ಸಾಮಾಜಿಕ ಸಾಮರಸ್ಯ ಮತ್ತು ಸಹಬಾಳ್ವೆಯ ಮಾದರಿಗಾಗಿ ಭಾರತ್ ಜೋಡೋ ಯುವ ಸಂಘ ರಚನೆ

0


ಸುಳ್ಯ ಬ್ಲಾಕ್ ಕಾಂಗ್ರೆಸ್ ಪತ್ರಿಕಾ ಗೋಷ್ಠಿ

ಜಾತ್ಯತೀತ ಮನೋಭಾವದವರು ಅರ್ಜಿ ಸಲ್ಲಿಸಲು ಕರೆ

ಸಾಮಾಜಿಕ ಸಾಮರಸ್ಯ ಹಾಗೂ ಸಹೋದರತೆ ಸಹಬಾಳ್ವೆಯನ್ನು ಉತ್ತೇಜಿಸುವುದಕ್ಕಾಗಿ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ನಗರ ವಾರ್ಡ್ ಗಳಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಆಸಕ್ತ ಜಾತ್ಯತೀತ ಮನೋಭಾವದ ಯುವಜನರು ಸಂಘ ಸೇರಲು ಅರ್ಜಿ ಸಲ್ಲಿಸಬಹುದೆಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಹಾಗೂ ಬ್ಲಾಕ್ ಕಾಂಗ್ರೆಸ್ ಹಾಲಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ.
ಆ.5 ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಈ ಕರೆ ನೀಡಿದರು.

ಎಂ.ವೆಂಕಪ್ಪ ಗೌಡರು ಮಾತನಾಡಿ “ಭಾರತ ದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಜಾತಿ ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸಿ ಜನರ ನಡುವೆ ಪ್ರೀತಿಯ ಬಾಳಿಗೂ ಕುಂದು ಬರುವಂತಹ ಘಟನೆಗಳು ನಡೆಯುತ್ತಿವೆ. ಒಂದು ಧರ್ಮದವರು ಇನ್ನೊಂದು ಧರ್ಮದವರನ್ನು ನೋಡದಂತಹ ಪರಿಸ್ಥಿತಿ ಕೆಲವು ಬಾರಿ ಸೃಷ್ಟಿಯಾಗುತ್ತದೆ. ಈ ಮುಖಾಂತರ ಧರ್ಮ ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಪ್ರಸಂಗ ಕೂಡಾ ಕಂಡಿದ್ದೇವೆ. ಬಹುಶಃ ಇದು ನಿಲ್ಲಬೇಕು , ಇದರಿಂದ ದೇಶಕ್ಕೆ ಒಳ್ಳೆಯದಾಗುವುದಿಲ್ಲ. ಅಭಿವೃದ್ಧಿಗೂ ಒಳ್ಳೆಯದಲ್ಲ. ಬದಲಾಗಿ ಶಾಂತಿ ಇರಬೇಕು, ಎಲ್ಲರೂ ಅಣ್ಣ ತಮ್ಮಂದಿರಂತೆ ಒಟ್ಟಾಗಿ ಸಹಬಾಳ್ವೆ ಮಾಡಬೇಕು ಎಂಬುದು ನಮ್ಮ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಮತ್ತು ನಮ್ಮೆಲ್ಲರ ಆಶಯವಾಗಿದೆ. ಅಲ್ಲದೇ ಯಾವುದು ವಿಭಾಗ ಆಗುತ್ತಿದೆಯೋ ಆ ವಿಭಾಗವಾಗುವ ವಿಚಾರವನ್ನು ಜೋಡಣೆ ಮಾಡುವಂತಹ ಕೆಲಸವನ್ನು ಮಾಡಬೇಕು , ಹಾಗೂ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಭಾರತ್ ಜೋಡೋ ಕಾರ್ಯಕ್ರಮವನ್ನು ಹಮ್ಮಿಕೊಂಡು ಈ ಮುಖೇನ ಧರ್ಮ ಧರ್ಮಗಳ ಮಧ್ಯೆ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತ ತಕ್ಕವರನ್ನು ದೂರ ಮಾಡಬೇಕು ಹಾಗೂ ಎಲ್ಲಾ ಧರ್ಮದವರನ್ನು ಒಟ್ಟುಗೂಡಿಸಿಕೊಂಡು ರಾಷ್ಟ್ರೀಯ ಭಾವೈಕತೆ ನಿರ್ಮಾಣವಾಗಬೇಕು ಎಂಬುದು ರಾಷ್ಟ್ರದ ವಿಪಕ್ಷ ನಾಯಕರಾದ ರಾಹುಲ್ ಗಾಂಧಿಯವರ ಚಿಂತನೆಯಾಗಿದ್ದು, ಇಂದು ನಮ್ಮ ಕರ್ನಾಟಕದಲ್ಲಿ ಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ನೇತೃತ್ವದ ಸರಕಾರ ರಾಜ್ಯದಲ್ಲಿ ಭಾರತ್ ಜೋಡೋ ಯುವ ಸಂಘಟನೆಯನ್ನು ಸ್ಥಾಪಿಸುವ ನಿರ್ಧಾರ ಮಾಡಿದೆ. ಒಂದೊಂದು ಸಂಘಕ್ಕೂ ವರ್ಷಕ್ಕೆ 10 ಲಕ್ಷ ರೂ.ಗಳನ್ನು ಮೀಸಲಿರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ವರ್ಷಕ್ಕೆ 1000 ಕೋಟಿ ರೂ.ಗಳನ್ನು ಮೀಸಲಿರಿಸಲು ಸರಕಾರ ನಿರ್ಧರಿಸಿದೆ. ಪ್ರತೀ ಗ್ರಾಮದಲ್ಲು ಹಿಂದು , ಮುಸ್ಲಿಂ, ಕ್ರಿಶ್ಚಿಯನ್ ಎಂಬ ಬೇಧ, ಭಾವ ಇಲ್ಲದೆ ಜನರು ಪರಸ್ಪರ ಸಹಬಾಳ್ವೆಯಿಂದ ಬಾಳಬೇಕು. ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬುದು ಇದರ ಉದ್ದೇಶ ” ಎಂದು ಅವರು ತಿಳಿಸಿದರು .

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ” ಭಾರತ್ ಜೋಡೋ ಯುವ ಸಂಘಗಳ ಮುಖಾಂತರ ಯುವ ಶಕ್ತಿಗಳು ಸೇರಿ ದೇಶವನ್ನು ಕಟ್ಟುವಂತಹ ಕೆಲಸವನ್ನು ಮಾಡುವಂತಹದು ಇದರ ಮೂಲ ಉದ್ದೇಶವಾಗಿದೆ. ಇದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಹತ್ವದ ಯೋಜನೆಯಾಗಿದೆ” ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ , ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಮಾಜಿ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು , ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ. , ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.