ಮಹಿಳೆಯರಲ್ಲಿ ಋತುಬಂಧದ ವಯಸ್ಸಿನಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳು ಹಾಗೂ ನಿರ್ವಹಣೆ

0
   ಹೆಣ್ಣಿನ ಬದುಕಿನಲ್ಲಿ ಪ್ರತಿಯೊಂದು ಹಂತ ಕೂಡ ಮುಖ್ಯವಾದದ್ದು. ಹೆಣ್ಣು ತಾನು ಮಗುವಾಗಿ ಹುಟ್ಟಿ,ಕಿಶೋರಾವಸ್ಥೆ, ಋತು ಮತಿ, ತಾಯಿಯಾಗಿ ಕೊನೆಗೆ ಮುಪ್ಪಾಗುವುದು ಇವಳ ಜೀವನ ಕ್ರಮ. ಇದರಲ್ಲಿ ಮುಟ್ಟು ನಿಲ್ಲುವುದು ಅಥವಾ ಋತುಬಂಧ ಎಂಬುದು ಆರೋಗ್ಯ ದೃಷ್ಟಿಯಿಂದ ಮಹತ್ವದ ಪಾತ್ರ ವಹಿಸುತ್ತದೆ.45 ರ ಆಸುಪಾಸಿನ ಮಹಿಳೆಯರಲ್ಲಿ ಸಮಯಕ್ಕೆ ಸರಿಯಾಗಿ ಮುಟ್ಟು ಆಗದಿರುವುದು, ಮೈ ಕೈ ಬಿಸಿ ಬಿಸಿ ಆದಾಗ ಹಾಗೆ ಆಗುವುದು ಈ ರೀತಿಯ ಕೆಲವೊಂದು ಸಮಸ್ಯೆಗಳನ್ನು ಕಾಣಬಹುದು. ಇದೆಲ್ಲ ಋತುಬಂಧದ ಲಕ್ಷಣಗಳು. ಹಾಗಾಗಿ, ಹೆಣ್ಣೊಬ್ಬಳು ಈ ಸಮಯದಲ್ಲಿ ಹೇಗೆ ಸದೃಢವಾಗಿರ ಬೇಕೆಂದು ತಿಳಿಯೋಣ.

