ತೊಡಿಕಾನ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ

0

ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು, ಪೋಷಕರಿಂದ ಕಣ್ಣೀರ ವಿದಾಯ

ತೊಡಿಕಾನ ಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ದುಡಿದು ವಿದ್ಯಾರ್ಥಿಗಳ ಮೇಲೆ ಹಾಗೂ ಊರವರ ನೆಚ್ಚಿನ ಶಿಕ್ಷಕರಾಗಿ ಮನಗೆದ್ದ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಅವರು ತಮ್ಮ ತವರು ಜಿಲ್ಲೆಯಾದ ಚಾಮರಾಜಪೇಟೆಗೆ ವರ್ಗಾವಣೆಗೊಂಡಿದ್ದು, ಹಾಗೂ ಶಾಲಾ ಸಹ ಶಿಕ್ಷಕಿ ಶ್ರೀಮತಿ ಮಮತಾ ಇವರು ಆರ್ ಎಂ ಎಸ್ ಸಂಪಾಜೆಗೆ ವರ್ಗಾವಣೆಗೊಂಡಿದ್ದು ಇವರಿಬ್ಬರಿಗೂ ಶಾಲಾ ಎಸ್ ಡಿ ಎಂ ಸಿ, ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಜೂನ್ 25ರಂದು ನಡೆಯಿತು.

ಶಾಲಾ ಮುಖ್ಯ ಶಿಕ್ಷಕರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ಅರುಣ್ ಕುಮಾರ್ ಅವರು ಶಾಲೆಯಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿದ್ದರು. ಶಾಲೆಗೆ ಬೇಕಾದ ಬಹುತೇಕ ಸೌಲಭ್ಯಗಳನ್ನು ಸರಕಾರ, ಜನಪ್ರತಿನಿಧಿಗಳು ಹಾಗೂ ದಾನಿಗಳ ಮೂಲಕ ತರಿಸಿಕೊಂಡು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದರು. ಕಳೆದ ವರ್ಷ ಅತ್ಯಂತ ಅದ್ದೂರಿಯಾಗಿ ಶಾಲೆಯ ವಜ್ರ ಮಹೋತ್ಸವವನ್ನು ಊರವರ ನೇತೃತ್ವದಲ್ಲಿ ಸಂಘಟಿಸಿ ಅದರಲ್ಲಿ ಯಶಸ್ವಿಯಾಗಿದ್ದರು. ಶಾಲಾ ಮಕ್ಕಳೊಂದಿಗೆ, ಊರವರೊಂದಿಗೆ, ಅಧಿಕಾರಿಗಳ ಜೊತೆಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಶಾಲೆಯ ನೆಚ್ಚಿನ ಶಿಕ್ಷಕರಾಗಿದ್ದರು. ಇವರು ಕಳೆದ ಏಪ್ರಿಲ್ ತಿಂಗಳಲ್ಲಿ ತಮ್ಮ ತವರು ಜಿಲ್ಲೆಗೆ ವರ್ಗಾವಣೆಗೊಂಡಿದ್ದರು.

ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ನವೀನ್ ಅಮೆಮನ ವಹಿಸಿದ್ದರು. ಶಾಲೆಗೆ ನೂತನವಾಗಿ ದೀಪವನ್ನು ನೀಡಿದ ವರ್ಗಾವಣೆಗೊಂಡ ಶಿಕ್ಷಕಿ ಮಮತಾರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಅಡ್ತಲೆ , ಸಿ ಆರ್ ಪಿ ಶ್ರೀಮತಿ ಮಮತಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ, ಗೋಪಾಲಕೃಷ್ಣ ಬನ, ಗುತ್ತಿಗೆದಾರರಾದ ಮಹೇಶ್ ಕುತ್ತಮೊಟ್ಟೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಸುಂದರ ಬಾಜಿನಡ್ಕ, ಎಸ್ ಡಿ ಎಂ ಸಿ ಉಪಾಧ್ಯಕ್ಷ ಸೌಮ್ಯ ಭಟ್, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಭವಾನಿ ಚಿಟ್ಟನ್ನೂರು, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ತಿಮ್ಮಯ್ಯ ಮೆತಡ್ಕ ವೇದಿಕೆಯಲ್ಲಿದ್ದರು.

ಶಾಲಾ ಸಹ ಶಿಕ್ಷಕಿ ಸ್ನೇಹಲತಾ, ಗೂನಡ್ಕ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹನುಮಂತಪ್ಪ ಇವರಿಬ್ಬರು ವರ್ಗಾವಣೆಗೊಂಡ ಶಿಕ್ಷಕರ ಕುರಿತು ಮಾತನಾಡಿದಾಗ ವಿದ್ಯಾರ್ಥಿಗಳೆಲ್ಲರೂ ಮಿಕ್ಕಿ ಬಿಕ್ಕಿ ಅಳತೊಡಗಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳ ಪೋಷಕರು ಹಾಗೂ ವೇದಿಕೆಯಲ್ಲಿದ್ದ ಅತಿಥಿಗಳು ಕೂಡ ಅರುಣ್ ಕುಮಾರ್ ಅವರ ಸೇವೆಯನ್ನು ನೆನೆದು ಕಣ್ಣೀರಾದರು.

ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಅಧ್ಯಾಪಕ ವೃಂದದವರು ತಮ್ಮ ನೆಚ್ಚಿನ ಶಿಕ್ಷಕರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ನೆರೆಯ ಶಾಲೆಯ ಶಿಕ್ಷಕರುಗಳು ವಿದ್ಯಾರ್ಥಿಗಳ ಪೋಷಕರು ಹಾಗೂ ಊರವರು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ ಎಲ್ಲರನ್ನೂ ಸ್ವಾಗತಿಸಿದರು. ಸಹ ಶಿಕ್ಷಕ ಬಲರಾಜ್ ವಂದಿಸಿದರು. ಶಾಲಾ ಶಿಕ್ಷಕರಾದ ಶ್ರೀಮತಿ ಸುನಿತಾ, ಶ್ರೀಮತಿ ನಾಗವೇಣಿ, ಕುಮಾರಿ ವಿದ್ಯಾಶ್ರೀ, ಅಡುಗೆ ಸಿಬ್ಬಂದಿಗಳು ಹಾಗೂ ಎಸ್ ಡಿ ಎಂ ಸಿ ಸದಸ್ಯರು ಸಹಕರಿಸಿದರು. ಗೌರವ ಶಿಕ್ಷಕ ಕಮಲಾಕ್ಷ ಹಾಗೂ ಸಹಶಿಕ್ಷಕಿ ಸ್ನೇಹಲತಾ ಕಾರ್ಯಕ್ರಮ ನಿರೂಪಿಸಿದರು.