ಕೆವಿಜಿ ಐಪಿಎಸ್‌ನಲ್ಲಿ ವಿದ್ಯಾರ್ಥಿ ನಾಯಕತ್ವದ ಪದಗ್ರಹಣ ಸಮಾರಂಭ

0

ವಿದ್ಯಾರ್ಥಿಗಳೇ ಸಮಾಜದ ಮುಂದಿನ ನಾಯಕರು: ಪ್ರಶಾಂತ್ ಕುಮಾರ್ ಪೈ

ಸುಳ್ಯದ ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ ಪದಗ್ರಹಣ ಸಮಾರಂಭವು ಡಾ. ಕುರುಂಜಿ ವೆಂಕಟರಮಣ ಗೌಡ ಸಮುದಾಯ ಭವನದಲ್ಲಿ ಜು. 3ರಂದು ನಡೆಯಿತು.


ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ. ಹಾಗೂ ನಿರ್ದೇಶಕಿ ಡಾ. ಜ್ಯೋತಿ ಆರ್. ಪ್ರಸಾದ್ ಶುಭ ಹಾರೈಸಿದರು. ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಶಾಲಾ ಮುಖ್ಯ ವಿದ್ಯಾರ್ಥಿಯಾಗಿ ಮೋಹಕ್ ಕೆ, ಮುಖ್ಯ ವಿದ್ಯಾರ್ಥಿನಿಯಾಗಿ ಪ್ರತೀಕ್ಷಾ, ಉಪ ಮುಖ್ಯ ವಿದ್ಯಾರ್ಥಿಯಾಗಿ ಶ್ರುತರಾಜ್ ಬಿ.ಎಸ್., ಉಪ ಮುಖ್ಯ ವಿದ್ಯಾರ್ಥಿನಿಯಾಗಿ ಫಾತಿಮತ್ ಝಿಬ ಸೇರಿದಂತೆ ವಿವಿಧ ಸಚಿವ ಸ್ಥಾನಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳು ಅಧಿಕಾರ ಸ್ವೀಕರಿಸಿದರು.
ಹೌಸ್ ನಾಯಕರಾಗಿ ವೀಕ್ಷಿತ್ ಎ.ಎಸ್. (ರೆಡ್ ರೂಬಿ), ದಿಶಾಂತ್ ರೈ (ಗ್ರೀನ್ ಎಮರಾಲ್ಡ್), ಅಕ್ಷಯ್ ಕಟ್ಟಕೋಡಿ (ಬ್ಲೂ ಸಫೈರ್) ಹಾಗೂ ಮುಹಮ್ಮದ್ ಹುಸೇನ್ ಪಿ.ಎಚ್. (ಯೆಲ್ಲೋ ಡೈಮಂಡ್) ಅಧಿಕಾರ ವಹಿಸಿಕೊಂಡರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುಳ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ ನೂತನ ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್ ಹಾಗೂ ಅಧಿಕಾರ ಚಿಹ್ನೆಗಳನ್ನು ಪ್ರದಾನ ಮಾಡಿ ಮಾತನಾಡುತ್ತಾ “ವಿದ್ಯಾರ್ಥಿಗಳೇ ನಮಗೆ ಸ್ಪೂರ್ತಿದಾಯಕರು ಹಾಗೂ ಸಮಾಜದ ಮುಂದಿನ ನಾಯಕರು. ನಾಯಕತ್ವ ಎಂದರೆ ಜವಾಬ್ದಾರಿಯುತ ಸೇವೆ. ವಿದ್ಯಾರ್ಥಿಗಳು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಬೆಳೆಸಿಕೊಂಡು ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕು” ಎಂದರು.
ಶಾಲಾ ಪ್ರಾಂಶುಪಾಲ ಅನಿಶ್ ನಾಧ್ ಇ.ಎಂ. ನೂತನ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಮಾತನಾಡಿ, “ನಾಯಕತ್ವ ಎಂದರೆ ಅಧಿಕಾರವಲ್ಲ, ಸೇವೆ ಮತ್ತು ಜವಾಬ್ದಾರಿ. ವಿದ್ಯಾರ್ಥಿಗಳು ಶಿಸ್ತು, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವವನ್ನು ಅಳವಡಿಸಿಕೊಂಡು ಶಾಲೆಯ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು” ಎಂದರು.
ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಕೆವಿಜಿ ಡೆಂಟಲ್ ಕಾಲೇಜಿನ ನಿರ್ದೇಶಕ ಮೌರ್ಯ ಆರ್. ಕುರುಂಜಿ ಮಾತನಾಡಿ, “ಇಂದಿನ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಸದಾ ಮುಕ್ತ ಮನೋಭಾವ ಹೊಂದಿರಬೇಕು. ಪ್ರತಿದಿನ ಹೊಸದನ್ನು ಕಲಿಯುವ ಹಂಬಲವೇ ವ್ಯಕ್ತಿತ್ವ ವಿಕಾಸ ಮತ್ತು ಯಶಸ್ಸಿನ ಮೂಲವಾಗಿದೆ” ಎಂದರು. ನಂತರ ಮಾತನಾಡಿದ ಶಾಲಾ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ ಅಡ್ತಲೆ, “ಉತ್ತಮ ಶಿಸ್ತು, ಸಮಯಪ್ರಜ್ಞೆ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಆದರ್ಶ ಪ್ರಜೆಗಳಾಗಿ ರೂಪುಗೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆ” ಎಂದರು.


ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿನಿಯರು ಸುಮಧುರ ಗೀತೆ ಹಾಡಿದರು.
ಕಾರ್ಯಕ್ರಮವನ್ನು 9ನೇ ತರಗತಿಯ ಬೃಂದಾ ಜಿ. ರಾವ್ ಹಾಗೂ 10ನೇ ತರಗತಿಯ ಮಾನ್ಯ ನಿರೂಪಿಸಿದರು. 10ನೇ ತರಗತಿಯ ಧನ್ವಿ ರಮಣ್ ಸ್ವಾಗತಿಸಿ, ಪ್ರತ್ಯುಷ್ ವಂದಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಸಂತೋಷ್ ಕುತ್ತ ಮುಟ್ಟೆ, ಪಿ.ಎಸ್. ಗಂಗಾಧರ, ಶಾಲಾ ಉಪಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ, ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ, ಕೆವಿಜಿ ಡೆಂಟಲ್ ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ., ಪ್ರಸನ್ನ ಕಲ್ಲಾಜೆ, ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಲ್ಲಿ ನಾಯಕತ್ವ, ಜವಾಬ್ದಾರಿ ಹಾಗೂ ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಪದಗ್ರಹಣ ಸಮಾರಂಭವು ಅರ್ಥಪೂರ್ಣವಾಗಿ ನೆರವೇರಿತು.