ಸಂಪಾಜೆ ಗ್ರಾ.ಪಂ ನಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ವಿಶೇಷ ಗ್ರಾಮ ಸಭೆ

0

ಕಸ್ತೂರಿ ರಂಗನ್ ವರದಿಯಿಂದ ಸಂಪಾಜೆ ಗ್ರಾಮವನ್ನು ಸಂಪೂರ್ಣವಾಗಿ ಕೈ ಬಿಡುವಂತೆ ಗ್ರಾಮಸ್ಥರಿಂದ ನಿರ್ಣಯ – ಕೇಂದ್ರ ಸರ್ಕಾರಕ್ಕೆ ಮನವಿ

ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದರ ವಿರುದ್ಧ ಆಕ್ಷೇಪಣೆ ಸಲ್ಲಿಸುವ ಸಲುವಾಗಿ ಸೆ .19 ರಂದು ಗ್ರಾಮಸ್ಥರ ವಿಶೇಷ ಸಭೆಯು ದ .ಕ ಸಂಪಾಜೆ ಗ್ರಾ.ಪಂ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಗ್ರಾಮಸ್ಥರೇ ಈ ಸಭೆಯನ್ನು ಆಯೋಜನೆ ಮಾಡಿದ್ದು ಸಭೆಯ ಅಧ್ಯಕ್ಷತೆಯನ್ನು ನೋಡೆಲ್ ಅಧಿಕಾರಿ ಸುಳ್ಯ ಹಿರಿಯ ತೋಟಗಾರಿಕಾ ಇಲಾಖೆ ನಿರ್ದೇಶಕರು ಪ್ರಮೋದ್ ಸಿ.ಎಂ ಅಧ್ಯಕ್ಷತೆ ವಹಿಸಿದರು.

ಸಂಪಾಜೆ ಗ್ರಾ.ಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ವೋಲ್ಗಾ ಡಿಸೋಜ ಅವರು ಸರ್ವರನ್ನು ಸ್ವಾಗತಿಸಿ, ಕಸ್ತೂರಿ ರಂಗನ್ ವರದಿಯ ಬಗ್ಗೆ ಕಸ್ತೂರಿ ರಂಗನ್ ವರದಿಯಡಿ ಪ್ರಸ್ತಾಪಿಸಲಾಗಿರುವ ಪ್ರದೇಶಗಳು ಹಾಗೂ ಅದರ ಪರಿಣಾಮಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರಿಂದ ಆಕ್ಷೇಪಣೆಗಳು, ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಪಡೆಯುವ ಸೆ .25 ರ ಒಳಗೆ ನೀಡಬೇಕಿದೆ. ಈ ಉದ್ದೇಶದಿಂದ ನಮ್ಮ ಗ್ರಾಮವನ್ನು ಉಳಿಸುವಲ್ಲಿ ಇಂದು ವಿಶೇಷ ಗ್ರಾಮ ಸಭೆಯನ್ನು ಕರೆದಿದ್ದೇವೆ ಎಂದರು.

