ಸುಳ್ಯ ವಕೀಲರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ
ಸುಳ್ಯ ನ್ಯಾಯಾಲಯದ ಮೂವರು ನ್ಯಾಯಾಧೀಶರು ಬೇರೆಡೆಗೆ ವರ್ಗಾವಣೆಗೊಂಡಿದ್ದು ಸುಳ್ಯ ತಾಲೂಕು ವಕೀಲರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ ಮೇ 18 ರಂದು ಸುಳ್ಯ ವಕೀಲರ ಸಂಘದ ಸಭಾ ಭವನದಲ್ಲಿ ನಡೆಯಿತು.















ಕಳೆದ 3 ವರ್ಷಗಳಿಂದ ಸುಳ್ಯ ಹಿರಿಯ ಸಿವಿಲ್ ನ್ಯಾಯಲಯದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ ಮೋಹನ್ ಬಾಬು ರವರು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದು, ಸುಳ್ಯ ಸಿವಿಲ್ ನ್ಯಾಯಾಲಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರಥಮ ಬಾರಿಗೆ ಸಿವಿಲ್ ಮಹಿಳಾ ನ್ಯಾಯಾಧೀಶರಾಗಿ ಕರ್ತವ್ಯ ಸಲ್ಲಿಸುತ್ತಿದ್ದ ಕು. ಅರ್ಪಿತಾ ರವರು ಉತ್ತರ ಕರ್ನಾಟಕ ಜಿಲ್ಲೆಯ ಭಟ್ಕಳ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆ ಹೊಂದಿರುತ್ತಾರೆ.

ನ್ಯಾಯಾಧೀಶೆ ಕು.ಅರ್ಪಿತಾ ರವರು ತರಬೇತಿ ರಜೆಯಲ್ಲಿ ಇದ್ದ ಸಂದರ್ಭ ಪುತ್ತೂರು ನ್ಯಾಯಾಲಯದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನ್ಯಾಯಾಧೀಶ ಶಿವಣ್ಣ ಎಚ್ ಅರ್ ರವರು ಸುಳ್ಯಕ್ಕೆ ವಾರದ ಒಂದು ದಿನ ಬಂದು ಕಲಾಪವನ್ನು ನಡೆಸಿಕೊಡುತ್ತಿದ್ದರು. ಇದೀಗ ಅವರು ಕೂಡ ಮೈಸೂರು ಜೆಎಂಎಫ್ಸಿ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದು ಈ ಮೂರು ನ್ಯಾಯಾಧೀಶರುಗಳನ್ನು ಬೀಳ್ಕೊಡುವ ಸಮಾರಂಭ ಸುಳ್ಯ ವಕೀಲರ ಸಂಘದ ವತಿಯಿಂದ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿರವರು ವಹಿಸಿದ್ದರು.ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಸುಳ್ಯ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕರುಗಳಾದ ಮೋಹನ್ ವೈ ಎಸ್ ಹಾಗೂ ಕು. ಪ್ರೀತಿ ರವರು ಉಪಸ್ಥಿತರಿದ್ದರು.
ಹಿರಿಯ ವಕೀಲರುಗಳಾದ ದಳ ಸುಬ್ರಾಯ ಭಟ್, ಕೆ ನಾರಾಯಣ್, ರವೀಂದ್ರನಾಥ್ ರೈ, ಸುಧಾಕರ ನೆಟ್ಟಾರು, ಜಗದೀಶ್ ಹುದೇರಿ ರವರುಗಳು ಈ ಸಂದರ್ಭದಲ್ಲಿ ಮಾತನಾಡಿ ನ್ಯಾಯಾಧೀಶರುಗಳ ಕರ್ತವ್ಯ ಮತ್ತು ಅವರ ಉತ್ತಮ ಕಾರ್ಯ ವೈಖರಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಅವರ ಮುಂದಿನ ಸೇವಾ ಜೀವನಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು,ಸುಳ್ಯ ನ್ಯಾಯಾಲಯದ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು, ನ್ಯಾಯಾಲಯದ ಸಿಬ್ಬಂದಿ ವರ್ಗದವರು, ಆರಕ್ಷಕ ಸಿಬ್ಬಂದಿಗಳು ಭಾಗವಹಿಸಿದ್ದರು.
ಸಂಘದ ಕಾರ್ಯದರ್ಶಿ ಹರೀಶ್ ಬೂಡುಪನ್ನೆ ಕಾರ್ಯಕ್ರಮ ನಿರೂಪಿಸಿ ಉಪಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಸ್ವಾಗತಿಸಿ ಕ್ರೀಡಾ ಕಾರ್ಯದರ್ಶಿ ಕುಸುಮಾದರ ಕುತ್ತಿಮುಂಡ ವಂದಿಸಿದರು.
ವರ್ಗಾವಣೆ ಗೊಂಡಿರುವ ನ್ಯಾಯಾಧೀಶರುಗಳಿಗೆ ಸಂಘದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ಕೊನೆಯಲ್ಲಿ ಭೋಜನಕೂಟವನ್ನು ಏರ್ಪಡಿಸಲಾಗಿತ್ತು.