ಏನಿದು ಋತುಬಂಧ ಹಾಗೂ ಲಕ್ಷಣಗಳೇನು
ಹೆಣ್ಣು ಋತುಮತಿಯಾದ ಮೇಲೆ ತಿಂಗಳು ತಿಂಗಳು ಮುಟ್ಟಾಗುತ್ತಾಳೆ. ಕೊನೆಗೆ ತನ್ನ ಮಧ್ಯ ವಯಸ್ಸಿಗೆ ಬಂದ ಮೇಲೆ ಮುಟ್ಟು ನಿಲ್ಲುತ್ತದೆ.ಒಬ್ಬ ಮಹಿಳೆಯಲ್ಲಿ ಸತತ 12 ತಿಂಗಳಿನವರೆಗೆ ಮುಟ್ಟು ನಿಂತರೆ ಅದನ್ನು ಋತುಬಂಧ ಎಂದು ಕರೆಯುತ್ತಾರೆ.
ಇದು ಅಂದಾಜು 40 ರಿಂದ 55 ವರ್ಷದ ಒಳಗೆ ಆಗುವ ಸಾಧ್ಯತೆ ಇದೆ. ಮುಟ್ಟು ಸರಿಯಾಗಿ ಆಗುವ ಸಮಯದಲ್ಲಿ ಪ್ರೊಜೆಸ್ಟರಾನ್ ಹಾಗೂ ಈಸ್ಟ್ರೋಜನ್ ಎನ್ನುವ ಹಾರ್ಮೋನ್ ಗಳು ಸರಿಯಾಗಿ ಕೆಲಸ ಮಾಡುತ್ತಿರುತ್ತವೆ.ಮುಟ್ಟು ನಿಂತ ಮೇಲೆ ಇದರ ಕೆಲಸ ಕುಂಠಿತವಾಗುತ್ತದೆ. ಆ ಸಂದರ್ಭದಲ್ಲಿ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.ಕೆಲವೊಮ್ಮೆ ಈ ಲಕ್ಷಣ ಮುಟ್ಟು ನಿಲ್ಲುವ ಮೂರು ವರ್ಷದ ಒಳಗೆ ಕಾಣಿಸುವ ಸಾಧ್ಯತೆ ಇರುತ್ತದೆ.
ಲಕ್ಷಣಗಳು:
ಮೈ ಕೈ ಬಿಸಿ ಆಗುವುದು, ನೆತ್ತಿ ಸುಟ್ಟ ಹಾಗೆ ಆಗುವುದು,ಕಿವಿಯಿಂದ ಬಿಸಿ ಗಾಳಿ ಬಂದ ಹಾಗೆ ಅನಿಸುವುದು, ರಾತ್ರಿಯ ಹೊತ್ತು ಬೆವರುವುದು, ಸರಿಯಾಗಿ ನಿದ್ರೆ ಬಾರದಿರುವುದು, ಮೈಕೈ ನೋವು,ಕೂದಲು ಉದುರುವುದು ,ತೂಕ ಏರೋದು,ಯೋನಿಯ ಭಾಗದಲ್ಲಿ ಡ್ರೈ ಆಗೋದು ಇದೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಉದಾಸಿನ,ಜಡತ್ವ,ಸಿಟ್ಟಾಗುವುದು ಸಿಡುಕುವುದು,ಮುಂಗೋಪ, ಖಿನ್ನತೆ,ಭಾವತೀವ್ರತೆ ಇತ್ಯಾದಿ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತದೆ.
ಮುಟ್ಟು ನಿಲ್ಲುವ ಸಮಯದಲ್ಲಿ ಕಾಡುವ ಸಮಸ್ಯೆಗೆ ಪರಿಹಾರ
ಮುಟ್ಟು ನಿಲ್ಲುವುದು ಹೆಣ್ಣಿನ ದೇಹದ ನೈಸರ್ಗಿಕ ಪ್ರಕ್ರಿಯೆ.ಈ ಸಮಸ್ಯೆಗೆ ಸರಿಯಾದ ಜೀವನ ಶೈಲಿ ಯನ್ನು ಪಾಲಿಸುವುದೊಂದೆ ಪರಿಹಾರ. ಸರಿಯಾದ ಆಹಾರ ಪದ್ಧತಿ, ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
ಆರೋಗ್ಯಯುಕ್ತ ಆಹಾರ ಪದ್ಧತಿ:
ಮೆನೊಪಾಸ್ ಮಹಿಳೆಯರು ಪ್ರೋಟೀನ್ ಹೆಚ್ಚಾಗಿ ಬಳಸುವುದರಿಂದ ಮಾಂಸಖಂಡಗಳು ಗಟ್ಟಿಯಾಗುತ್ತದೆ.ಹಾಗಾಗಿ, ಚರ್ಮ ಜೋತು ಬೀಳುವುದು,ಗರ್ಭಕೋಶ ಹೊರಗೆ ಜಾರುವುದನ್ನು ತಡೆಯುತ್ತದೆ. ಜೊತೆಗೆ,ಚರ್ಮದ ಕಾಂತಿಯನ್ನು ಕೂಡ ಹೆಚ್ಚಿಸುತ್ತದೆ. -ಕೆಟ್ಟ ಕೊಬ್ಬಿನಾಂಶ ಹಾಗೂ ಕಾರ್ಬೋಹೈಡ್ರೇಟ್ ಆಹಾರವನ್ನು ಆದಷ್ಟು ಕಡಿಮೆ ಬಳಸಬೇಕು.
-ಹಾಗಾಗಿ ಅತಿ ಹೆಚ್ಚು ಹಣ್ಣು ಹಂಪಲು,ತರಕಾರಿ ಸೊಪ್ಪು,ಮೀನು,ಮೊಟ್ಟೆ,ಕೋಳಿ, ಮೊಳಕೆ ಕಾಳು,ರಾಗಿ, ಗೋಧಿ,ಕಜೆಅಕ್ಕಿ ಅನ್ನ,ಸಿರಿಧಾನ್ಯ ಆಹಾರವನ್ನು ಸೇವಿಸಬೇಕು.
-ಸಸ್ಯಜನ್ಯ ಈಸ್ಟ್ರೋಜನ್ ಅಂಶ ಇರುವ ತರಕಾರಿಗಳಾದ ಅಗಸೆ ಬೀಜ,ಗೆಡ್ಡೆ ಕೋಸ್ ಗಳಾದ ಕ್ಯಾಬೇಜ್, ಎಲೆಕೋಸ್,ಹೂ ಕೋಸು, ನವಿಲುಕೋಸು ಇತ್ಯಾದಿ ಕೋಸ್ ತರಕಾರಿಗಳನ್ನು ಸೇವಿಸಬೇಕು.
-ಒಮೆಗಾದಂತಹ ಒಳ್ಳೆಯ ಕೊಬ್ಬಿನಂಶ ಇರುವ ಆಹಾರ ಪದಾರ್ಥಗಳಾದ ಮೀನು, ಅಗಸೆ ಬೀಜ,ಬಾದಾಮಿ ಸೇವನೆ ಒಳ್ಳೆಯದು.
-ರಾಗಿ, ಎಳ್ಳು,ಮೀನು,ಮೊಟ್ಟೆ ,ಮೊಳಕೆ ಕಾಳು ಇತ್ಯಾದಿ ಹೆಚ್ಚು ಕ್ಯಾಲ್ಸಿಯಂ ಅಂಶವನ್ನು ಹೊಂದಿದ್ದು ಮೈ ಕೈ ನೋವು,ಸೊಂಟ ನೋವು ನಿಂದ ರಕ್ಷಣೆ ಕೊಡುತ್ತದೆ.
-ಚೆನ್ನಾಗಿ ನೀರು ಕುಡಿಯುವುದರಿಂದ ದೇಹದ ಕಲ್ಮಶಗಳೆಲ್ಲ ಹೊರಗೆ ಹೋಗಿ ದೇಹ ಶುದ್ಧಿಯಾಗುತ್ತದೆ.