ಸಭೆಯ ಅಧ್ಯಕ್ಷತೆ , ನೋಡೆಲ್ ಅಧಿಕಾರಿಯಾಗಿ ಸುಳ್ಯ ಹಿರಿಯ ತೋಟಗಾರಿಕಾ ಇಲಾಖೆ ನಿರ್ದೇಶಕರಾದ ಪ್ರಮೋದ್ ಸಿ.ಎಂ ಅಧ್ಯಕ್ಷತೆ ಪ್ರಾಸ್ತಾವಿಕ ಮಾತನಾಡಿದ ಅವರು ” ನಾವೆಲ್ಲರೂ ಪಶ್ಚಿಮ ಘಟ್ಟದಲ್ಲಿ ಪ್ರಕೃತಿಯೊಂದಿಗೆ ಜನ ಜೀವನವನ್ನು ಮಾಡಿಕೊಂಡು . ಆದರೆ ಡಾ. ಕಸ್ತೂರಿ ರಂಗನ್ ವರದಿಯ ಮುಖಾಂತರ ಏಳನೇ ಕರಡು ವರದಿಯ ಮುಖಾಂತರ ಸಾರ್ವಜನಿಕರು ಪ್ರತಿಯೊಂದು ನೆಲೆಯಲ್ಲಿಯೂ ಕೂಡ ಎಚ್ಚೆತ್ತುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಹಾಗೂ ಇಂದಿನ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ನೀಡುವ ಆಕ್ಷೇಪಣೆಗಳ ಕುರಿತು ಸಲಹೆಗಳ ನಿರ್ಣಯಗಳನ್ನು ಸಂಬಂಧ ಪಟ್ಟ ಅಧಿಕಾರಿಗಳ ಮುಖಾಂತರ ರಾಜ್ಯ ಸರಕಾರದ ಹಾಗೂ ಕೇಂದ್ರ ಸರಕಾರಕ್ಕೆ ಮನವಿಯನ್ನು ಕಳುಹಿಸಲಿದ್ದೇವೆ ಎಂದರು.

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊೖಂಗಾಜೆ
ಮಾತನಾಡಿ “ಡಾ.ಕಸ್ತೂರಿ ರಂಗನ್ ವರದಿ ಆಧಾರದಲ್ಲಿ ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಿಸುವ ಶಿಫಾರಸ್ಸು ಅವೈಜ್ಞಾನಿಕವಾಗಿದೆ. ವಾಸ್ತವಾಂಶಗಳನ್ನು ಅಧ್ಯಯನ ಮಾಡಿರದ ಈ ವರದಿಯನ್ನು ಈಗಿರುವ ಪ್ರಸ್ತುತ ಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲಾಗುವುದಿಲ್ಲ. ನಮ್ಮ ಗ್ರಾಮವನ್ನು ಹಾಗೂ ನಮ್ಮ ಮುಂದಿನ ಪೀಳಿಗೆಯನ್ನು ಉಳಿಸಬೇಕಾದ ಕರ್ತವ್ಯ ನಮ್ಮಲ್ಲಿದೆ. ಅಲ್ಲದೇ ಕಸ್ತೂರಿ ರಂಗನ್ ವರದಿ ಗ್ರಾಮವನ್ನು ಆವರಿಸಿದರೆ ಗ್ರಾಮಸ್ಥರ ಜನಜೀವದ ಆಧಾರಿತವಾದ ಕೃಷಿ ಚಟುವಟಿಕೆ , ಓಡಾಡುವ ರಸ್ತೆ, ಮನೆ ನಿರ್ಮಾಣ , ನೀರು ,ವಿದ್ಯುತ್ ಶಕ್ತಿ ಸೇರಿದಂತೆ ಮೂಲಭೂತ ಸೌಕರ್ಯಗಳು ಇಲ್ಲದಂತಾಗಬಹುದು. ಅಲ್ಲದೇ ಇದರಿಂದ ಗ್ರಾಮಸ್ಥರು ಸೇರಿದಂತೆ ಕೃಷಿಕರು ಹೆಚ್ಚಿನ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಆದ್ದರಿಂದ ನಮ್ಮ ಸಂಪಾಜೆ ಗ್ರಾಮವನ್ನು ಉಳಿಸುವಲ್ಲಿ ಅರಣ್ಯ ಪ್ರದೇಶವನ್ನು ಹೊರತು ಪಡಿಸಿ ಉಳಿದ ಜಾಗವನ್ನು 0 ಬಫರ್ ಜೋನ್ ಮಾಡುವಂತೆ ಆಗಬೇಕು . ಸಂಪಾಜೆ ಗ್ರಾಮವನ್ನು ಹಾಗೂ ಜನವಸತಿ ಪ್ರದೇಶವನ್ನು ಕಸ್ತೂರಿ ರಂಗನ್ ವರದಿಯಿಂದ ಸಂಪೂರ್ಣವಾಗಿ ಕೈ ಬಿಡುವಂತೆ ಕುರಿತು ಸಲಹೆಗಳನ್ನು ಒಳಗೊಂಡಂತೆ ಸಾಧಕ – ಬಾಧಕದ ಬಗ್ಗೆ ಸಲಹೆಯನ್ನು ನೀಡಿದರು.

