ದಿ. ಡಾ| ಗಿರೀಶ್ ಭಾರದ್ವಾಜರಿಗೆ ಕೇರ್ಪಳದಲ್ಲಿ ಶ್ರದ್ಧಾಂಜಲಿ ಸಭೆಭಸ್ಮೇಶ್ವರ ದೇವಸ್ಥಾನ ನಿರ್ಮಾಣ ಭಾರದ್ವಾಜರ ಕನಸು. ಅದನ್ನು ಈಡೇರಿಸಲು ಎಲ್ಲರೂ ಜತೆಯಾಗೋಣ : ನುಡಿನಮನ

0

ಜು.೭ರಂದು ನಿಧನರಾದ ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ದಿ| ಗಿರೀಶ್ ಭಾರದ್ವಾಜರಿಗೆ ಶ್ರೀ ಭಸ್ಮೇಶ್ವರ ಸಾನಿಧ್ಯ ಶಕ್ತಿ, ಪಯಸ್ವಿನಿ ಯುವಕ ಮಂಡಲ ಕೇರ್ಪಳ, ಭಗವತೀ ಯುವ ಸೇವಾ ಸಂಘ ಬೂಡು – ಕೇರ್ಪಳ – ಕುರುಂಜಿಗುಡ್ಡೆ ಇದರ ವತಿಯಿಂದ ಶ್ರದ್ಧಾಂಜಲಿ ಸಭೆಯು ಸುಳ್ಯ ಕೇರ್ಪಳ ಬಂಟರ ಭವನದಲ್ಲಿ ಜು.೧೧ರಂದು ನಡೆಯಿತು.


ಗಿರೀಶ್ ಭಾರದ್ವಾಜರ ಭಾವಚಿತ್ರದ ಎದುರು ಶ್ರೀಭಸ್ಮೇಶ್ವರ ಸಾನಿಧ್ಯ ಶಕ್ತಿ ಟ್ರಸ್ಟ್‌ನ ಕೋಶಾಧಿಕಾರಿ ಜನಾರ್ದನ ನಾಯ್ಕ್ ಹಾಗೂ ಟ್ರಸ್ಟಿಗಳಾದ ಬಾಲಕೃಷ್ಣ ಮಣಿಯಾಣಿಯವರು ದೀಪ ಬೆಳಗಿದರೆ, ನಿವೃತ್ತ ಉಪನ್ಯಾಸಕ ಲಿಂಗಪ್ಪ ಗೌಡ ಕೇರ್ಪಳ ಪುಷ್ಪಾರ್ಚನೆಗೈದರು.
ಎಸ್.ಬಿ. ಲ್ಯಾಬ್‌ನ ಮಾಲಕ ಬಾಲಕೃಷ್ಣ ಎಸ್.ಬಿ.ಯವರು ಗಿರೀಶ್ ಭಾರದ್ವಾಜರ ಕುರಿತು ಮಾತನಾಡಿ, ಅವರ ಬದುಕು, ಸಾಧನೆ, ಜೀವನಾದರ್ಶಗಳ ಕುರಿತು ವಿವರವಾಗಿ ಮಾತನಾಡಿದರು. ಬಳಿಕ ಭಗವತೀ ಯುವ ಸೇವಾ ಸಂಘದ ಗೌರವಾಧ್ಯಕ್ಷ ಬೂಡು ರಾಧಾಕೃಷ್ಣ ರೈ, ಆಯಶಿಲ್ಪದ ದ್ಯೋಗಿ ಸುಭಾಶ್ ಡಿ.ಕೆ., ಭಗವತೀ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್ ಕೇರ್ಪಳ, ಶ್ರೀಮತಿ ಜಯಲಕ್ಷ್ಮೀ ದಯಾನಂದ, ಶ್ರೀಭಸ್ಮೇಶ್ವರ ಸಾನಿಧ್ಯ ಶಕ್ತಿ ಟ್ರಸ್ಟ್‌ನ ಕೋಶಾಧಿಕಾರಿ ಜನಾರ್ದನ ನಾಯ್ಕ್, ಕೃಷಿಕರಾದ ಡಿ.ಬಿ. ಬಾಲಕೃಷ್ಣ, ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ರೈ ಉಬರಡ್ಕ, ಪಯಸ್ವಿನಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಚಂದ್ರಶೇಖರ ಕೇರ್ಪಳ ನುಡಿನಮನ ಸಲ್ಲಿಸಿ, “ಗಿರೀಶ್ ಭಾರದ್ವಾಜರು ಊರಿನಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಮಾರ್ಗದರ್ಶನ ನೀಡುತ್ತಿದ್ದರು. ಸುಳ್ಯದ ಹೆಸರನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದು ಸುಳ್ಯಕ್ಕೆ ಕೀರ್ತಿ ತಂದವರು. ದೇವಸ್ಥಾನ ಆಗಬೇಕೆಂದು ಕಂಡು ಬಂದಾಗ ತಮ್ಮ ಜಾಗವನ್ನು ಅರ್ಪಣೆ ಮಾಡುವುದಾಗಿ ಹೇಳಿದ್ದಾರೆ. ಟ್ರಸ್ಟ್ ನ ಅಧ್ಯಕ್ಷರೂ ಆಗಿದ್ದರು. ದೇವಸ್ಥಾನ ಆಗಬೇಕೆಂಬುದು ಅವರ ಕನಸು. ಎಲ್ಲರೂ ಸೇರಿ ಅದನ್ನು ಈಡೇರಿಸಲು ಜತೆಯಾಗಿ ನಿಲ್ಲೋಣ. ಅವರ ಆದರ್ಶಗಳೇ ನಮಗೆ ದಾರಿದೀಪವಾಗಬೇಕು” ಎಂದು ಹೇಳಿದರು. ಸಭೆಯ ಆರಂಭದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಗಾಯಕಿ ಶ್ರೀಮತಿ ಆರತಿ ಪುರುಷೋತ್ತಮ್ ಗೀತ ನಮನ ಸಲ್ಲಿಸಿದರು. ಸಭೆಯ ಕೊನೆಯಲ್ಲಿ ಭಾಗವಹಿಸಿದ ಎಲ್ಲರೂ ಪುಷ್ಪ ನಮನ ಸಲ್ಲಿಸಿದರು.


ಪಯಸ್ವಿನಿ ಯುವಕ ಮಂಡಲದ ಅಧ್ಯಕ್ಷ ವಿನ್ಯಾಸ್ ಕುರುಂಜಿ ಸ್ವಾಗತಿಸಿದರು. ಚಂದ್ರಶೇಖರ ಕೇರ್ಪಳ ವಂದಿಸಿದರು. ಶಿವಪ್ರಸಾದ್ ಕೇರ್ಪಳ ಕಾರ್ಯಕ್ರಮ ನಿರ್ವಹಿಸಿದರು.