ಅಧ್ಯಕ್ಷರಾಗಿ ಗಣೇಶ್ ಪ್ರಸಾದ್ ,ಕಾರ್ಯದರ್ಶಿ ತೇಜಸ್ ಕಳಿಗೆ ಪುನರಾಯ್ಕೆ














ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯು ಜು. 26, ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಪ್ರಸಾದ್ ನಾಯರ್ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾl ದಿನೇಶ್ ಪಿ.ಟಿ. ಅವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ತೇಜಸ್ ಕಳಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಸಮಗ್ರ ಚರ್ಚೆ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಕೌಶಲ್ಯಾಧಾರಿತ (Skill-Oriented) ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ಉದ್ಯೋಗ ಕೌಶಲ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ನುರಿತ ತಜ್ಞರನ್ನು ಆಹ್ವಾನಿಸಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.
ಸಂಘದ ಕಾರ್ಯದರ್ಶಿ ತೇಜಸ್ ಕಳಿಗೆ ಅವರು 2025–26ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ಬಳಿಕ ಸಂಘದ ಪುನರ್ರಚನೆ ನಡೆಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಗಣೇಶ್ ಪ್ರಸಾದ್ ,ಕಾರ್ಯದರ್ಶಿ ತೇಜಸ್ ಕಳಿಗೆ ಮರು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಭಾರತಿ ದಿನೇಶ್, ದೀಪಕ್ ನಂಬಿಯಾರ್
ಜಂಟಿ ಕಾರ್ಯದರ್ಶಿಗಳಾಗಿ ಪವನ್ ಎಂ.ಡಿ., ಪ್ರದೀಪ್ ಕಳಿಗೆ
ಖಜಾಂಚಿ ನಿತಿನ್ ಕುಮಾರ್
ಗೌರವ ಸದಸ್ಯರಾಗಿ ವಿಮಲಾ ರಂಗಯ್ಯ, ಲೋಕೇಶ್ ಬಿ.ಎನ್., ಡಾ. ಕುಶಾಲಪ್ಪ
ನಿರ್ದೇಶಕರುಗಳಾಗಿ ದಿನೇಶ್ ಎಸ್.ಎನ್., ಪದ್ಮಕುಮಾರ್, ಸುಹಾಸ್, ಅಖಿಲ್ ನಾಯರ್, ಗುರುಪ್ರಸಾದ್ ಮೆನ್ನಾಡ್, ಉಮೇಶ್ ಶೆಟ್ಟಿ, ಗೋವರ್ಧನ್ ಕೆ.ಸಿ. ರವರನ್ನು ನೇಮಿಸಲಾಯಿತು.
ಸಂಯೋಜಕಿಯರಾಗಿ ಪ್ರಮೀಳಾ ಎನ್. ಹಾಗೂ ಪುಷ್ಪಾ ಡಿ. ಅವರನ್ನು ನೇಮಿಸಲಾಯಿತು.
ಸಭೆಯಲ್ಲಿ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ. ಪದವಿ ಆರಂಭಿಸುವ ಕುರಿತು ವಿಸ್ತೃತ ಚರ್ಚೆ ನಡೆಯಿತು. ಅಲ್ಲದೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪುರುಷರ ಮತ್ತು ಮಹಿಳೆಯರ ಪ್ರತ್ಯೇಕ ವಸತಿ ನಿಲಯಗಳನ್ನು ಆರಂಭಿಸುವ ಕುರಿತು ಸಹ ಅಭಿಪ್ರಾಯಗಳು ವ್ಯಕ್ತವಾದವು.
ಇತ್ತೀಚಿನ ವರ್ಷಗಳಲ್ಲಿ ಪದವಿ ಶಿಕ್ಷಣಕ್ಕೆ ವಿದ್ಯಾರ್ಥಿಗಳ ಪ್ರವೇಶ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳನ್ನು ಆಕರ್ಷಿಸಲು ಹಾಗೂ ಅವರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಸದಸ್ಯರು ಅಭಿಪ್ರಾಯಪಟ್ಟರು. ಇಂತಹ ಕಾರ್ಯಕ್ರಮಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ಹಳೆ ವಿದ್ಯಾರ್ಥಿ ಸಂಘದಿಂದ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯ ಪವನ್ ಎಂ.ಡಿ. ಅವರು ಕಾಲೇಜಿನಲ್ಲಿ ಕ್ರೀಡಾ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಿ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಹಳೆ ವಿದ್ಯಾರ್ಥಿ ಸುಹಾಸ್ ಅವರು ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಕುಸುಮ ಸಾರಂಗ ಚಟುವಟಿಕೆಯನ್ನು ಪುನರಾರಂಭಿಸಬೇಕೆಂದು ಸಲಹೆ ನೀಡಿದರು. ಜೊತೆಗೆ, ಯಕ್ಷಗಾನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಹಳೆ ವಿದ್ಯಾರ್ಥಿಗಳು ಒಮ್ಮತ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕಿ ಪುಷ್ಪಾ ಡಿ. ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ತೇಜಸ್ ಕಳಿಗೆ ಅವರು ಧನ್ಯವಾದ ಸಲ್ಲಿಸಿದರು.
ಸಭೆಯಲ್ಲಿ ಹಳೆ ವಿದ್ಯಾರ್ಥಿಗಳ ಸಕ್ರಿಯ ಸಹಭಾಗಿತ್ವದೊಂದಿಗೆ ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿ, ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿ, ಉದ್ಯೋಗಮುಖಿ ತರಬೇತಿ ಕಾರ್ಯಕ್ರಮಗಳು ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವ ಸಂಕಲ್ಪವನ್ನು ವ್ಯಕ್ತಪಡಿಸಲಾಯಿತು.