ಸಂಪಾಜೆ ಮಾಜಿ ಗ್ರಾ.ಪಂ ಅಧ್ಯಕ್ಷ ಜಗದೀಶ್ ಕೆ . ಪಿ ಡಾ.ಕಸ್ತೂರಿ ರಂಗನ್ ವರದಿಯ ಹಿನ್ನಲೆ ಬಗ್ಗೆ , ಗ್ರಾಮಕ್ಕೆ ಮತ್ತು ಗ್ರಾಮಸ್ಥರಿಗೆ ಬರುವ ಪರಿಣಾಮಗಳ ಬಗ್ಗೆ, ಬಗೆಹರಿಸುವ ಕ್ರಮಗಳ ಬಗ್ಗೆ , ಗಾಡ್ಲಿಲ್ ವರದಿ ಮತ್ತು ಕಸ್ತೂರಿರಂಗನ್ ವರದಿಯ ಬಗ್ಗೆ ವಿಮರ್ಷಿಸಿ, ಪರಿಸರ ಸೂಕ್ಷ್ಮ ಪ್ರದೇಶದ ಬಗ್ಗೆ ಮತ್ತು ಬರುವ ನಿಬಂಧನೆಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ ಕೇರಳ ಮಾದರಿಯಂತೆ ಇಲ್ಲೂ ಸಹ ಇದರ ಅನುಷ್ಠಾನ ಮಾಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಸ್ತೂರಿರಂಗನ್ ವರದಿಯ ಅಧಿಸೂಚನೆ 7 ರ ಸಾರಾಂಶವನ್ನು ವಿಮರ್ಷಿಸಿ, ಅದರ ಸಾಧಕ ಬಾಧಕಗಳನ್ನು ಸಭೆಯಲ್ಲಿ ಮಂಡಿಸಿ, ಗ್ರಾಮಸ್ಥರಿಗೆ ಸಂಕ್ಷಿಪ್ತವಾಗಿ ಸಲಹೆಯನ್ನು ತಿಳಿಸಿಕೊಟ್ಟರು.

