ಸ್ಥಳೀಯ ಮೂವರಿಂದ ಯುವಕನಿಗೆ ಹಲ್ಲೆ, ಪೊಲೀಸ್ ಠಾಣೆಯಲ್ಲಿ ದೂರು














ಯುವಕನೊಬ್ಬ ಓರ್ವ ಯುವತಿಯೊಂದಿಗೆ ಜಾಲ್ಸೂರು ಬಳಿ ನದಿಯ ತಟದಲ್ಲಿ ಪ್ರೇಮ ಸಲ್ಲಾಪದಲ್ಲಿ ಇದ್ದರು ಎಂದು ಆರೋಪಿಸಿ ಸ್ಥಳೀಯ ಮೂವರು ನಿವಾಸಿಗಳು ಆ ಯುವಕನಿಗೆ ಥಳಿಸಿದ ಹಾಗೂ ಹಲ್ಲೆ ನಡೆಸಿರುವವರ ಮೇಲೆ ಯುವಕ ಸುಳ್ಯ ಠಾಣೆಗೆ ಬಂದು ದೂರು ನೀಡಿರುವ ಘಟನೆ ಜೂ.30 ರಂದು ನಡೆದಿದೆ.
ಚಾಲ್ಸೂರು ಗ್ರಾಮದ ಮಾಬಲಡ್ಕ ನದಿತೀರದಲ್ಲಿ ಈ ಘಟನೆ ನಡೆದಿದ್ದು ಹಲ್ಲೆಗೊಳಗಾದ ಯುವಕ ಸುಳ್ಯದ ಜಯನಗರ ನಿವಾಸಿ ಭವಿಷ್ ಎಂದು ತಿಳಿದುಬಂದಿದೆ.
ತಾನು ತನ್ನ ಗೆಳತಿಯೊಂದಿಗೆ ಮಹಾಬಲಡ್ಕ ನದಿ ತೀರದಲ್ಲಿ ಫೋಟೋ ತೆಗೆಯುತ್ತಿರುವಾಗ ಅಲ್ಲಿಗೆ ಮೂವರು ವ್ಯಕ್ತಿಗಳು ಬಂದು ಅವಾಚ್ಯ ಶಬ್ದಗಳಿಂದ ಬೈದು ನೀವು ಹೊಳೆದಡಕ್ಕೆ ವೀಕ್ಷಣೆಗೆ ಬಂದು ಮಾಲಿನ್ಯ ಮಾಡುತ್ತೀರ ಎಂದು ಗದರಿಸಿದ್ದು ಈ ವೇಳೆ ತಾನು ಮೋಟಾರು ಸೈಕಲ್ನಲ್ಲಿ ಹೊರಟಾಗ ಮೋಟಾರು ಸೈಕಲ್ನ್ನು ಅಕ್ರಮವಾಗಿ ತಡೆದು ಮೋಟಾರು ಸೈಕಲ್ನ ಕೀಯನ್ನು ತೆಗೆದು ಹಲ್ಲೆ ಮಾಡಿರುವುದಾಗಿ ಭವಿಷ್ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸುಳ್ಯ ಪೊಲೀಸರು ದೂರನ್ನು ಸ್ವೀಕರಿಸಿ ಆರೋಪಿಗಳಾದ ಜನಾರ್ಧನ, ವಸಂತ, ಅರವಿಂದ ಎಂಬವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು
ಹಲ್ಲೆಯಿಂದ ಯುವಕನ ಕೈಗೆ ಮತ್ತು ಮುಖದ ಭಾಗಕ್ಕೆ ತರಚಿದ ಗಾಯವಾಗಿ ಯುವಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.
ಭವಿಷ್ ಕೂಡ ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದು ಒಬ್ಬರಿಗೆ ತುಟಿಯಲ್ಲಿ ರಕ್ತ ಬರುವ ಗಾಯವಾಗಿದೆ.
ಈ ಬಗ್ಗೆ ವಸಂತ ರವರ ಬಳಿ ವಿಚಾರಿಸಿದಾಗ ” ಯುವಕ ಯುವತಿಯೊಂದಿಗೆ ಪರಿಸರದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ. ಇದನ್ನು ನಾವು ಪ್ರಶ್ನಿಸಿ ಅಲ್ಲಿಂದ ಹೋಗಲು ಹೇಳಿದಾಗ ಆತ ನಮ್ಮಲ್ಲಿ ಓರ್ವರ ಮೇಲೆ ಹಲ್ಲೆ ಮಾಡಿದ. ಈ ಸಂದರ್ಭದಲ್ಲಿ ನಾವು ಯುವಕನನ್ನು ತಡೆದು ಅಲ್ಲಿಂದ ಕಳುಹಿಸಿರುವುದಾಗಿ” ತಿಳಿಸಿದ್ದಾರೆ.







