ಯೋಗವು ಆರೋಗ್ಯಕರ ಬದುಕಿನ ದಿವ್ಯ ಮಂತ್ರ – ದಿನೇಶ್ ಮಡ್ತಿಲ














ಸುಳ್ಯದ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ. 19ರಂದು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಶಾಲಾ ನಿರ್ದೇಶಕಿ ಡಾ. ಜ್ಯೋತಿ ಆರ್ ಪ್ರಸಾದ್ ಶುಭ ಹಾರೈಸಿದರು. ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕೆವಿಜಿ ಐಟಿಐ ಪ್ರಾಂಶುಪಾಲರಾದ ದಿನೇಶ್ ಮಡ್ತಿಲ ಯೋಗದ ಮಹತ್ವವನ್ನು ವಿವರಿಸಿ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನಕ್ಕಾಗಿ ಯೋಗಾಭ್ಯಾಸವನ್ನು ಪ್ರತಿದಿನ ಜೀವನದ ಭಾಗವಾಗಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಉಪ ಪ್ರಾಂಶುಪಾಲೆ ಶ್ರೀಮತಿ ಶಿಲ್ಪ ಬಿದ್ದಪ್ಪ ಮಾತನಾಡಿ, ಯೋಗವು ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆಯಾಗಿದ್ದು, ಆರೋಗ್ಯಕರ ಜೀವನಶೈಲಿಗೆ ದಾರಿದೀಪವಾಗಿದೆ ಎಂದು ತಿಳಿಸಿದರು. ಯೋಗ ದಿನಾಚರಣೆಯ ಕುರಿತು 8ನೇ ತರಗತಿಯ ವಿದ್ಯಾರ್ಥಿ ವಿಹಾನ್ ಮಾತಾಡಿ, ಅಂತಾರಾಷ್ಟ್ರೀಯ ಯೋಗ ದಿನದ ಇತಿಹಾಸ, ಉದ್ದೇಶ ಹಾಗೂ ಇಂದಿನ ಸಮಾಜದಲ್ಲಿ ಯೋಗದ ಅಗತ್ಯತೆಯನ್ನು ವಿವರಿಸಿದರು. ಅಮರ ರತ್ನ ಹಾಗೂ ಯೋಗ ಕಲಸಿರಿ ಪ್ರಶಸ್ತಿ ವಿಜೇತರಾದ ಯೋಗಗುರು ಸಂತೋಷ್ ಮುಂಡಕಜೆ ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ನೀಡಿ, ಅವುಗಳ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಯೋಗಾಭ್ಯಾಸದಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮವನ್ನು 8ನೇ ತರಗತಿಯ ವಿದ್ಯಾರ್ಥಿನಿ ಸಮೃದ್ಧಿ ನಿರೂಪಿಸಿ, ಮಾನ್ವಿ ವಂದಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.