ಸಂಪಾಜೆ ಉಪವಲಯ ಅರಣ್ಯಾಧಿಕಾರಿ ವೆಂಕಟೇಶ್ ಅವರು ಮಾತನಾಡಿ ” ಕಸ್ತೂರಿ ರಂಗನ್ ವರದಿ ಜಾರಿ ಅಥವಾ ಬದಲಾವಣೆಯಲ್ಲಿ ಅರಣ್ಯ ಇಲಾಖೆ ಪಾತ್ರ ಚಿಕ್ಕದಾಗಿದೆ. ಮುಖ್ಯವಾಗಿ ಕಸ್ತೂರಿ ರಂಗನ್ ಜಾರಿಯಾಗುವುದರಲ್ಲಿ ಕೇಂದ್ರ ಸರಕಾರ ಜೊತೆಗೆ , ಹಸಿರು ಪೀಠ , ಪರಿಸರ ಇಲಾಖೆ ಜಂಟಿಯ ಆಧಾರವಾಗಿದೆ. 27ನೇ ಜುಲೈ 2026 ರಂದು ಕಸ್ತೂರಿರಂಗನ್ ವರದಿಯು ಕೇಂದ್ರ ಸರ್ಕಾರದ ಪರಿಸರ ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವಾಲಯ ಅಧಿಸೂಚನೆ ನವದೆಹಲಿ, ಕರಡು ಅಧಿಸೂಚನೆಯನ್ನು ಹೊರಡಿಸಿರುವ ಗಜೆಟೆಡ್ ಪ್ರತಿಯಲ್ಲಿ ಸಂಪಾಜೆ ಗ್ರಾಮವು ಒಳಪಟ್ಟಿರುತ್ತದೆ
ಕಸ್ತೂರಿ ರಂಗನ್ ವರದಿಯಲ್ಲಿ ಎಲ್ಲಿ ಕೂಡ ಸರ್ವೇ ನಂಬರ್ ಬಳಸಲಿಲ್ಲ. ಪಶ್ಚಿಮ ಘಟ್ಟದ ತಪ್ಪಲಿನ ಎಲ್ಲಾ ಗ್ರಾಮಗಳನ್ನ ಸೇರಿಸಿಕೊಂಡಿದೆ. ಅಂದರೆ ಪರಿಸರ ಸೂಕ್ಷ್ಮ ವಲಯದ 10 ಕೀ. ಮೀ ವ್ಯಾಪ್ತಿಯಲ್ಲಿ ಒಳಪಡುವಂತಹ ಎಲ್ಲಾ ಗ್ರಾಮಗಳನ್ನು ಸೇರಿಸಿಕೊಂಡಿದ್ದಾರೆ. ಆದರಿಂದ ಈ ವರದಿಗೆ ಗ್ರಾಮಸ್ಥರ ಹಲವು ಬದಲಾವಣೆಗಳನ್ನು ಬಯಸಬಹುದಾಗಿದೆ. ಹಾಗೂ ವರದಿಗೆ ಕೇಂದ್ರ ಸರಕಾರದಿಂದ ಆದೇಶಗಳು ಬಂದರೆ ಅರಣ್ಯ ಇಲಾಖೆಗೆ ಒಳಪಟ್ಟ ಬೌಂಡರಿಯನ್ನು ತೋರಿಸಿಕೊಡಲಿದ್ದೇವೆ . ಹಾಗೂ ಆರದಲ್ಲಿ ಬದಲಾವಣೆ ಮಾಡುವುದಾದ್ರೆ ಜನವಸತಿ ಪ್ರದೇಶವನ್ನು ಬಿಟ್ಟು ಅರಣ್ಯಗಳನ್ನು ಪ್ರದೇಶಕ್ಕೆ ಒಳಪಟ್ಟ ಗಡಿ ಗುರುತುಗಳನ್ನು ತೋರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಹಾಗೂ ಹಿರಿಯರು ಕೃಷಿಕರು ಆದ ಗಣಪತಿ ಭಟ್ , ನಿವೃತ್ತ. ಅಧಿಕಾರಿ ಇಬ್ರಾಹಿಂ , ಜಯರಾಮ ಕುಯಿoತೋಡು , ಅವರು ಕಸ್ತೂರಿ ರಂಗನ್ ಜಾರಿಗೆ ಬರುವುದೇ ಬೇಡ , ನಮ್ಮ ಗ್ರಾಮ, ಕೃಷಿ , ಕೃಷಿಕರನ್ನು ಮುಂದಿನ ಪೀಳಿಗೆಯನ್ನು ಉಳಿಸುವಲ್ಲಿ ನಾವು ಗ್ರಾಮಸ್ಥರೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ಎಂದರು. ಮನೀಶ್ ಗೂನಡ್ಕ ಕಸ್ತೂರಿ ರಂಗನ್ ವರದಿಯ ಬಗ್ಗೆ ಇನ್ನೂ ಕೂಡಾ ಗ್ರಾಮಸ್ಥರಿಗೆ ಸ್ಪಷ್ಟ ಮಾಹಿತಿಯ ಬಗ್ಗೆ ತಿಳಿವಳಿಕೆ ಇಲ್ಲ. ಅಧಿಕಾರಿಗಳು , ರಾಜ್ಯ ಸರಕಾರ , ಕೇಂದ್ರ ಸರಕಾರ ಅಧಿಕಾರಿಗಳು ಕಸ್ತೂರಿ ರಂಗನ್ ಜಾರಿಯ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ಸ್ಪಷ್ಟ ಮಾಹಿತಿಯನ್ನು ನೀಡಲಿ ಎಂದು ಸಭೆಯಲ್ಲಿ ಸಲಹೆ ನೀಡಿದರು. ಕಸ್ತೂರಿ ರಂಗನ್ ವರದಿಯೇ ಬೇಡ, ಸರಕಾರ ಜಾರಿಗೊಳಿಸಿದ ವರದಿಯನ್ನು ಹಿಂಪಡೆದು ಸ್ಟೇ ಮಾಡಿ ಜನರನ್ನು, ಮುಂದಿನ ಪೀಳಿಗೆಯನ್ನು, ಗ್ರಾಮವನ್ನು ,ಪರಿಸರವನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ದ. ಕ ಸಂಪಾಜೆ ಗ್ರಾಮಸ್ಥರ ಆಕ್ಷೇಪಣೆ ಪ್ರಕಾರ ಡಾ. ಕಸ್ತೂರಿ ರಂಗನ್ ಸಮಿತಿಯು ನೀಡಿದ ವರದಿಯು ಸಂಪೂರ್ಣವಾಗಿ ಉಪಗ್ರಹ ಆಧಾರಿತವಾಗಿದ್ದು, ಸಮಿತಿ ಸದಸ್ಯರು ಖುದ್ದಾಗಿ ಯಾವುದೇ ಪ್ರಸ್ತಾವಿತ ಪ್ರದೇಶಕ್ಕೆ ಭೇಟಿ ನೀಡದೆ ಇಲ್ಲಿನ ವಾಸ್ತವ ಪರಿಸ್ಥಿತಿಯ ಅಧ್ಯಯನ ಹಾಗೂ ಪರಿಶೀಲನೆ ಮಾಡದೆ ತಯಾರಿಸಿದ ಅವೈಜ್ಞಾನಿಕ ವರದಿಯಾಗಿರುತ್ತದೆ , ಡಾ. ಕಸ್ತೂರಿ ರಂಗನ್ ವರದಿಯಿಂದ ಸಂಪಾಜೆ ಗ್ರಾಮವನ್ನು ಸಂಪೂರ್ಣವಾಗಿ ಕೈ ಬಿಡಬೇಕು.