ನಿರಂತರ ವ್ಯಾಯಾಮ ಯೋಗಭ್ಯಾಸ ದೇಹ ಹಾಗೂ ಮನಸ್ಸನ್ನು ನಿಯಂತ್ರಣದಲ್ಲಿರಿಸುತ್ತದೆ 
ಕೆಲವೊಂದು ಯೋಗ ಅಭ್ಯಾಸ, ವ್ಯಾಯಾಮ ಗರ್ಭಾಶಯವನ್ನು ಸದೃಢವಾಗಿರಿಸುತ್ತದೆ. ಹಾಗೂ ಮೂಳೆಗಳ ಮಾಂಸಖಂಡದ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ. 

-ಪ್ರಾಣಾಯಾಮ,ಧ್ಯಾನ ಮಾಡುವುದರಿಂದ ಮನಸ್ಸನ್ನು ಹತೋಟಿಯಲ್ಲಿರಿಸಬಹುದು.
-ಸರಿಯಾದ ನಿದ್ರೆ ಹಾರ್ಮೋನ್ ವ್ಯತ್ಯಾಸದಿಂದ ಬರುವ ಒತ್ತಡವನ್ನು ನಿವಾರಿಸುತ್ತದೆ.
-ಕೆಲವೊಂದು ಯೋಗಿಕ್ ಕ್ರಿಯಗಳು ಗರ್ಭಕೋಶ ಜೋತುಬೀಳುವುದನ್ನು ತಡೆದು ಅದನ್ನು ಬಲಪಡಿಸುತ್ತದೆ.
ಋತುಬಂಧ ಒಂದು ನೈಸರ್ಗಿಕ ಪ್ರಕ್ರಿಯೆ ಆಗಿರುವುದರಿಂದ ಅದು ತನ್ನಿಂದ ತಾನೇ ಗುಣವಾಗುತ್ತದೆ. ಆದರೆ ಕೆಲವರಲ್ಲಿ ಸರಿಯಾದ ಜೀವನ ಕ್ರಮವನ್ನು ಆರಿಸದಿದ್ದಾಗ ಮಾತ್ರ ತೊಂದರೆ ಕೊಡುತ್ತದೆ. ಸಮಸ್ಯೆಗಳು ತೀವ್ರತೆಯನ್ನು ಹೊಂದಿದ್ದರೆ ದಯವಿಟ್ಟು ನಿಮ್ಮ ವೈದ್ಯರನ್ನು ಭೇಟಿ ಮಾಡಿ ಸಲಹೆಯನ್ನು ಪಡೆದುಕೊಳ್ಳಿ.

ಡಾ|| ಗ್ರೀಷ್ಮಾ ಗೌಡ ಆರ್ನೋಜಿ
ವೈದ್ಯರು
ಸಂಪೂರ್ಣ ಕ್ಲಿನಿಕ್ ಬೀದಿಗುಡ್ಡೆ