













ಐವರ್ನಾಡು ಗ್ರಾಮದ ಬೇಂಗಮಲೆ ಎಂಬಲ್ಲಿ ರಸ್ತೆ ಬದಿ ತ್ಯಾಜ್ಯ ಎಸೆದಿದ್ದ ಸುಳ್ಯದ ಅಯೋಧ್ಯಾ ಮೆನ್ಸ್ ಡ್ರೆಸ್ & ಸ್ಪೋರ್ಟ್ಸ್ ಜೆರ್ಸಿ ಶಾಪ್ ನವರ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಎ.07 ರಂದು ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಅಂಗಡಿ ಮಾಲಿಕರಾದ ಅಕ್ಷಯ್ ರಜಪೂತ್ ಕಲ್ಲಡ್ಕ ಎಂಬವರ ಮೇಲೆ ಐವರ್ನಾಡು ಗ್ರಾಮ ಪಂಚಾಯತ್ ಪಿಡಿಒ ರವರು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ದೂರಿನಲ್ಲಿ ದಿನಾಂಕ 15.10.2025 ರಂದು ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಾರೆ-ಸುಳ್ಯ ರಸ್ತೆಯ ಬೇಂಗಮಲೆ ಎಂಬಲ್ಲಿ ರಸ್ತೆಯ ಬದಿ ತ್ಯಾಜ್ಯ ಎಸೆದಿರುವ ಕುರಿತು ಗಮನಕ್ಕೆ ಬಂದ ನೆಲೆಯಲ್ಲಿ ಸಿಬ್ಬಂದಿಯವರೊಂದಿಗೆ ಪರಿಶೀಲಿಸಿದ್ದು ಬೇಂಗಮಲೆಯ 3 ಕಡೆಗಳಲ್ಲಿ ತ್ಯಾಜ್ಯದ ಚೀಲಗಳನ್ನು ಎಸೆದಿರುವುದು ಕಂಡು ಬಂದಿದ್ದು, ತೆರೆದು ಪರಿಶೀಲಿಸಿದಾಗ ಎಲ್ಲಾ ಮೂರೂ ತ್ಯಾಜ್ಯದ ಚೀಲಗಳಲ್ಲಿ ಅಯೋಧ್ಯಾ ಮೆನ್ಸ್ ಡ್ರೆಸ್ & ಸ್ಪೋರ್ಟ್ಸ್ ಜೆರ್ಸಿ ಶಾಪ್ ಗಾಂಧಿನಗರ ಸುಳ್ಯ ಎಂಬ ವಸ್ತಮಳಿಗೆಗೆ ಸೇರಿದ ತ್ಯಾಜ್ಯಗಳಿರುವುದು ಕಂಡುಬಂದಿರುತ್ತದೆ. ಚೀಲಗಳಲ್ಲಿ ವಸ್ತ್ರ ಮಳಿಗೆಗೆ ಸಂಬಂಧಿಸಿದ ಹಲವು ಬಿಲ್ಲುಗಳು, ಮಳಿಗೆಯ ಹೆಸರಿಗೆ ನೀಡಲಾದ ಜಾತ್ರೆಯ ಆಮಂತ್ರಣಗಳು ಹಾಗೂ ಸದ್ರಿ ಮಳಿಗೆಯ ವಿದ್ಯುತ್ ಸಂಪರ್ಕದ ಮೆಸ್ಕಾಂ ಬಿಲ್ಲು ಲಭಿಸಿದ್ದು, ತ್ಯಾಜ್ಯಗಳು ಕೂಡ ವಸ್ತ್ರ ಮಳಿಗೆಯದ್ದೆಂಬುದಾಗಿ ಕಂಡುಬಂದಿರುತ್ತದೆ. ಈ ಮೂರೂ ತ್ಯಾಜ್ಯದ ಚೀಲಗಳನ್ನು ಎರಡು ಮೂರು ದಿನಗಳ ಅಂತರವನ್ನಿಟ್ಟುಕೊಂಡು ಸುಮಾರು ಒಂದು ವಾರದ ಅವಧಿಯಲ್ಲಿ ಎಸೆದಿರುವುದನ್ನು ಗಮನಿಸಲಾಗಿದೆ. ಈ ಕುರಿತು ಅಂಗಡಿ ಮಾಲಿಕರಿಗೆ ದೂರವಾಣಿ ಕರೆ ಮಾಡಿ ತ್ಯಾಜ್ಯದ ಚೀಲಗಳು ಸಿಕ್ಕಿರುವ ಬಗ್ಗೆ ತಿಳಿಸಿ ಗ್ರಾಮಪಂಚಾಯತ್ ಕಚೇರಿಗೆ ಬಂದು ನಿಗದಿತ ದಂಡವನ್ನು ಪಾವತಿಸುವಂತೆ ಸೂಚಿಸಲಾಗಿರುತ್ತದೆ. ಆದರೆ ದಂಡವನ್ನು ಪಾವತಿಸುವ ಕುರಿತು ಸಕಾರಾತ್ಮಕವಾಗಿ ಪರಿಗಣಿಸದೇ ದಂಡದ ಮೊತ್ತವನ್ನು ಕಡಿಮೆ ಮಾಡುವಂತೆ ಚೌಕಾಸಿ ನಡೆಸಿಕೊಂಡು ದಂಡವನ್ನು ಪಾವತಿಸಲು ನಿರಾಕರಿಸಿರುತ್ತಾರೆ. ಹಾಗೂ ಗ್ರಾಮಪಂಚಾಯತ್ ಕಚೇರಿಗೆ ದಿನಾಂಕ 17.10.2025 ರಂದು ಅಪರಾಹ್ನ ಭೇಟಿ ನೀಡಿದ ಅಂಗಡಿ ಮಾಲಿಕರಾದ ಅಕ್ಷಯ್ ರಜಪೂತ್ ಕಲ್ಲಡ್ಕ ರವರು ತಾನು ತ್ಯಾಜ್ಯ ಎಸೆದಿರುವುದಿಲ್ಲವೆಂದು ವಾದಿಸಿ ದಂಡ ಪಾವತಿಸಲು ನಿರಾಕರಿಸಿರುತ್ತಾರೆ.
ಸಾರ್ವಜನಿಕ ಇದ್ದಲ್ಲಿ ಆದರೆ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ಎಸೆಯುವುದು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿ ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿಯಾಗಿರುವುದರಿಂದಲೂ, ತ್ಯಾಜ್ಯ ಎಸೆದ ವ್ಯಕ್ತಿಗಳಿಗೆ ಸೂಕ್ತ ದಂಡ ಅಥವಾ ಪರಿಣಾಮಕಾರಿ ಶಿಕ್ಷೆಯನ್ನು ವಿಧಿಸದೇ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ದುಸ್ತರವಾಗುವುದರಿಂದ, ವಿಚಾರವನ್ನು ಐವರ್ನಾಡು ಗ್ರಾಮಪಂಚಾಯತ್ ಆಡಳಿತ ಮಂಡಳಿಯು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಗ್ರಾಮಪಂಚಾಯತ್ ಭೇಟಿಯ ಸಂದರ್ಭದಲ್ಲಿ ಗಮನಕ್ಕೆ ತಂದಿದ್ದು, ಈ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪ್ರಕರಣ ದಾಖಲಿಸಲು ದೂರು ಸಲ್ಲಿಸುವಂತೆ ಸೂಚಿಸಿರುತ್ತಾರೆ. ಆದ್ದರಿಂದ ತ್ಯಾಜ್ಯ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಯೋಧ್ಯಾ ಅಂಗಡಿಗೆ ಸಂಬಂಧಿಸಿದ ಹಲವು ಬಿಲ್ಲುಗಳು, ಮಳಿಗೆಯ ಹೆಸರಿಗೆ ನೀಡಲಾದ ಜಾತ್ರೆಯ ಆಮಂತ್ರಣಗಳು ಹಾಗೂ ವಿದ್ಯುತ್ ಬಿಲ್ಲುಗಳು ಕೂಡ ಇರುವುದರಿಂದ ಅಂಗಡಿ ಮಾಲಕರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ದೂರು ನೀಡಿದ್ದರು.







