ಕೆಡಿಪಿ ಸಭೆಯಲ್ಲಿ ಸದಸ್ಯರಿಂದ ಧರಣಿ
ಮುಂದಿನ ಕೆಡಿಪಿಯೊಳಗೆ ಕೆಲಸ ಆಗುವಂತೆ ಪ್ರಯತ್ನ ನಡೆಸಿ : ಶಾಸಕರಿಂದ ಸೂಚನೆ














ಕೊಲ್ಲಮೊಗ್ರದಲ್ಲಿ ನೆರೆಬಂದು ನಿವೇಶನ ಕಳೆದುಕೊಂಡವರಿಗೆ 8 ವರ್ಷ ಕಳೆದರೂ ಇನ್ನೂ ನಿವೇಶನ ನೀಡದಿರುವ ಕುರಿತು ಕೆಡಿಪಿ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಸಭೆಯ ಮುಂಭಾಗದಲ್ಲಿ ಧರಣಿ ನಡೆಸಿದ ಹಾಗೂ ಶಾಸಕರು ಹಾಗೂ ತಹಶೀಲ್ದಾರ್ ರವರ ಕೇಳಿಕೆಯ ಮೇರೆಗೆ ಸದಸ್ಯರು ಧರಣಿ ವಾಪಾಸು ಪಡೆದ ಘಟನೆ ನಡೆದಿದೆ.
ಸುಳ್ಯ ತಾಲೂಕು ಮಟ್ಟದ ತ್ರೈಮಾಸಿ ಕೆಡಿಪಿ ಸಭೆಯು ಸೆ.17ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಹಶೀಲ್ದಾರ್ ಮಂಜುಳಾ, ಇ.ಒ. ರಾಜಣ್ಣ, ಕೆಡಿಪಿ ಸದಸ್ಯರುಗಳಾದ ಧರ್ಮಪಾಲ ಕೊಯಿಂಗಾಜೆ, ಜಯಪ್ರಕಾಶ್ ನೆಕ್ರೆಪ್ಪಾಡಿ, ಅಶ್ರಫ್ ಗುಂಡಿ, ಪರಮೇಶ್ವರ ಕೆಂಬಾರೆ, ತೀರ್ಥರಾಮ ಬಾಳಾಜೆ ಹಾಗೂ ಇಲಾಖಾಧಿಕಾರಿಗಳಿದ್ದರು.
ಸಭೆಯಲ್ಲಿ ಪಾಲನಾ ವರದಿಯ ಮೇಲೆ ಮಾತನಾಡಿದ ಧರ್ಮಪಾಲ ಕೊಯಿಂಗಾಜೆಯವರು, “ಕೊಲ್ಲಮೊಗ್ರದಲ್ಲಿ ನೆರೆ ಬಂದು 9 ಕುಟುಂಬಗಳಿಗೆ ಇನ್ನೂ ನಿವೇಶನ ಹಂಚಿಕೆ ಆಗಿಲ್ಲ. 8 ವರ್ಷ ಆಯಿತು. ಇಷ್ಟು ಸಮಯ ಬೇಕೆ ? ಎಂದ ಅವರು ಕಳೆದ ಕೆಡಿಪಿ ಸಭೆಯಲ್ಲಿ ನಾವು ಪ್ರಶ್ನಿಸಿದಾಗ ಮುಂದಿನ ಸಭೆಯೊಳಗೆ ಹಕ್ಕುಪತ್ರ ಕೊಡುವುದಾಗಿ ತಹಶೀಲ್ದಾರ್ ಹೇಳಿದ್ದರು. ಆದರೆ ಹಕ್ಕುಪತ್ರ ಕೊಟ್ಟಿಲ್ಲ. ಮತ್ತೆ ಪಾಲನಾ ವರದಿಯಲ್ಲಿ ಹಿಂತಿನಂತೆಯೇ ಬರೆಯಲಾಗಿದೆ ಎಂದು ಹೇಳಿದರಲ್ಲದೆ, ಸಭೆಯಲ್ಲಿ ಹೇಳಿದ್ದನ್ನು ಅಧಿಕಾರಿಗಳು ಮಾಡುವುದಿಲ್ಲವಾದರೆ ಸಭೆಗೆ ಬರುವುದು ಯಾಕೆ ಎಂದು ಹೇಳಿ ವೇದಿಕೆಯ ಮುಂಭಾಗಕ್ಕೆ ಬಂದು ನೆಲದಲ್ಲಿ ಕುಳಿತರು. ಧರ್ಮ ಪಾಲರ ಮಾತಿಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಧ್ವನಿಗೂಡಿಸಿದರು. ಕೆಡಿಪಿ ಸದಸ್ಯರಾದ ಪರಮೇಶ್ವರ್, ಅಶ್ರಫ್ ಗುಂಡಿ, ತೀರ್ಥರಾಮ, ಜಯಪ್ರಕಾಶ್ ಕೂಡಾ ಧರಣಿಯಲ್ಲಿ ಭಾಗಿಯಾದರು. ಈ ವೇಳೆ ಸುಬ್ರಹ್ಮಣ್ಯ ರೇಂಜರ್ ಚೇತನ್ ರವರು, ” ಜಂಟಿ ಸರ್ವೆ ಮಾಲಾಗಿದ್ದು ಜಂಟಿ ಸರ್ವೆ ವರದಿ ಹಾಗೂ ನಕಾಶೆ ಅರಣ್ಯ ಇಲಾಖೆ ಕಾರ್ಯ ಯೋಜನೆ ಮತ್ತು ಮೋಜಣಿ ವಿಭಾಗ ಶಿವಮೊಗ್ಗ ಇವರು ನೀಡಬೇಕಾಗಿದೆ” ಎಂದು ಹೇಳಿದರು. “ಕಳೆದ ಸಭೆಯಲ್ಲಿ ಹಕ್ಕುಪತ್ರ ನೀಡುತ್ತೇವೆ ಎಂದು ನಾವು ಹೇಳಿಲ್ಲ. ಜಂಟಿ ಸರ್ವೆ ವರದಿ ಅರಣ್ಯದಿಂದ ಸಿಗದೇ ಏನೂ ಮಾಡಲು ಸಾಧ್ಯ ಇಲ್ಲ. ಮತ್ತು ಆರ್.ಟಿ.ಸಿ. ತಿದ್ದುಪಡಿ ನಮ್ಮ ಹಂತದಲ್ಲಿ ಆಗುವುದಿಲ್ಲ” ಎಂದು ಹೇಳಿದರು. ಶಾಸಕಿ ಭಾಗೀರಥಿಯವರು, “ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಮತ್ತು ಸರಕಾರದ ಹಂತದಲ್ಲಿ ಈ ಕೆಲಸ ಆಗಬೇಕಾಗಿದೆ. ಈಗ ಗಡಿ ಗುರುತು ಆಗಿದ್ದು ಆದಷ್ಟು ಬೇಗ ಇದನ್ನು ಮಾಡಿಕೊಡಬೇಕು” ಎಂದು ಅಧಿಕಾರಿಗಳಿಗೆ ಹೇಳಿದರು. “ಇಷ್ಟು ವರ್ಷ ಬೇಕೆ?” ಎಂದು ಕೆಡಿಪಿ ಸದಸ್ಯರು ಪ್ರಶ್ನಿಸಿದಾಗ, “ಈ ವಿಷಯವನ್ನು ಮೇಲೆ ಕುಳಿತು ಚರ್ಚೆ ಮಾಡೋಣ. ಸರಕಾರದ ಹಂತದಲ್ಲಿ ಆಗಬೇಕಾದ ಕೆಲಸ ಆಗಿರುವುದರಿಂದ ಈಗ ನಿಮ್ಮದೇ ಸರಕಾರ ಇದೆಯಲ್ಲವೇ” ಎಂದು ಶಾಸಕರು ಹೇಳಿದರು. “ನೀವು ಸರಕಾರವನ್ನು ದೂರಬೇಡಿ. ಅಧಿಕಾರಿಗಳು ಕೆಲಸ ಮಾಡಬೇಕು. ಮತ್ತು ನೀವು ಸರಕಾರದ ಪ್ರತಿನಿಧಿ ನೀವು ಮಾಡಿಸಬೇಕು” ಎಂದು ಶಾಹುಲ್ ಹಮೀದ್, ಪರಮೇಶ್ವರ ಕೆಂಬಾರೆ ಹೇಳಿದರು. ಈ ಕುರಿತು ಕೆಲ ಸಮಯ ಚರ್ಚೆ ನಡೆಯಿತು. “ನಾವು ಶಿವಮೊಗ್ಗ ದಿಂದ 1 ತಿಂಗಳೊಳಗೆ ವರದಿ ತರಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ” ಎಂದು ರೇಂಜರ್ ಚೇತನ್ ಹೇಳಿದರೆ, “ಅರಣ್ಯದ ವರದಿ ಬಂದ ಮೇಲಷ್ಟೆ ಮುಂದುವರಿಯಲು ಸಾಧ್ಯ” ಎಂದು ತಹಶೀಲ್ದಾರ್ ಹೇಳಿದರು. “ನಾವು ಸಾರ್ವಜನಿಕರ ಸೇಚೆಗೆ ಇರುವವರು. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಇಂತ ಘಟನೆಗಳು ನಡೆಯುತ್ತವೆ. ಮುಂದಿನ ಕೆಡಿಪಿ ಯೊಳಗೆ ಕೆಲಸ ಆಗುವ ಹಾಗೆ ಪ್ರಯತ್ನ ಪಡಿ. ಆಗದಿದ್ದರೆ ಮತ್ತೊಂದಿಷ್ಟು ಸಮಯ ಪಡೆದಾದರೂ ಕೆಲಸ ಆದಷ್ಟು ಬೇಗ ಆಗಬೇಕು” ಎಂದು ಶಾಸಕರು ಸೂಚನೆ ನೀಡಿದರು. ಶಾಸಕರು ಹಾಗೂ ತಹಶೀಲ್ದಾರ್ ರವರು ಕೆಡಿಪಿ ಸದಸ್ಯರಿಗೆ ತಮ್ಮ ಜಾಗದಲ್ಲಿ ಕುಳಿತುಕೊಳ್ಳುವಂತೆ ಕೇಳಿಕೊಂಡ ಮೇರೆಗೆ ಅವರು ತಮ್ಮಜಾಗಕ್ಕೆ ಹೋದರು.ಸಭೆ ಮುಂದುವರಿಯಿತು.







