













ದಕ್ಷಿಣ ಕನ್ನಡ ಜಿಲ್ಲೆಯು ಕರಾವಳಿ ಭೂಭಾಗದಲ್ಲಿದ್ದು ಶಿಕ್ಷಣ, ಆರೋಗ್ಯ, ಧಾರ್ಮಿಕ ಹಾಗೂ ಸಂಸ್ಕೃತಿಯ ಕ್ಷೇತ್ರದಲ್ಲಿ ಅಭಿವೃದ್ದಿಯನ್ನು ಹೊಂದುತ್ತಾ ಬರುತ್ತಿದೆ. ಸುಳ್ಯ ತಾಲೂಕು ಅತ್ಯಂತ ಗ್ರಾಮೀಣ ಪ್ರದೇಶವಾಗಿದ್ದು ಇನ್ನು ಕೂಡ ಮೂಲಭೂತ ಸೌಕರ್ಯಗಳು ನಿಧಾನಗತಿಯಲ್ಲಿ ಅಭಿವೃದ್ದಿ ಹೊಂದುತ್ತಿವೆ. ತಾಲೂಕಿನಲ್ಲಿ ಸರಿಯಾದ ನಗರ ಸಭಾಂಗಣಗಳಿಲ್ಲ, ಡಾ. ಕುರುಂಜಿ ವೆಂಕಟ್ರಮಣ ಗೌಡರವರ ಮುತುವರ್ಜಿಯಲ್ಲಿ ಆದಂತಹ ಸಭಾಂಗಣ ಈಗ ನಗರ ಪಂಚಾಯತ್ನ ಆಡಳಿತ ವ್ಯವಸ್ಥೆಯಲ್ಲಿ ಶಿಥಿಲಾವಸ್ಥೆಯ ಸ್ಥಿತಿಗೆ ತಲುಪಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವವಿದೆ ಆದರೆ ತಾಲೂಕಿಗೆ ಸರಿಯಾದ ಕ್ರೀಡಾಂಗಣದ ವ್ಯವಸ್ಥೆಯಿಲ್ಲ. ಜಾಗ ನಿಗದಿ ಪಡಿಸಿದರು ಇನ್ನೂ ಕ್ರೀಡಾಂಗಣ ನಿರ್ಮಾಣವಾಗಿಲ್ಲ. ಸುಳ್ಯ ತಾಲೂಕು ಅತೀ ಹೆಚ್ಚು ರಬ್ಬರ್ ಬೆಳೆಯುವಂತಹ ಪ್ರದೇಶವಾಗಿದೆ. ಅಭಿವೃದ್ದಿ ದೃಷ್ಟಿಯಿಂದ ಸುಳ್ಯ ತಾಲೂಕಿಗೆ ರಬ್ಬರ್ಗೆ ಸಂಬಂಧ ಪಟ್ಟಂತಹ ಉತ್ಪಾದನಾ ಕಂಪನಿಗಳ ಅವಶ್ಯಕತೆ ಇದೆ ಇದರಿಂದ ತಾಲೂಕಿನಲ್ಲಿ ಉದ್ಯೋಗಕ್ಕೆ ಕೂಡಾ ಉತ್ತೇಜನ ನೀಡಿದಂತಾಗುತ್ತದೆ. ತಾಲೂಕಿನಲ್ಲಿ ಪ್ರಮುಖವಾಗಿರುವ ಅಡಿಕೆಯ ಹಳದಿ ರೋಗದ ಖಾಯಿಲೆಯು ಕೃಷಿಕರಿಗೆ ಬದುಕು ನಿರ್ವಹಿಸಲು ಕಷ್ಟಕರವಾದಂತಹ ವಾತಾವರಣವನ್ನು ನಿರ್ಮಾಣಮಾಡಿದೆ. ಈ ವಿಚಾರದಲ್ಲಿ ಹಲವಾರು ಪ್ರಯೋಗಗಳು ನಡೆದರೂ ಸಫಲವಾಗದ ಕಾರಣ ಸರಕಾರವು ಮುತುವರ್ಜಿಯನ್ನು ವಹಿಸಿ ಈ ಸಮಸ್ಯೆಗೆ ಪರಿಹಾರ ನೀಡುವ ವ್ಯವಸ್ಥೆ ಆಗಬೇಕಾಗಿದೆ. ತಾಲೂಕಿನ ರಸ್ತೆಗಳು ನೀರಿಕ್ಷೆಯ ಮಟ್ಟಕ್ಕೆ ಅಭಿವೃದ್ದಿ ಹೊಂದಿಲ್ಲ ಸುಳ್ಯದಿಂದ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಸುಬ್ರಮಣ್ಯಕ್ಕೆ ದಿನ ನಿತ್ಯವು ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದರೂ ಕಿರಿದಾಗಿದ್ದು ಮತ್ತು ದುರಸ್ಥಿಗೊಂಡಿರುವುದಿಲ್ಲ. ರೈಲ್ವೆ ವ್ಯವಸ್ಥೆಗೆ ಸಂಬಂಧಿಸಿದಂತೆ ನಿಲುಗಡೆ ಪ್ರದೇಶವು ಕುಕ್ಕೆ ಸುಬ್ರಮಣ್ಯದ ಹೆಸರಿನಲ್ಲಿದ್ದರೂ ಅದು ಸುಮಾರು ಹದಿನೈದು ಕಿಲೋ ಮೀಟರ್ ದೂರದಲ್ಲಿರುತ್ತದೆ. ಈ ನಿಲುಗಡೆ ಪ್ರದೇಶವನ್ನು ಸರಕಾರವು ಮುತುವರ್ಜಿ ವಹಿಸಿ ಕುಕ್ಕೆ ಸುಬ್ರಮಣ್ಯಕ್ಕೆ ಕೊಡುವ ವ್ಯವಸ್ಥೆಯಾಗಬೇಕಾಗಿದೆ. ಇದರಿಂದ ಎರಡು ತಾಲೂಕಿನ (ಕಡಬ ಮತ್ತು ಸುಳ್ಯ) ಜನರಿಗೆ ಸಹಕಾರಿಯಾಗಲಿದೆ.
ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ಕುರುಂಜಿ
ಪ್ರಧಾನ ಕಾರ್ಯದರ್ಶಿ
ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳು ಸುಳ್ಯ







