ಫೆ.28 ಮತ್ತು ಮಾ.1ರಂದು ಸುಳ್ಯದಲ್ಲಿ ಮೊಗೇರ ದುಡಿ ಆಯನರಾಜ್ಯ ಮಟ್ಟದ ಕಾರ್ಯಕ್ರಮ : ಹಲವು ಗಣ್ಯರ ಆಗಮನ

0

ದಕ್ಷಿಣ ಕನ್ನಡ ಜಿಲ್ಲಾ ಮೊಗೇರ ಸಂಘಕೆ ೫೦ ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮೊಗೇರ ಸಂಘದ ನೇತೃತ್ವದಲ್ಲಿ ಫೆ.೨೮ ಮತ್ತು ಮಾರ್ಚ್ ೧ ರಂದು ಎರಡು ದಿವಸಗಳ ಕಾಲ ಕರ್ನಾಟಕ ರಾಜ್ಯದ ಮೊಗೇರ ಸಮುದಾಯವು ಸುಳ್ಯದಲ್ಲಿ ಒಟ್ಟು ಸೇರಿ ಮೊಗೇರ ದುಡಿ ಆಯನ ರಾಜ್ಯ ಸಮ್ಮೇಳನವು ನಡೆಯಲಿದೆ ಎಂದು ಮೊಗೇರ ಸಂಘದ ರಾಜ್ಯಾಧ್ಯಕ್ಷ ನಂದರಾಜ ಸಂಕೇಶ ತಿಳಿಸಿದ್ದಾರೆ.


ಫೆ.೭ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮ ಆಯೋಜನೆಯ ಕುರಿತು ವಿವರ ನೀಡಿದರು.
ಸಂಘದ ಸಂಭ್ರಮಾಚರಣೆಯನ್ನು ವೈವಿಧ್ಯಮಯವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಕರ್ನಾಟಕ ರಾಜ್ಯ ಮೊಗೇರ ಸಂಘವು ನಿರ್ಧರಿಸಿದೆ. ಅಸ್ಪಶ್ಯತೆ, ಜಾತೀಯತೆ, ಅಸಮಾನತ ಮೇಲು ಕೀಳು, ಶ್ರೇಷ್ಠ ಕನಿಷ್ಠ ಅನ್ನುವ ವಿಷಯ ಸಮಾಜದ ಮಧ್ಯೆ ತನ್ನದೇ ಆದ ಸ್ಥಾನಮಾನ, ಶ್ರೇಷ್ಠತೆಯನ್ನು ಹೊಂದಿ ಆತ್ಮ ಗೌರವ, ಸ್ವಾಭಿಮಾನದ ಬದುಕು ಕಟ್ಟಕೊಂಡು ತುಳುವ ನಾಡಿನ ಸಾಂಸ್ಕೃತಿಕ ಪರಂಪರೆಗೆ ಗಣನೀಯವಾದ ಕೊಡುಗೆಯನ್ನು ಸಮಾಜವು ನೀಡುತ್ತಾ ಬಂದಿದೆ.


ಪ್ರಸ್ತುತ ಕಾಲಘಟ್ಟದಲ್ಲಿ ಸಂವಿಧಾನದ ಆಶಯದಂತೆ ಡಾ| ಬಿ.ಆರ್ ಅಂಬೇಡ್ಕರ್ ನೀಡಿರುವ ಮೀಸಲಾತಿಯ ಹಕ್ಕನ್ನು ಉತ್ತರ ಕನ್ನಡ ಜಿಲ್ಲೆಯ ಪ್ರವರ್ಗ-೧ ರಲ್ಲಿರುವ ಮೀನುಗಾರ ಮೊಗೇರರು ಹುನ್ನಾರ ನಡೆಸುತ್ತಿದ್ದಾರೆ. ನಮ್ಮ ಅನ್ನದ ಬಟ್ಟರಿಗೆ ಕೈ ಹಾಕುವ ಪ್ರಯತ್ನಗಳ ವಿರುದ್ಧ ಮೊಗೇರ ಸಂಘವು ಸಂವಿಧಾನಿಕ ಹೋರಾಟವನ್ನು ನಡೆಸುತ್ತಾ ಬರುತ್ತಿದೆ. ಒಳ ಮೀಸಲಾತಿಯ ಹಂಚಿಕೆಯಲ್ಲಿ ತಾರತಮ್ಯ ನಡೆದಾಗ ಮುಗೇರ ಸಮಾಜವು ಹೋರಾಟವನ್ನು ಮಾಡಿ ಶೇ ೬ ಮೀಸಲಾತಿಯನ್ನು ಪಡೆಯುವಲ್ಲ ಯಶಸ್ವಿಯಾಗಿದೆ. ಮೊಗೇರ ಸಮಾಜಕ್ಕೆ ಪಾರಂಪರಿಕವಾಗಿ ಬಂದಿರುವ ಹೋರಾಟದ ಪರಂಪರೆ, ಕಥೆ. ಸಾಹಿತ್ಯ, ಸಂಗೀತ, ಸಾಂಸ್ಕೃತಿಕ, ಇವೇ ಮೊದಲಾದ ವಿಷಯಗಳಲ್ಲಿ ಸಮಾಜವನ್ನು ಕಟ್ಟ ಬೆಳೆಸುವುದು. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಸರಿಸಿ ಹೋಗಿರುವ ಮೊಗೇರ ಸಮಾಜವನ್ನು ತಳಮಟ್ಟದಿಂದ ವಿಶಾಲ ತಳಹದಿಯಲ್ಲಿ ವಿಸ್ತರಣೆಗೊಳಿಸುವುದು, ಹೀಗೆ ನಾನಾ ವಿಚಾರಗಳನ್ನು ಮುಂದಿಟ್ಟುಕೊಂಡು ಸುಳ್ಯದ ಕೊಡಿಯಲಬೈಲ್ ನಲ್ಲಿರುವ ಗೌಡ ಸಮುದಾಯ ಭವನದಲ್ಲಿ ಐತಿಹಾಸಿಕ ಮೊಗೇರ ದುಡಿ ಆಯನ ೨೦೨೬ ಬೃಹತ್ ಸಮ್ಮೇಳನವು ನಡೆಯಲಿದೆ.


