ದುಗ್ಗಲಡ್ಕ : ವಿವಾದಿತ ಸ್ಥಳದಲ್ಲಿ ಇಂದು ವಿದ್ಯುತ್ ಕಂಬ ಹಾಕಿದ ಮೆಸ್ಕಾಂ

0

ಮತ್ತೆ ಸ್ಥಳೀಯರ ವಿರೋಧ- ಕಂಬ ಕಿತ್ತು ಕೊಂಡೊಯ್ದ ಮೆಸ್ಕಾಂ

ದುಗ್ಗಲಡ್ಕದಲ್ಲಿ ನಿರ್ಮಾಣವಾಗುತ್ತಿರುವ ಕಮರ್ಷಿಯಲ್‌ ಕಾಂಪ್ಲೆಕ್ಸ್ ಒಂದರ ಎದುರಿದ್ದ ಕರೆಂಟ್ ಕಂಬದ ಸ್ಥಳಾಂತರಕ್ಕೆ ಮಾಲಕರು ಯತ್ನಿಸಿದಾಗ ಸಾರ್ವಜನಿಕರಿಗೆ ಮತ್ತು ಸಿಎ ಬ್ಯಾಂಕ್ ಶಾಖೆಗೆ ಸಮಸ್ಯೆಯಾಗುತ್ತದೆ ಎಂದು ವಿರೋಧ ವ್ಯಕ್ತವಾಗಿ ತೋಡಿದ ಗುಂಡಿಗೆ ಬಾಳೆಗಿಡ ನೆಟ್ಟು ವಿರೋಧ ವ್ಯಕ್ತಪಡಿಸಿದ ಸ್ಥಳದಲ್ಲಿ ಇಂದು ಮತ್ತೆ ಮೆಸ್ಕಾಂ ಕಂಬ ಹಾಕಿದ ಬಳಿಕ ವಿರೋಧ ವ್ಯಕ್ತವಾಗಿ ಹಾಕಿದ ಕಂಬವನ್ನು ಕಿತ್ತು ಕೊಂಡುಹೋದ ಘಟನೆ ದುಗ್ಗಲಡ್ಕದಿಂದ ವರದಿಯಾಗಿದೆ.

ದುಗ್ಗಲಡ್ಕದ ಮುಖ್ಯ ಪೇಟೆಯಲ್ಲಿ ಸುಳ್ಯದ ಲೋಕೇಶ್ ರವರು ಕಮರ್ಷಿಯಲ್ ಕಾಂಪ್ಲೆಕ್ಸ್ ಒಂದನ್ನು ನಿರ್ಮಿಸುತ್ತಿದ್ದಾರೆ.ಅದರ ಎದುರು ಕರೆಂಟ್ ಕಂಬ ಇದ್ದು ಅದನ್ನು ಸ್ಥಳಾಂತರಿಸಬೇಕೆಂದು ಮೆಸ್ಕಾಂಗೆ ಮನವಿ ಮಾಡಿದ್ದರು. ಅದರಂತೆ ಕೆಲವು ದಿನಗಳ ಹಿಂದೆ ಕಂಬ ಸ್ಥಳಾಂತರಕ್ಕೆ ಮೆಸ್ಕಾಂನವರು ಬಂದಾಗ ನಮ್ಮ ಕಟ್ಟಡಕ್ಕೆ ಸಮಸ್ಯೆಯಾಗುತ್ತದೆ ಎಂದು ಸಿಎ ಬ್ಯಾಂಕ್ ನವರು, ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದರಿಂದ ತೋಡಿದ ಗುಂಡಿಯನ್ನು ಬಿಟ್ಟು ತೆರಳಿದರು. ತೋಡಿದ ಗುಂಡಿಗೆ ರಾತ್ರಿ ಬಾಳೆಗಿಡ ನೆಟ್ಟು ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.
ಇಂದು ಮತ್ತೆ ಅದೇ ಸ್ಥಳದಲ್ಲಿ ಕಂಬ ಹಾಕಲು ಜೆಇ ಸುಪ್ರಿತ್ ರವರ ನೇತೃತ್ವದಲ್ಲಿ ಕಂಬ ತಂದು ಬಾಳೆಗಿಡ ನೆಟ್ಟ ಜಾಗದಲ್ಲಿ ಕಂಬ ಹಾಕಿದರು. ಆಗ ಸ್ಥಳೀಯರು ಮತ್ತೆ ವಿರೋಧ ವ್ಯಕ್ತಪಡಿಸಿದರು. ಜನ ಸೇರಿದರು.ವಿಷಯ ತಿಳಿದು ಸುಳ್ಯದಿಂದ ಸಿ.ಎ.ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯ, ಸುಭೋದ್ ಶೆಟ್ಟಿ ಮೇನಾಲ, ಹೇಮಂತ್ ಕುಮಾರ್ ಕಂದಡ್ಕ, ಬಿಜೆಪಿ ಮುಖಂಡರಾದ ಹರೀಶ್ ಕಂಜಿಪಿಲಿ,ಸುನಿಲ್ ಕೇರ್ಪಳ, ಶಶಿಕಲಾ ನೀರಬಿದಿರೆ, ದಿನೇಶ್ ಡಿ‌.ಕೆ.ಮೊದಲಾದವರು ಬಂದು ಸಾರ್ವಜನಿಕರಿಗೆ ತೊಂದರೆಯಾಗುವ ಈ ಕಂಬವನ್ನು ತೆಗೆಯಬೇಕೆಂದು ತಾಕೀತು ಮಾಡಿದರು. ಮೆಸ್ಕಾಂ ಇಂಜಿನಿಯರ್ ಮತ್ತು ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆಯಿತೆಂದು ತಿಳಿದುಬಂದಿದೆ. ಬಳಿಕ ಹಾಕಿದ ಕಂಬವನ್ನು ಕಿತ್ತು ತೆಗೆದುಕೊಂಡು ಹೋದರೆಂದು ತಿಳಿದುಬಂದಿದೆ. ವಿವಾದದ ಇತ್ಯರ್ಥಕ್ಕಾಗಿ ಹೊಸ ಕಂಬವನ್ನು ಹಾಕದೆ ಇದ್ದ ಕಂಬವನ್ನೇ ಎತ್ತರಿಸಿ ಹಾಕುವ ಪ್ರಸ್ತಾಪವೂ ಬಂತೆಂದು ತಿಳಿದುಬಂದಿದೆ.