ಇಷ್ಟು ಬೇಗ ಹೋಗುವುದಾದರೆ ಅದೇಕೆ ಅಷ್ಟು ಹತ್ತಿರವಾದೆ ಕವನ.. ?

0

✍️ ಸಿದ್ದೀಕ್ ಎಲಿಮಲೆ

ಬೆಳಗ್ಗೆಯೇ ಊರಿನಿಂದ ವಿಜಯಕಾಂತ್ ಕಳುಹಿಸಿದ ಮೆಸೇಜು ನೋಡಿ ಮೈಕೈ ಜುಮ್ಮೆನ್ನುತ್ತಿದೆ.. ಮಾವಿನಕಟ್ಟೆಯಲ್ಲಿರುವ ಕೆಲವೇ ಕೆಲವು ಗೆಳೆಯರಲ್ಲಿ ಅತೀ ಹತ್ತಿರದವನಾದ ಕವನ (ಕಿಶನ್) ಇನ್ನಿಲ್ಲ ಎಂಬ ಸತ್ಯ ನಂಬಲಾಗುತ್ತಿಲ್ಲ.

ಮೊನ್ನೆಯ ಅಪಘಾತದ ಸುದ್ದಿ ಕೇಳಿದ ಕ್ಷಣದಿಂದ ಹೇಗಾದರೂ ಬದುಕಿ ಬರಲಿ ಎಂದು ಪ್ರಾರ್ಥಿಸುತ್ತಿದ್ದ ನಮ್ಮೆಲ್ಲರ ಪ್ರಾರ್ಥನೆಯ ಉತ್ತರಕ್ಕೆ ಕಾಯದೆ ಕವನ ಇಂದು ಮುಂಜಾನೆ ಹೊರಟು ಹೋದ.

“ಚಿರಾಯು ಮಾವಿನಕಟ್ಟೆ” ಎಂಬ ಪುಟ್ಟ ತಂಡವನ್ನು ಕಟ್ಟಿಕೊಂಡು ಆಟೋಟಗಳ ಜೊತೆ ಊರಿನ ಸಾಮಾಜಿಕ ಕಾರ್ಯಗಳಲ್ಲೂ ಸಜೀವವಾಗಿ ಭಾಗಿಯಾಗುತ್ತಿದ್ದ ಕವನ ಇನ್ನಿಲ್ಲವೆಂದು ನಾನೇಗೆ ನಂಬಲಿ..?

ಊರಿನಲ್ಲಿ ನಡೆಯುವ ಯಾವುದೇ ಚಟುವಟಿಕೆಗಳ ಬಗ್ಗೆ ಮೊದಲು ನನಗೆ ಮೆಸೇಜು ಹಾಕಿ ಅಭಿಪ್ರಾಯ ಕೇಳುತ್ತಿದ್ದ ಕವನನ ಮೆಸೇಜು ಇನ್ನು ಬಾರದು..
ಮಾವಿನಕಟ್ಟೆ ದೈವಸ್ಥಾನ ಪರಿಸರದಲ್ಲಿ ಶ್ರಮದಾನವಿದೆ ಎಲ್ಲರೂ ಬಂದು ಸಹಕರಿಸಿ ಎಂದು ಚಿರಾಯು ಗ್ರೂಪಿನಲ್ಲಿ ಕವನನ ಶಬ್ದ ಇನ್ನು ಕೇಳಲಾಗದು.
ಮಾವಿನಕಟ್ಟೆಯಲ್ಲಿ ಮನೆಯೊಂದರ ಮೇಲೆ ರಾತ್ರಿ ಸುರಿದ ಮಳೆಗೆ ಬರೆ ಕುಸಿದು ಬಿದ್ದಿದೆ.. ಬನ್ನಿ ನಾವು ಹೋಗಿ ಮಣ್ಣು ತೆಗೆದು ಬರುವ ಎಂಬ ಕವನನ ಮೆಸೇಜು ನಮ್ಮ ಗ್ರೂಪಿನಲ್ಲಿ ಇನ್ನು ಕಾಣದು..
ರೋಗಿಯೊಬ್ಬರಿದ್ದಾರೆ, ನಮ್ಮಿಂದ ಏನಾದರೂ ಸಹಾಯ ಮಾಡಲಿಕ್ಕೆ ಆಗುತ್ತದಾ ಎಂದು ಕೇಳುವ ಕವನ… ಮಾವಿನಕಟ್ಟೆ ಶಾಲೆಯಲ್ಲಿ ಶ್ರಮದಾನವಿದೆ ಬನ್ನಿ ಎನ್ನಲು ಇನ್ನು ಕವನ ನಮ್ಮೊಂದಿಗೆ ಇಲ್ಲ..

ಇತ್ತೀಚೆಗೆ ಎರಡು ಗೆಳೆಯರ ಮಧ್ಯೆ ಪುಟ್ಟ ಜಗಳ ನಡೆದಾಗ ಇಬ್ಬರನ್ನೂ ಹತ್ತಿರ ಕರೆಸಿ ಮಾತನಾಡಿಸಿ ಕೈ ಕೈ ಕೊಡಿಸಿ ಪರಸ್ಪರ ಮಾತನಾಡಿಸಿ, ಆಲಿಂಗಿಸಿ ಕಳುಹಿಸಿದ ಕವನ.. ಇನ್ನು ಮಾವಿನಕಟ್ಟೆಯ ಮಣ್ಣಲ್ಲಿ ನಿನ್ನ ನೆನಪುಗಳು ಮಾತ್ರ ಎಂದು ನಾನೇಗೆ ಅರಗಿಸಿಕೊಳ್ಳಲಿ..

ಕೊರೋನಾ ಕಾಲದಲ್ಲಿ ನಿನ್ನ ಮನೆಯೇ ನಮಗೆ ಅಡುಗೆಕೋಣೆ ಆಗಿತ್ತು. ನಿನ್ನ ಮನೆ ಹಾಗೂ ನನ್ನ ಮನೆಯಂಗಳದಲ್ಲಿ ಚಿರಾಯು ತಂಡದ ಗೆಳೆಯರನ್ನು ಸೇರಿಸಿ ಅದೆಷ್ಟು ಪಾರ್ಟಿಗಳನ್ನು ಮಾಡಿದ್ದೇವೆ ನಾವು..?

ಎಲ್ಲವೂ ಇನ್ನು ನೆನಪುಗಳು ಮಾತ್ರ.. ಇಷ್ಟು ಬೇಗ ಹೋಗುವುದಾದರೆ ಅದೇಕೆ ಅಷ್ಟು ಹತ್ತಿರವಾದೆ ಗೆಳೆಯಾ.

— ಸಿದ್ದೀಕ್ ಎಲಿಮಲೆ