ಗೃಹಜ್ಯೋತಿ ಪರಿಶೀಲನೆ ತಾಲೂಕಿನಲ್ಲಿ ಶೇ.88 ಪ್ರಗತಿ: ಆ.31 ಕೊನೆಯ ದಿನ – ದಾಖಲೆ‌ ನೀಡದಿದ್ದರೆ ಯೋಜನೆ ಸ್ಥಗಿತ

0

ಗುರಿ ತಲುಪಲು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರ ಸೂಚನೆ

ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಜ್ಯೋತಿ ಪರಿಶೀಲನೆ ನಡೆಯುತ್ತಿದ್ದು ಈಗಾಗಲೇ ಶೇ.88 ಪ್ರಗತಿ ಸಾಧಿಸಲಾಗಿದೆ. ಆ.31 ಕೊನೆಯ ದಿನವಾಗಿರುವುದರಿಂದ ಗುರಿ ತಲುಪಲು ಅಧಿಕಾರಿಗಳು ಸರ್ವ ಪ್ರಯತ್ನ ನಡೆಸಬೇಕೆಂದು” ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್‌ ಹಮೀದ್ ಕುತ್ತಮೊಟ್ಟೆ ಸೂಚನೆ ನೀಡಿದ್ದಾರೆ.

ಆ.27ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾಹಿತಿ ನೀಡಿದ ಸುಳ್ಯ ಮೆಸ್ಕಾಂ ಎ.ಇ.ಇ. ಹರೀಶ್ ನಾಯ್ಕ್ ರವರು, “ಗೃಹಜ್ಯೋತಿ ಯೋಜನೆಯಲ್ಲಿ ಸುಳ್ಯ ಮೆಸ್ಕಾಂ‌ ವಿಭಾಗದಲ್ಲಿ 25947 ಗುರಿ ನೀಡಲಾಗಿದ್ದು 22776‌ ಪ್ರಗತಿ ಸಾಧಿಸಲಾಗಿದೆ. 3171 ಮನೆಗಳು‌ ಬಾಕಿ ಇದ್ದು ಅದರಲ್ಲಿ 1470 ಮಂದಿ‌ ತಾಂತ್ರಿಕ ಕಾರಣಗಳಿಂದ ಬಾಕಿಯಾಗಿದ್ದರೆ, 1701 ಬಾಕಿ ಇದೆ ಎಂದರು. ನಮ್ಮ ಸಿಬ್ಬಂದಿಗಳು ಮನೆ ಮನೆ ಭೇಟಿ ನೀಡಿದ್ದಾರೆ. ಕೆಲವು ಮನೆಯಲ್ಲಿ ಹಗಲು ಜನರಿರುವುದಿಲ್ಲ. ಕರೆ ಮಾಡಿ ಕಚೇರಿಗೆ ಬರುವಂತೆ ತಿಳಿಸಿದರೂ ಬರುತ್ತಿಲ್ಲ. ಕೆಲವು ಆಧಾರ್ ಅಪ್ ಡೇಟ್ ಆಗಿಲ್ಲ. ಓಟರ್ ಐಡಿ ಇಲ್ಲ ಇತ್ಯಾದಿ ಸಮಸ್ಯೆಗಳಿವೆ ಎಂದರು.

ಸುಬ್ರಹ್ಮಣ್ಯ ಮೆಸ್ಕಾಂ ಎ.ಇ.ಇ. ಸತೀಶ್ ಸಫಲ್ಯರು ಮಾಹಿತಿ ನೀಡಿ, ” ಸುಬ್ರಹ್ಮಣ್ಯ ಉಪವಿಭಾಗದಲ್ಲಿ 12923 ಗುರಿ ನೀಡಲಾಗಿದ್ದು, 11476 ಪ್ರಗತಿ ಆಗಿದೆ. 1447 ಒಟ್ಟು ಬಾಕಿ ಇದ್ದು, ಅದರಲ್ಲಿ ಮನೆ ಭೇಟಿ 420 ಮಾತ್ರ ಬಾಕಿ ಇರುವುದು. ಸಿಬ್ಬಂದಿಗಳು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅದರೆ ತಾಂತ್ರಿಕ ಕಾರಣಗಳಿಂದ‌ ಕೆಲವು ಬಾಕಿ‌ಇದೆ. ಗುರಿ ತಲುಪಲು ಪ್ರಯತ್ನ ನಡೆಸಲಾಗುವುದು” ಎಂದರು.