ಸಂಪಾಜೆ ಗ್ರಾಮದಲ್ಲಿ ನಿರ್ಬಂಧಿಸಬಹುದಾದ ಚಟುವಟಿಕೆಗಳಾದ ಕಲ್ಲಿನ ಕೋರೆ, ಮರಳುಗಾರಿಕೆ, ಕೈಗಾರಿಕೆ, ಜಲ ವಿದ್ಯುತ್, ಕಾರ್ಖಾನೆಗಳು, ಬೃಹತ್ ಕಟ್ಟಡಗಳು, ಕೆಂಪು/ಕಿತ್ತಳೆ ವರ್ಗದ ಯಾವುದೇ ಕೈಗಾರಿಕೆಗಳು ಗ್ರಾಮದಲ್ಲಿ ನಡೆಯುತ್ತಿಲ್ಲ. ಇಲ್ಲಿಯ ಜನರು ತಲೆತಲಾಂತರಗಳಿಂದ ಪರಿಸರಕ್ಕೆ ಹೊಂದಿಕೊಂಡು ಪರಿಸರವನ್ನು ಸಂರಕ್ಷಿಸಿ ಬರುತ್ತಿರುವರು. ಈ ಗ್ರಾಮಕ್ಕೆ ಕಸ್ತೂರಿ ರಂಗನ್ ವರದಿಯಲ್ಲಿರುವ ಪರಿಸರ ಸೂಕ್ಷ್ಮ ಪ್ರದೇಶದ ನಿಯಮವನ್ನು ಜಾರಿಯ ಅಗತ್ಯತೆ ಕಂಡುಬರುವುದಿಲ್ಲ. ಅದುದರಿಂದ, ಸಂಪಾಜೆ ಗ್ರಾಮವನ್ನು ಕಸ್ತೂರಿ ರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶದ ಪಟ್ಟಿಯಿಂದ ಸಂಪೂರ್ಣವಾಗಿ ಕೈಬಿಡುವುದು ಹಾಗೂ ಯಥಾಸ್ಥಿತಿಯನ್ನು ಕಾಪಾಡುವಂತೆ ಸರ್ವಾನುಮತದಿಂದ ನಿರ್ಣಯಿಸಲಾಯಿತು.

