ಕಂದಡ್ಕದಲ್ಲಿ ನಗರದ ಹಸಿ ಕಸ ಹಾಕಿದ ವಿಚಾರ : ಕೆಡಿಪಿ ಸಭೆಯಲ್ಲಿ ಭಾರೀ ಚರ್ಚೆ

0

ಕಸ ಹಾಕದಂತೆ ಖಾಸಗಿಯವರಿಗೆ ತಿಳಿಸಿದ್ದೇವೆ : ಜಂಟೀ ಸರ್ವೆ ಆಗಬೇಕು : ರೇಂಜರ್

ಸರ್ವೆ ನಡೆಸಿ – ಫಾರೆಸ್ಟ್ ಎಂದಾದರೆ ರದ್ದತಿಗೆ ಬರೆಯಿರಿ : ತಹಶೀಲ್ದಾರ್

ಸುಳ್ಯ ನಗರದ ಹಸಿ ಕಸವನ್ನು ಕಂದಡ್ಕದಲ್ಲಿ ಹಾಕಿದ ವಿಚಾರ ಸುಳ್ಯ‌ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದೆ.
ಹಸಿ ಕಸ ಕೊಂಡು‌ ಹೋದವರು ಫಾರೆಸ್ಟ್ ಜಾಗದಲ್ಲಿ ಹಾಕಿದ್ದಾರೆಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಆರೋಪಿಸಿದರೆ, ಕಸ ಹಾಕದಂತೆ ಖಾಸಗಿಯವರಿಗೆ ತಿಳಿಸಲಾಗಿದೆ.‌ಜಂಟಿ ಸರ್ವೆ ಆಗಬೇಕು ಎಂದು ಸುಳ್ಯ ರೇಂಜರ್ ಹೇಳಿದರು. ಸರ್ವೆ ನಡೆಸಿ ಫಾರೆಸ್ಟ್ ಎಂದು ಕಂಡು ಬಂದರೆ ರದ್ದತಿಗೆ ಬರೆಯಿರಿ ಎಂದು ತಹಶೀಲ್ದಾರ್ ಸೂಚನೆ ನೀಡಿದ ಘಟನೆಯೂ ನಡೆದಿದೆ.

ಸುಳ್ಯ ತಾಲೂಕು ಮಟ್ಟದ ಕೆಡಿಪಿ ಸಭೆಯು ಶಾಸಕಿ‌ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ವಿಷಯ ಪ್ರಸ್ತಾಪಿಸಿದ ಕೆಡಿಪಿ ಸದಸ್ಯ ಧರ್ಮಪಾಲ ಕೊಯಿಂಗಾಜೆಯವರು, “ನಗರದ ಹಸಿ ಕಸ ಎಲ್ಲಿಗೆ ಹಾಕುತ್ತೀರಿ” ಎಂದು ಕೇಳಿದಾಗ, “ಈಗ ಮಂಗಳೂರಿಗೆ ಹೋಗುತ್ತಿದೆ ಎಂದು‌ ಮುಖ್ಯಾಧಿಕಾರಿ ಬಸವರಾಜ್ ಉತ್ತರಿಸಿದರು. ” ಹಿಂದೆ ಎಲ್ಲಿ ಹಾಕುತ್ತಿದ್ದೀರಿ” ಎಂದು ಧರ್ಮಪಾಲರು ಮರು ಪ್ರಶ್ನಿಸಿದಾಗ, “ಕಂದಡ್ಕದಲ್ಲಿ ಹೇಮಂತ್ ಎಂಬವರು ಕೊಂಡು ಹೋಗುತ್ತಿದ್ದರು. ಈಗ ಅವರು ಕೊಂಡು ಹೋಗುತ್ತಿಲ್ಲ” ಎಂದು ಹೇಳಿದರು. “ಅವರು ಹಸಿ ಕಸವನ್ನು ಫಾರೆಸ್ಟರ್ ಜಾಗದಲ್ಲಿ ಹಾಕಿದ್ದಾರೆ. ಬೇಕಿದ್ದರೆ ಅರಣ್ಯ ಇಲಾಖೆಯವರಲ್ಲಿ ಕೇಳಿ” ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಹೇಳಿದರು. ಆಗ ಮಾತನಾಡಿದ ಸುಳ್ಯ ರೇಂಜರ್ “ನಮಗೆ ಬಂದ ಮಾಹಿತಿ ಮೇರೆಗೆ ನಾವು ಸ್ಥಳ ತನಿಖೆ ನಡೆಸಿದ್ದೇವೆ. ಅವರಿಗೆ ಅಲ್ಲಿ ಗ್ರ್ಯಾಂಟ್ ಆಗಿರುವುದಾಗಿ ಹೇಳಿದ್ದಾರೆ. ನಮ್ಮ ಬ್ಲಾಕ್ ಕೂಡಾ ಅಲ್ಲೇ ಇರುವುದರಿಂದ ಜಂಟೀ ಸರ್ವೆ ಆಗಬೇಕಾಗಿದೆ. ಈಗ ಅಲ್ಲಿ ಕಸ ಹಾಕದಂತೆ ನಾವು ಹೇಳಿದ್ದೇವೆ. ಅವರು ಕೂಡಾ ಕಸ ಹಾಕುವುದಿಲ್ಲವೆಂದು ಬರೆದುಕೊಟ್ಟಿದ್ದಾರೆ” ಎಂದು ಹೇಳಿದರು.