ಈ ವೇಳೆ ಮಾತನಾಡಿದ ಅಧ್ಯಕ್ಷ ಶಾಹುಲ್ ಹಮೀದ್ ರವರು, “ಆ.31 ಕೊನೆಯ ದಿನವಾಗಿರುವುದರಿಂದ ಗೃಹಜ್ಯೋತಿಯಲ್ಲಿ ತಾಲೂಕಿನಲ್ಲಿ ಗುರಿ ತಲುಪಬೇಕು. ಆದ್ದರಿಂದ ಬಾಕಿ ಇರುವುದನ್ನು ಆದಷ್ಟು ಶೀಘ್ರ ವಾಗಿ ಪ್ರಯತ್ನಿಸಿ. ದಾಖಲೆ‌ ನೀಡದಿದ್ದರೆ ಗೃಹಜ್ಯೋತಿ ಯೋಜನೆ ಸಿಗದಂತಾದೀತು. ಈ ಕುರಿತು ಆ ಮನೆಯವರಿಗೆ ತಿಳಿಸುವ ಕೆಲಸ ಆಗಬೇಕು. ಇವರು ಸಮಯಕ್ಕೆ ಸರಿಯಾಗಿ ದಾಖಲೆ ನೀಡದೇ ಯೋಜನೆ ರದ್ದಾದ ಬಳಿಕ ಸರಕಾರವನ್ನು ದೂರುವ ಕೆಲಸ ಆಗಬಾರದು” ಎಂದು ಹೇಳಿದರು.

ಅನುಷ್ಠಾನ ಸಮಿತಿ ಸದಸ್ಯರಾದ ಭವಾನಿಶಂಕರ ‌ಕಲ್ಮಡ್ಕ, ಶೇಖರ‌ ಕಣೆಮರಡ್ಕ, ಈಶ್ವರ ಆಳ್ವ, ಶಿಲ್ಪಾ ಇಬ್ರಾಹಿಂ ಮಾತನಾಡಿದರು.

ಗೃಹಲಕ್ಷ್ಮಿ‌ ಯೋಜನೆಯಲ್ಲಿ ಮೃತಪಟ್ಟ ಫಲಾನುಭವಿಗಳ 87 ಮನೆಯವರು ಹಣ ಡ್ರಾ ಮಾಡಿರುವುದು ಕಂಡು ಬಂದಿದ್ದು ಈ ಕುರಿತು ಬ್ಯಾಂಕ್ ನವರ ಮೂಲಕ ಮನೆಯವರ ಮನವೊಲಿಸಿ ಹಣ ಮರುಪಾವತಿಗೆ ಪ್ರಯತ್ನ ನಡೆಸಲಾಗುವುದು ಎಂದು ಸಿಡಿಪಿಒ ಶೈಲಜಾ ಮಾಹಿತಿ ನೀಡಿದರು.

ಈ ಕುರಿತು ಬ್ಯಾಂಕ್ ನಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಮತ್ತು ಎಲ್ಲ ಮನೆಯವರಿಗೂ ಹಣ ವಾಪಾಸ್ಸಾತಿಯ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೇಳಿದರು. ಈ ವಿಚಾರದಲ್ಲಿ ಸದಸ್ಯರು ಕೆಲವು ಸಲಹೆಗಳನ್ನು ನೀಡಿದರು.