ಫೆಬ್ರವರಿ ೨೮ ರಂದು ಶನಿವಾರ ಜಿಲ್ಲಾ ಮೊಗೇರ ಸಂಘದ ಸ್ಥಾಪಕರಲ್ಲಿ ಓರ್ವರಾದ ಗಣಪ ಕೆ. ಮೂಡುಶೆತ್ವ ಇವರು ಧ್ವಜಾರೋಹಣಗೈಯ್ಯುವರು ಪ್ರಮುಖರಾದ ಶುಭೋದಯ ಕೂಡ್ಲು ಇವರು ದುಡಿ ಆಯನ- ೨೦೨೬ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಲಿರುವ ಪ್ರತಿನಿಧಿಗಳು ಸಮ್ಮೇಳನದ ವಿವಿಧ ಕಲಾಸಗಳಲ್ಲಿ ಭಾಗವಹಿಸಲಿರುವರು ಕಾರ್ಯಕ್ರಮದಲ್ಲಿ ಮೊಗೇರ ಸಮಾಜದ ಸಾಂಸ್ಕೃತಿಕ ಪರಂಪರೆಯಾದ ದುಡಿ ಕುಣಿತ ವಿವಿಧ ಸಾಂಸ್ಕೃತಿಕ ನೃತ್ಯ, ಜನಪದ ಕ್ರೀಡೆ, ವಿವಿಧ ಆಟೋಟಗಳ ಪ್ರಕಾರಗಳು, ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.

ಮಾರ್ಚ್ ೧ ರಂದು ಸುಳ್ಯದ ಜ್ಯೋತಿ ವೃತ್ತದಿಂದ ಚೆನ್ನಕೇಶವ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದೆ. ರಾಜಕೀಯ, ಧಾರ್ಮಿಕ, ಸಮಾಜದ ನಾಯಕರು ಹೀಗೆ ಹಲವು ಗಣ್ಯರು ಭಾಗವಹಿಸಲಿದ್ದು ಎರಡು ದಿನದ ಕಾರ್ಯಕ್ರಮದಲ್ಲಿ ಸುಮಾರು ೭ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆಂದು ಅವರು ವಿವರ ನೀಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಕಾರ್ಯಧ್ಯಕ್ಷರು ಹಾಗೂ ಸುಳ್ಯ ತಾಲೂಕು ಮೊಗೇರ ಸಂಘದ ಅಧ್ಯಕ್ಷರಾದ ಕರುಣಾಕರ ಪಲ್ಲತಡ್ಕ, ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ಬಾಳಪ್ಪ ಮಣಿ ಮಜಲು, ಅಚ್ಯುತ ಮಲ್ಕಜೆ, ಕೇಶವ ಮಾಸ್ತರ್ ಹೊಸಗದ್ದೆ, ಸವಿತಾ ಮುಂಡಾಜೆ, ವಿಜಯಲಕ್ಷ್ಮಿ ಪುತ್ತೂರು, ಬಾಬು ಕನಕಮಜಲು, ಶಂಕರ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.