ ಇನ್ನೊಂದು ಬಾರಿ ಎಡಮಂಗಳ ತಿರುವು ಬಳಿ ನಾಯಿ ಅಡ್ಡ ಬಂದು ಬೈಕ್ ಪಲ್ಟಿಯಾಗಿ ಬೈಕ್ ಗೆ ಹಾನಿಯಾಗಿ ಅವರಿಗೂ ಗಾಯವಾಗಿ ಅನೇಕ ದಿನ ಕೆಲಸಕ್ಕೆ ರಜೆ ಮಾಡಿ ವಿಶ್ರಾಂತಿ ತೆಗೆಯುವ ಪರಿಸ್ಥಿತಿ ಬಂದಿತ್ತು,ದಿನಗೂಲಿ ಕೆಲಸ ಮಾಡಿ ಜೀವಿಸುವವರು ಮನೆಯಲ್ಲಿ ಬಾಕಿಯಾದರೆ ಕುಟುಂಬವನ್ನು ನಿರ್ವಹಣೆ ಮಾಡುವುದು ಹೇಗೆ?
ಈ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವಂತೆಯೂ, ಸಾರ್ವಜನಿಕರಿಗೆ ಗರಿಷ್ಟ ಭದ್ರತೆ ಒದಗಿಸುವಂತೆ ಹಾಗೂ ಸಮಹಾದಿ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಬೀದಿ ದೀಪ ಅಳವಡಿಸುವಂತೆಯೂ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಮುರುಳ್ಯ ಬ್ರಾಂಚ್ ಅಧ್ಯಕ್ಷ ಮಹಮ್ಮದ್ ಬಶೀರ್,ಸದಸ್ಯರಾದ ಸಮೀರ್ ಕುಕ್ಕಟ್ಟೆ ಹಾಗೂ ನೌಫಲ್ ಉಪಸ್ಥಿತರಿದ್ದರು