ಎಂಟು ವರ್ಷಗಳ ಬಳಿಕ ಲಾಭಕ್ಕೆ ಬಂದ ಸುಳ್ಯ ಎಲ್.ಡಿ. ಬ್ಯಾಂಕ್

0

ಡಿವಿಡೆಂಡ್ ಶೇ. 2 ರ ಬದಲು ಶೇ. 3 ಕ್ಕೆ ಏರಿಸಿಕೊಂಡ ಸದಸ್ಯರು

ಸುಳ್ಯದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಎಂಟು ವರ್ಷಗಳ ಬಳಿಕ ಇದೀಗ‌ ಲಾಭಕ್ಕೆ ಬಂದಿದ್ದು, ಸದಸ್ಯರಿಗೆ ಶೇಕಡಾ ಮೂರು ಲಾಭಾಂಶ ಹಾಗೂ ಸಿಬ್ಬಂದಿಗಳಿಗೆ ಪ್ರೋತ್ಸಾಹಧನವಾಗಿ ಒಂದು ತಿಂಗಳ ಸಂಬಳ ವಿತರಿಸಲು ನಿರ್ಧರಿಸಲಾಗಿದೆ.
ಆ.28ರಂದು ನಡೆದ ಎಲ್.ಡಿ.ಬ್ಯಾಂಕ್ ಮಹಾಸಭೆಯಲ್ಲಿ ಅಧ್ಯಕ್ಷ ಜಯರಾಮ ರೈಯವರು ಈ ಘೋಷಣೆ ಮಾಡಿದರು.

ಸಿಬ್ಬಂದಿಗಳಿಗೆ ಒಂದು ತಿಂಗಳ ಸಂಬಳ ಬೋನಸ್ ಆಗಿ ನೀಡಲು ಹಾಗೂ ಸದಸ್ಯರಿಗೆ ಶೇಕಡಾ 2 ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿ ಅಂತಿಮ ಒಪ್ಪಿಗೆಗಾಗಿ ಮಹಾಸಭೆಗೆ ಮಂಡಿಸಿತ್ತು.‌
ಮಹಾಸಭೆಯಲ್ಲಿ ಚರ್ಚೆ ನಡೆದು, ” ಎಲ್.ಡಿ. ಬ್ಯಾಂಕಲ್ಲಿ, ವ್ಯವಸ್ಥಾಪಕರೊಬ್ಬರನ್ನು ಹೊರತುಪಡಿಸಿ ಉಳಿದವರು ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರಾದುದರಿಂದ ಬೋನಸ್ ಕೊಡಲು ಸಾಧ್ಯವಾಗುವುದಿಲ್ಲ. ಅವರಿಗೆ ಪ್ರೋತ್ಸಾಹಧನವನ್ನಾಗಿ ಈಗ ನಿರ್ಧರಿಸಿದಷ್ಟೇ ಹಣವನ್ನು ನೀಡಿ. ಬೇಕಿದ್ದರೆ ನಾಳೆಯೇ ನೀಡಿ. ಆದರೆ ಅದನ್ನು ಈ ವರ್ಷದ ಲೆಕ್ಕಾಚಾರಕ್ಕೆ ತೋರಿಸಿ ಪಾವತಿ ಮಾಡಿ. ಬೋನಸ್ ಗೆಂದು ತೆಗೆದಿರಿಸಿರುವ 3 ಲಕ್ಷ 20 ಸಾವಿರ ರೂ.ಗಳಲ್ಲಿ 1,70,000 ವನ್ನು ತೆಗೆದು ಒಂದು ಪರ್ಸ್ಸೆಂಟ್ ಡಿವಿಡೆಂಡ್ ಹೆಚ್ಚಿಸಲು ವಿನಿಯೋಗಿಸಿ. ಉಳಿದ ಹಣವನ್ನು ಕ್ಷೇಮನಿಧಿಯಲ್ಲಿರಿಸಿ ” ಎಂದು ಸದಸ್ಯರು ಸಲಹೆ ನೀಡಿದರು.
ಪ್ರಸನ್ನ ಕುಂಞಿಹಿತ್ಲು, ರತ್ನಾಕರ ಗೌಡ ಬಳ್ಳಡ್ಕ, ವಿನಯ ಕುಮಾರ್ ಕಂದಡ್ಕ, ವಿಷ್ಣು ಭಟ್ ಮೂಲೆತೋಟ, ಸುಭೋದ್ ಶೆಟ್ಟಿ ಮೇನಾಲ, ರಾಧಾಕೃಷ್ಣ ಕೋಟೆ, ಪಿ.ಕೆ.ಉಮೇಶ, ಹರೀಶ್ ಕಂಜಿಪಿಲಿ, ಶ್ರೀಮತಿ ಸುವರ್ಣಿನಿ ಮೊದಲಾದವರು ಈ ಚರ್ಚೆಯಲ್ಲಿ ಪಾಲ್ಗೊಂಡರು.
ಅಂತಿಮವಾಗಿ ಅಧ್ಯಕ್ಷ ಜಯರಾಮ ರೈಯವರು ಶೇಕಡಾ 3 ಡಿವಿಡೆಂಡ್ ಹಾಗೂ ಸಿಬ್ಬಂದಿಗಳಿಗೆ ಬೋನಸ್ ಬದಲು ಪ್ರೋತ್ಸಾಹಧನ ವಿತರಿಸುವುದಾಗಿ ಘೋಷಿಸಿದರು.

ಉಪಾಧ್ಯಕ್ಷ ಅವಿನಾಶ್ ಡಿ.ಕೆ., ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್, ನಿರ್ದೇಶಕಿಯಾದ ಶಾಸಕಿ ಭಾಗೀರಥಿ ಮುರುಳ್ಯ, ನಿರ್ದೇಶಕರುಗಳಾದ ರಮೇಶ ಪಡ್ಪು, ಮಹಾವೀರ ಬಿ., ಈಶ್ವರಚಂದ್ರ ಎಂ., ಧರ್ಮಪಾಲ ಕೊಯಿಂಗಾಜೆ, ಶ್ರೀಮತಿ ಸವಿತಾ ಕೆ.ಜಿ., ಶ್ರೀಮತಿ ವಿಶಾಲಾಕ್ಷಿ, ಶ್ರೀಮತಿ ಕಾವೇರಿ ಕೆ. , ಜ್ಞಾನೇಶ್ವರ ಶೇಟ್, ಮೇನೇಜರ್ ಶ್ರೀಮತಿ ಉಷಾ ಸುವರ್ಣ ವೇದಿಕೆಯಲ್ಲಿದ್ದರು.