ರಿಕ್ಷಾ ಪ್ರಯಾಣ ದರ ಏರಿಕೆಗೆ ಚಾಲಕರ ಒತ್ತಾಯ

0

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಸ್ತೆ ಸಾರಿಗೆ ಪ್ರಾಧಿಕಾರ ಸಭೆ

ರಿಕ್ಷಾ ಚಾಲಕರ ಬೇಡಿಕೆ ಪರಿಶೀಲನೆ- ಜಿಲ್ಲಾಧಿಕಾರಿ ಭರವಸೆ

ಇಂಧನ, ಎಲ್‌ಪಿಜಿ, ಸಿಎನ್‌ಜಿ ದರ, ವಾಹನ ನಿರ್ವಹಣೆ ವೆಚ್ಚ ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಟೊ ರಿಕ್ಷಾ ಕನಿಷ್ಠ ಪ್ರಯಾಣ ದರವನ್ನು ಈಗಿರುವ 35ರೂ.ನಿಂದ 5೦ ರೂ.ಗೆ ಪರಿಷ್ಕರಿಸಬೇಕು. ಅಲ್ಲದೆ, ಪ್ರತಿ ಕಿ.ಮೀ.ಗೆ ಈಗಿರುವ 15ರೂ.ನಿಂದ 3೦ ರೂ.ಗೆ ಏರಿಸುವಂತೆ ಆಟೊ ರಿಕ್ಷಾ ಚಾಲಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಪರಿಷ್ಕೃತ ಆಟೋ ದರಗಳನ್ನು ಪ್ರಕಟಿಸುವ ಮುನ್ನ ರಿಕ್ಷಾ ಚಾಲಕರ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭರವಸೆ ನೀಡಿದರು.


ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದಲ್ಲಿ ಗುರುವಾರ ರಸ್ತೆ ಸಾರಿಗೆ ಪ್ರಾಧಿಕಾರ (ಆರ್‌ಟಿಎ)ದ ಸಭೆಯಲ್ಲಿ ತಮ್ಮ ಹಲವು ಬೇಡಿಕೆಗಳನ್ನು ರಿಕ್ಷಾ ಚಾಲಕರು ಪ್ರಸ್ತಾಪಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಸಂಯೋಜಿತ ಆಟೋ ಚಾಲಕರ ಸಂಘದ ಅರುಣ್ ಕುಮಾರ್ ಮಾತನಾಡಿ, ಇಂಧನ ಬೆಲೆಯಲ್ಲಿನ ತೀವ್ರ ಏರಿಕೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿದೆ. ಉಚಿತ ಕಾಯುವ ಅವಧಿಯನ್ನು ಪ್ರಸ್ತುತ ಇರುವ 15 ನಿಮಿಷದಿಂದ 1೦ ನಿಮಿಷಕ್ಕೆ ಇಳಿಸುವಂತೆ ಒತ್ತಾಯಿಸಿದರು.

ಪ್ರತ್ಯೇಕ ದರ ಬೇಡಿಕೆ: ತಾಲೂಕು ಸೇರಿದಂತೆ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ದರ ವ್ಯವಸ್ಥೆ ಜಾರಿಗೆ ತರಬೇಕು. ಗ್ರಾಮಾಂತರ ವಲಯಗಳಲ್ಲಿ ನೋಂದಣಿಯಾಗಿರುವ ಆಟೋಗಳು ಮಂಗಳೂರು ನಗರದಲ್ಲಿ ಕಾರ್ಯ ನಿರ್ವಹಿಸುವುದನ್ನು ಈ ವ್ಯವಸ್ಥೆ ತಡೆಯಲಿದೆ ಎಂದು ಕರ್ನಾಟಕ ಚಾಲಕರ ಒಕ್ಕೂಟದ ಸಂಚಾಲಕ ಗಣೇಶ್ ಆರ್. ಮನವಿ ಮಾಡಿದರು.


ದಕ್ಷಿಣ ಕನ್ನಡ ಆಟೋ ಮಾಲೀಕರು ಮತ್ತು ಚಾಲಕರ ಒಕ್ಕೂಟದ ಅಧ್ಯಕ್ಷ ಭರತ್ ಕುಮಾರ್ ಮಾತನಾಡಿ, ಕೆಲವು ಸಿಎನ್‌ಜಿ ಮತ್ತು ಎಲ್‌ಪಿಜಿ ಸ್ಟೇಶನ್‌ಗಳಲ್ಲಿ ಇಂಧನ ವಿತರಣೆಯಲ್ಲಿ ವ್ಯತ್ಯಾಸಗಳಿವೆ. ಇದರಿಂದ ಮೈಲೇಜ್ ಬದಲಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ನಿರ್ದಿಷ್ಟ ದೂರುಗಳು ಬಂದರೆ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸುತ್ತಾರೆ, ಇದುವರೆಗೆ ಯಾವುದೇ ವ್ಯತ್ಯಾಸಗಳು ಕಂಡುಬಂದಿಲ್ಲ ಎಂದು ಹೇಳಿದರು.
ಐದು ನಿಮಿಷಗಳ ಉಚಿತ ಕಾಯುವಿಕೆಯ ನಂತರ ಪ್ರತಿ ನಿಮಿಷಕ್ಕೆ 2ರೂ.ಶುಲ್ಕ ವಿಧಿಸಬೇಕು ಎಂದು ಕರ್ನಾಟಕ ಪ್ರಗತಿಪರ ಆಟೋ ಚಾಲಕರ ಸಂಘದ ಮೋಹನ್ ಆಗ್ರಹಿಸಿದರು. ರಾತ್ರಿ ಪ್ರಯಾಣ ದರ ಮತ್ತು ಲಗೇಜ್ ಶುಲ್ಕಗಳನ್ನೂ ಪರಿಷ್ಕರಣೆ ಮಾಡಬೇಕು ಎಂದು ಹಲವು ರಿಕ್ಷಾ ಚಾಲಕರ ಪ್ರತಿನಿಧಿಗಳು ಮನವಿ ಮಾಡಿದರು. ದ.ಕ. ಜಿಲ್ಲಾ ಎಸ್ಪಿ ಡಾ. ಅರುಣ್ ಕೆ, ಡಿಸಿಪಿ (ಅಪರಾಧ ಮತ್ತು ಸಂಚಾರ) ರವಿಶಂಕರ್ ಕೆ., ಸಾರಿಗೆ ಉಪ ಆಯುಕ್ತ ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಿ. ಶಿರೋಲ್ಕರ್ ಇದ್ದರು.