ಒಂದು ವೇಳೆ ಸರಕಾರ ಮಟ್ಟದಿಂದ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸುವುದಾದರೆ, ಸಂಪಾಜೆ ಗ್ರಾಮದಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡಿಸಿ, ಗಡಿಗುರುತಿಸಿ ಜನವಸತಿ ಪ್ರದೇಶವನ್ನು ಕೈಬಿಟ್ಟು ಶೂನ್ಯ ಬಫರ್ ಜೋನ್ ವ್ಯಾಪ್ತಿಗೆ ಒಳತಂದು ಜನವಸತಿಯಲ್ಲಿರುವ ನಾಗರೀಕರ ಮೂಲಭೂತ ಸೌಕರ್ಯ, ಕೃಷಿ ಚಟುವಟಿಕೆಗಳಿಗೆ ಹೊಂದರೆಯಾಗದಂತೆ ಯಥಾಸ್ಥಿತಿಯಲ್ಲಿ ಮುಂದುವರೆಯಲು ಅವಕಾಶ ನೀಡುವಂತೆ ಸರ್ವಾನುಮತದಿಂದ ನಿರ್ಣಯಿಸಲಾಯಿತು.

ಈ ಮೇಲೆ ನಿರ್ಣಯಿಸಿ ಮಾಡಲಾದ ಅಂಶಗಳನ್ನು ಸೇರಿಸಿಕೊಳ್ಳದೇ ವರದಿಯನ್ನು ಜಾರಿ ಮಾಡಿದ್ದಲ್ಲಿ ಗ್ರಾಮ/ತಾಲೂಕು/ಜಿಲ್ಲಾ ಮಟ್ಟದ ರೈತಾಪಿ ವರ್ಗದವರು ಕಾನೂನು ವ್ಯಾಪ್ತಿಯಲ್ಲಿ ಒಳಪಟ್ಟು ಉಗ್ರ ಪ್ರತಿ ಘಟನೆಯನ್ನು ನಡೆಸುವುದೆಂದು ನಿರ್ಣಯಿಸಲಾಯಿತು.

ನಮ್ಮ ಭಾಗದಲ್ಲಿ ಸಾಮಾನ್ಯವಾಗಿ ಬಯಲು ಸೀಮೆಯಲ್ಲಿರುವ ಗುಂಪುಗಳಿಗಿಂತ ಭಿನ್ನವಾಗಿ, ಗ್ರಾಮಾದ್ಯಂತ ವಾಸದ ಮನೆಗಳು ಚದುರಿ ಹೋಗಿರುವುದರಿಂದ ಮತ್ತು ಕಂದಾಯ ಇಲಾಖೆಯಿಂದ ಹಕ್ಕುಪತ್ರ ಪಡೆದ ಸಾಗುವಳಿ ಮಾಡುತ್ತಿರುವ ಭೂಮಿ ಮತ್ತು ಅದರ ಒಳಗೆ ಇರುವ ವಾಸದ ಮನೆಗಳು ಇರುವ ಪ್ರದೇಶವನ್ನು ” ಜನವಸತಿ ಪ್ರದೇಶ ” ಮತ್ತು ” ಕೃಷಿ ಭೂಮಿ ಪ್ರದೇಶ” ಎಂದು ಪರಿಗಣಿಸಿ ಈ ಸಂಪಾಜೆ ಗ್ರಾಮವನ್ನು ಪರಿಸರ ಸೂಕ್ಷ್ಮ ವಲಯದಿಂದ ಹೊರಗಿಡಬೇಕು .

