ವರದಿ ಕೈಬಿಡುವಂತೆ ಆಗ್ರಹ














ಕಸ್ತೂರಿರಂಗನ್ ವರದಿ ವಿರೋಧಿಸಿ ಜಿಲ್ಲೆಯ ಪ್ರಥಮ ಪ್ರತಿಭಟನೆ ಸೆ. 1ರಂದು ಬಳ್ಪದಲ್ಲಿ ನಡೆಯಿತು. ಪ್ರತಿಭಟನೆಯ ಬಳಿಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವತಿಗೆ ಮನವಿ ನೀಡಲಾಯಿತು. ಪ್ರತಿಭಟನೆಯಲ್ಲಿ ಸುಮಾರು ಒಂದು ಸಾವಿರದಷ್ಟು ಮಂದಿ ಭಾಗವಹಿಸಿ ಕಸ್ತೂರಿರಂಗನ್ ವರದಿ ಜಾರಿಯ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣ ವೇದಿಕೆಯ ರಾಜ್ಯ ಸಂಚಾಲಕ ಕಿಶೋರ್ ಶಿರಾಡಿ ಅಧಿಕಾರಿಗಳು ರೈತರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ರೀತಿಯಲ್ಲಿ ವರ್ತಿಸುತ್ತಿರುವುದು ಖಂಡನೀಯ. ಹಕ್ಕುಪತ್ರ ರದ್ದು ಹಾಗೂ ಒತ್ತುವರಿ ತೆರವು ಸೇರಿದಂತೆ ವಿವಿಧ ವಿಚಾರಗಳ ಕುರಿತು ಅಧಿಕಾರಿಗಳು ಬಹಿರಂಗವಾಗಿ ಮಾಹಿತಿ ನೀಡಬೇಕು. ಕೋರ್ಟ್ ಆದೇಶ ಏನೇ ಇದ್ದರೂ ಸರ್ಕಾರದ ಸಚಿವ ಸಂಪುಟದ ನಿರ್ಧಾರ ಪ್ರಮುಖವಾದದ್ದು. ರೈತರಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿಯನ್ನು ಕೈಬಿಡಬೇಕು ಎಂದು ಹೇಳಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗಡಿ ಗುರುತು ನಿಗದಿಪಡಿಸುವ ಸಂದರ್ಭದಲ್ಲಿ ಶೂನ್ಯ ಬಫರ್ ಝೋನ್ ನಿಗದಿಪಡಿಸಬೇಕು. ಅಲ್ಲದೆ ಅರ್ಹರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು. ಕಸ್ತೂರಿರಂಗನ್ ವರದಿಯಿಂದ ಸುಮಾರು 100 ಗ್ರಾಮಗಳು ಬಾಧಿತವಾಗುವ ಸಾಧ್ಯತೆ ಇದೆ. ಹೀಗಾಗಿ ವರದಿಯನ್ನು ಕೈಬಿಡುವ ನಿಟ್ಟಿನಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಏಳನೇ ಕರಡು ಪ್ರತಿ ಜಾರಿಯಾಗಿದ್ದು, ಎಂಟನೇ ವರದಿ ಸಲ್ಲಿಸುವ ಮುನ್ನವೇ ಜನರು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಜನರಿಗೆ ಸಂಕಷ್ಟ ಎದುರಾಗಲಿದೆ. ಜನರು ಎಚ್ಚೆತ್ತುಕೊಂಡು ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು.
ಪಂಜ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಕುಳ
ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಕಸ್ತೂರಿ ರಂಗನ್ ವರದಿ ಜಾರಿ ಮಾಡಿದರೆ ಜಿಲ್ಲೆಯ 43 ಗ್ರಾಮಗಳ ಅಭಿವೃದ್ಧಿ ಕೆಲಸಗಳಿಗೆ ಮಾರಕವಾಗಲಿದೆ. ಹಾಗಾಗಿ ನಾವೆಲ್ಲಾ ಒಗ್ಗಟ್ಟಾಗಿ ವರದಿಯ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು. ಮಲೆನಾಡು ಹಿತರಕ್ಷಣಾ ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖ್ ರಮಾನಂದ ಎಣ್ಣೆಮಜಲು ಮಾತನಾಡಿ ಡೀಮ್ಡ್ ಪರಿಭಾವಿತ ಅರಣ್ಯ ಎಂದು ಪರಿಗಣಿಸಿ, ಅರಣ್ಯ ಮತ್ತು ಕಂದಾಯ ಇಲಾಖೆಯವರು ಮಾಡಿದ ತಪ್ಪಿಗೆ ಈಗಲೂ ಕೆಲವು ಮನೆಯವರು ಹಕ್ಕುಪತ್ರ ಪಡೆಯಲು ಸಾಧ್ಯವಾಗಿಲ್ಲ. ಬಡವರ ಕಷ್ಟಕ್ಕೆ ಸರಕಾರ ಸ್ಪಂದಿಸುತ್ತಿಲ್ಲ. ಹಾಗಾಗಿ ನಾವು ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ ಎಂದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆ ಬಳ್ಪ ಗ್ರಾಮ ಸಂಚಾಲಕ ಹೊನ್ನಪ್ಪ ಎಂರ್ಬಿಲ ಸ್ವಾಗತಿಸಿ, ಬಳ್ಪ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರ್ಷಿತ್ ಕಾರ್ಜ ವಂದಿಸಿದರು. ವಿಜಯಕುಮಾರ್ ಕಾಂಜಿ ಕಾರ್ಯಕ್ರಮ ನಿರೂಪಿಸಿದರು.
ಬಳ್ಪ ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಪ್ರಕಾಶ್ ಮುಡ್ನೂರು, ಶ್ರೀಮತಿ ಶಶಿಕಲಾ ಸೂಂತಾರು, ಪಂಜ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ನಿರ್ದೇಶಕರುಗಳಾದ ಅರುಣ್ ರೈ ಗೆಜ್ಜೆ, ಸದಾನಂದ ಕಾರ್ಜ, ಲಿಗೋಧರ ಆಚಾರ್ಯ, ಬಿಜೆಪಿ ಬಳ್ಪ ಶಕ್ತಿಕೇಂದ್ರದ ಅಧ್ಯಕ್ಷ ಹರೀಶ್ ಕಾರ್ಜ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯ.ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ರೈ ಗುತ್ತು, ಸುಬ್ರಹ್ಮಣ್ಯ ಕ್ಷೇತ್ರದ ನಿಕಟಪೂರ್ವ ತಾ.ಪಂ. ಸದಸ್ಯ ಅಶೋಕ ನೆಕ್ರಾಜೆ, ಶಿವರಾಮಯ್ಯ ಕರ್ಮಜೆ, ಶಶಿಧರ ಎಣ್ಣೆಮಜಲು, ವಿಜಯಕುಮಾರ್ ಕಾಂಜಿ, ಜಯರಾಮ ಆಲ್ಕಬೆ, ಹರೀಶ್ ಕಲುಂಗುಡಿ ಸೇರಿದಂತೆ ಪ್ರತಿಭಟನೆಯಲ್ಲಿ ಪಕ್ಷ ಬೇಧ ಮರೆತು ವಿವಿಧ ಸಂಘಟನೆಗಳ ಮುಖಂಡರು, ರೈತರು, ಗ್ರಾಮಸ್ಥರು ಭಾಗವಹಿಸಿದ್ದರು.