ಬಿಎಮ್‌ಎಸ್‌ನಿಂದ ವಿವಿಧ ಬೇಡಿಕೆಗಳ ಮನವಿ: ಭಾರತೀಯ ಮಜ್ದೂರ್ ಸಂಘದಿಂದ ವಿವಿಧ ಬೇಡಿಕೆಗಳನ್ನು ಸಭೆಯಲ್ಲಿ ಮಂಡಿಸಲಾಯಿತು.
ಭಾರತೀಯ ಮಜ್ದೂರ್ ಸಂಘದ ಸಂಯೋಜಿತ ಮೋಟಾರ್ ಮತ್ತು ಜನರಲ್ ಮಜ್ದೂರ್ ಸಂಘದ ಪರವಾಗಿ ಜಿಲ್ಲಾ ಅಧ್ಯಕ್ಷ ವಕೀಲ ಅನಿಲ್ ಕುಮಾರ್ ಯು ಅವರು ಆಟೋರಿಕ್ಷಾ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸಂಘದ ನಿಲುವನ್ನು ಸಭೆಯಲ್ಲಿ ಮಂಡಿಸಿದರು.


ಬೇಡಿಕೆಗಳು: ಕನಿಷ್ಠ ಬಾಡಿಗೆ (1.5 ಕಿ.ಮೀ.) ರೂ.5೦ ಹಾಗೂ ನಂತರದ ಪ್ರತಿ ಕಿ.ಮೀ.ಗೆ ರೂ.3೦ ನಿಗದಿಪಡಿಸಬೇಕು.ಕಾಯುವ ದರ,ರಾತ್ರಿ ಬಾಡಿಗೆ ಹಾಗೂ ಲಗೇಜ್ ದರವನ್ನು ಪರಿಷ್ಕರಿಸಬೇಕು.ಗ್ರಾಮಾಂತರ ಹಾಗೂ ಮಹಾನಗರ ಪ್ರದೇಶಗಳಿಗೆ ಪ್ರತ್ಯೇಕ ಬಾಡಿಗೆ ದರ ನಿಗದಿಪಡಿಸಬೇಕು.ಎಲ್‌ಪಿಜಿ, ಸಿಎನ್‌ಜಿ, ಇಂಧನದ ನಿರಂತರ ಲಭ್ಯತೆಯನ್ನು ಖಚಿತಪಡಿಸಬೇಕು. ಇಂಧನ ದರ ಏರಿಕೆಗೆ ಅನುಗುಣವಾಗಿ ಸ್ವಯಂಚಾಲಿತ ದರ ಪರಿಷ್ಕರಣೆ ವ್ಯವಸ್ಥೆ ಜಾರಿಗೆ ತರಬೇಕು.ಟೈರ್, ಟ್ಯೂಬ್, ಬ್ಯಾಟರಿ, ಸ್ಪೇರ್ ಪಾರ್ಟ್ಸ್ ಹಾಗೂ ಇತರೆ ವಾಹನ ನಿರ್ವಹಣಾ ಸಾಮಗ್ರಿಗಳ ಮೇಲೆ ರಿಯಾಯಿತಿ ಅಥವಾ ಸಹಾಯಧನ ನೀಡಲು ಸಂಬಂಧಪಟ್ಟ ಇಲಾಖೆಗಳ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಬಿಎಮ್‌ಎಸ್ ಅಧಿಕಾರಿಗಳಿಗೆ ಮನವಿ ಮಾಡಿದೆ.ಬಿಎಮ್‌ಎಸ್ ಪರವಾಗಿ ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್ ಮನಿಹಳ್ಳ, ಜಿಲ್ಲಾ ಉಪಾಧ್ಯಕ್ಷ ನಾರಾಯಣ ಪೂಜಾರಿ, ಬಂಟ್ವಾಳದ ಶ್ರೀಕಾಂತ್, ಪುತ್ತೂರಿನ ಹೇಮಂತ್ ಕುಮಾರ್, ಸಚಿನ್, ಸೀತಾರಾಮ್, ಬೆಳ್ತಂಗಡಿಯ ಕೃಷ್ಣ, ಪ್ರಶಾಂತ್, ವಸಂತ ವೇಣೂರು, ಮೂಡಬಿದ್ರೆಯ ದೀಪಕ್‌ರಾಜ್, ನವೀನ್, ರಾಜೇಶ್, ಸುಳ್ಯದ ಪ್ರಕಾಶ್ ಎಂ.ಎಸ್., ನಾರಾಯಣ ಶಾಂತಿನಗರ, ರವಿ ಜಾಲ್ಸೂರು ಹಾಗೂ ಬಜ್ಪೆಯ ನಾಗೇಶ್ ಉಪಸ್ಥಿತರಿದ್ದರು.

ಮನವಿಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಪರಿಷ್ಕೃತ ಆಟೋ ದರಗಳನ್ನು ಪ್ರಕಟಿಸುವ ಮುನ್ನ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.