ಇಕೆವೈಸಿ ಸೊಸೈಟಿಯಲ್ಲೇ ಮಾಡಿ

ಪಡಿತರ ಪಡೆಯುವ ಗ್ರಾಹಕರ ಇಕೆವೈಸಿ ಪಡೆಯುವ ಕಾರ್ಯ ಸೆ.1ರಿಂದ ನಡೆಯಲಿದೆ ಎಂದು ಆಹಾರ ಇಲಾಖೆಯ ಶ್ರೀಮತಿ ವಸಂತಿಯವರು ಮಾಹಿತಿ ನೀಡಿದರು.

“ಇಕೆವೈಸಿ ಸೈಬರ್, ಗ್ರಾಮ್ ಒನ್ ಕೇಂದ್ರದಲ್ಲಿ ಮಾಡಬಹುದೇ” ಎಂದು ಸದಸ್ಯ ಅಬ್ಬಾಸ್ ಕೇಳಿದಾಗ, “ಸೊಸೈಟಿಯಲ್ಲಿಯೇ ಇಕೆವೈಸಿ ಮಾಡಲಿ.‌ ಅದು ಉಚಿತವಾಗಿ ಮಾಡಬೇಕಾಗಿದೆ. ಸೈಬರಲ್ಲಿ ಹಣ ಪಡೆಯುತ್ತಾರೆ” ಎಂದು ಹೇಳಿದರು.
ಸರ್ವರ್ ಸಮಸ್ಯೆಯ ಕುರಿತು‌ ಸದಸ್ಯರಾದ ಈಶ್ವರ್ ಆಳ್ವ, ಭವಾನಿಶಂಕರ ಕಲ್ಮಡ್ಕ, ಇಬ್ರಾಹಿಂ ಮೊದಲಾದವರು ಗಮನ ಸೆಳೆದರು.

“ಅನ್ನಭಾಗ್ಯದ ಅಕ್ಕಿ ಅಂಗಡಿಯಲ್ಲಿ ಮಾರಾಟ ಮಾಡುವ ಕುರಿತು ನನಗೆ ದೂರುಗಳು ಬಂದಿವೆ. ಈ ಕುರಿತು ಪರಿಶೀಲನೆ ಮಾಡುವಂತೆ ” ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ತಿಳಿಸಿದರು.

“ಅಕ್ಕಿ ಮಾರಾಟ ಮಾಡುವುದು ತಿಳಿದರೆ ಅಂತವರ ರೇಶನ್ ಕಾರ್ಡ್ ರದ್ದು ಮಾಡಬೇಕಾಗುತ್ತದೆ. ಎಲ್ಲ‌ನ್ಯಾಯಬೆಲೆ‌ ಅಂಗಡಿಯಲ್ಲಿ ಈ‌ ಕುರಿತು ನೋಟೀಸ್ ಕೂಡಾ ಹಾಕಲಾಗಿದೆ” ಎಂದು ಅಧಿಕಾರಿ ಸಭೆಗೆ ಮಾಹಿತಿ‌ ನೀಡಿದರು.

ಕೊಡಿಯಾಲ, ಮಂಡೆಕೋಲು, ಅಜ್ಜಾವರ ‌ಭಾಗದ ಬಸ್ ಸೌಲಭ್ಯ ಕುರಿತು ಶೇಖರ್ ಕಣೆಮರಡ್ಕ, ಈಶ್ವರ ಆಳ್ವ, ಅಬ್ಬಾಸ್ ಪ್ರಸ್ತಾಪಿಸಿದರು.

ಸದಸ್ಯ ಕಾರ್ಯದರ್ಶಿ, ತಾ.ಪಂ. ಇ.ಒ. ರಾಜಣ್ಣ ಕಲಾಪ ನಡೆಸಿದರು.‌ ಸದಸ್ಯರುಗಳಾದ ರವಿ ಗುಂಡ್ಯಡ್ಕ, ಭವಾನಿ ಬೊಮ್ಮೆಟ್ಟಿ, ರಾಜು ನೆಲ್ಲಿಕುಮೇರಿ ಜಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.