“ಕಸ ಹಾಕಿದ ಜಾಗ ಅವರಿಗೆ ಗ್ರ್ಯಾಂಟ್ ಆಗಿದಾ?” ಎಂದು ತಹಶೀಲ್ದಾರ್ ಮತ್ತೆ ಕೇಳಿದಾಗ, “ಗ್ರ್ಯಾಂಟ್ ಆಗಿದೆ. ರಿಸರ್ವ್ ಬ್ಲಾಕ್ ಕೂಡಾ ಅಲ್ಲೇ ಇದೆ” ಎಂದು ರೇಂಜರ್ ಉತ್ತರಿಸಿದರು. “ಈಗ ಸ್ಪಷ್ಟವಾಗದೇ ಯಾವುದೇ ನಿರ್ಬಂಧ ಮಾಡೋದು ಬೇಡ” ಎಂದು ತಹಶೀಲ್ದಾರ್ ಹೇಳಿದಾಗ, “ಅಲ್ಲಿ ಕಾಡು ಪ್ರದೇಶ ಆಗಿರುವುದರಿಂದ ಆ ರೀತಿ ಕಸ ಹಾಕಲು ಬರುವುದಿಲ್ಲ.‌ ಅದಕ್ಕಾಗಿ ತಡೆಯಲಾಗಿದೆ” ಎಂದು ರೇಂಜರ್ ಉತ್ತರಿಸಿದರು. “ಸರ್ವೆ ಮಾಡಿ. ನಿಮ್ಮದೇ ಜಾಗ ಎಂದು ಕಂಡು ಬಂದರೆ ರದ್ದತಿಗೆ ಬರೆಯಿರಿ. ಪ್ರೋಸಿಜರ್ ಪ್ರಕಾರ ಮುಂದುವರಿಯಿರಿ” ಎಂದು ತಹಶೀಲ್ದಾರ್ ಹೇಳಿದಾಗ, “4 ವರ್ಷದಿಂದ ಅಲ್ಲಿ‌ಕಸ ಹಾಕುತಿದ್ದಾರೆ. ತಿಂಗಳಿಗೆ 35 ಸಾವಿರದಂತೆ ಪಂಚಾಯತ್ ‌ಅವರಿಗೆ ಪಾವತಿಸಿದೆ. ಒಟ್ಟು 16 ಲಕ್ಷದಷ್ಟು ಇದುವರೆಗೆ ಪಾವತಿಸಿದಂತಾಗಿದೆ. ಸರಕಾರಿ‌ ಜಾಗದಲ್ಲಿಕಸ ಹಾಕಿದ್ದಾರೆಂದಾದರೆ ಖಾಸಗಿಯವರಿಗೆ ಹಣ ಪಾವತಿ ಮಾಡಿರೋದು ಹೇಗೆ?. ಅವ್ಯವಹಾರ ಆಗಿದೆಯಾ? ಎಂದು ಶಾಹುಲ್‌ಹಮೀದ್ ಕುತ್ತಮೊಟ್ಟೆ ಆರೋಪಿಸಿದರು. “ಸರ್ವೆ ಆದ ಬಳಿಕ ಈ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರೋಣ” ಎಂದು ತಹಶೀಲ್ದಾರ್ ಹೇಳಿದಾಗ, “ಅದು ಫಾರೆಸ್ಟ್ ಜಾಗ ಎಂದು ಕಂಡು ಬಂದರೆ ಪಂಚಾಯತ್ ನಿಂದ ಆ ಖಾಸಗಿಯವರಿಗೆ ಪಾವತಿಯಾದ ಹಣವನ್ನು ರಿಕವರ್ ಮಾಡಬೇಕು” ಎಂದು ಶಾಹುಲ್ ಹಮೀದ್ ಒತ್ತಾಯಿಸಿದರು. ಇದಕ್ಕೆ‌ ಕೆಡಿಪಿ ಸದಸ್ಯರು ಧ್ವನಿಗೂಡಿಸಿದರು.