ಸಂಪಾಜೆ ಗ್ರಾಮದ ಭಾಗದಲ್ಲಿ ನಮ್ಮ ಗ್ರಾಮ ದ ಗಡಿ , ಮೀಸಲು ಅರಣ್ಯದ ಗಡಿ ಮತ್ತು ಕಂದಾಯ ಭೂಮಿಯ ಗಡಿಗಳನ್ನು ಅರಣ್ಯ ಇಲಾಖೆ ಏಕಪಕ್ಷೀಯವಾಗಿ ನಿಧರಿಸಿರುವುದನ್ನು ಕೈ ಬಿಟ್ಟು , ವಾಸ್ತವ ಆಧಾರದ ಮೇಲೆ ಕಂದಾಯ ಇಲಾಖೆ, ಅರಣ್ಯ ಇಲಾಖೆ , ಸ್ಥಳೀಯ ಜನಪ್ರತಿನಿಧಿಗಳನ್ನೊಳಗೊಂಡ ಸ್ಥಳೀಯ ನಿವಾಸಿಗಳ ಸಮಿತಿಯ ಜಂಟಿ ಸಹಯೋಗದಲ್ಲಿ , ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು , ಚೈನ್ ಮೂಲಕವೇ ಅಳತೆ / ಸರ್ವೇ ಮಾಡಿ ನಿಖರವಾದ ಗಡಿ ಗುರುತು ಮಾಡಬೇಕಿದೆ .

ನಮ್ಮ ಗ್ರಾಮಗಳ ಭೂಮಿ ಮತ್ತು ಜನಜೀವನಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಚಟುವಟಿಕೆಗಳು ಈಗ ಅಸ್ತಿತ್ವದಲ್ಲಿರುವಂತೆ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತಿಯ ಸುಪರ್ದಿಯಲ್ಲೇ ಇರಬೇಕು. ಮಾತ್ರವಲ್ಲ ಗ್ರಾಮದೊಳಗೆ ಅರಣ್ಯ ಇಲಾಖೆಯಿಂದ ಯಾವುದೇ ತೆರವಾದ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು , ಒಂದು ಜನವಸತಿ ಪ್ರದೇಶಕ್ಕೆ ಅನ್ವಯಿಸುವ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ, ಕೃಷಿಕರು ತಮ್ಮ ಭೂಮಿಯಿಂದ ಮತ್ತು ಅರಣ್ಯ ಮೂಲದಿಂದ ಅನುಭವಿಸಿಕೊಂಡು ಬರುತ್ತಿರುವ ಕುಡಿಯುವ ನೀರು, ಕೃಷಿಗೆ ಬಳಸುವ ನೀರಿನ ಮೂಲಗಳಿಗೆ , ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೌಲಭ್ಯ, ಸೇತುವೆಗಳನ್ನು ಯಥಾಸ್ಥಿತಿ ಉಳಿಸಿಕೊಳ್ಳುವ ಮತ್ತು ಅಭಿವೃದ್ಧಿಪಡಿಸಿಕೊಳ್ಳುವ ಮತ್ತು ಗ್ರಾಮದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಅವಕಾಶಗಳಿಗೆ ಯಾವುದೇ ರೀತಿಯಲ್ಲಿ ನಿರ್ಬಂಧವನ್ನು ಹೇರುವಂತಿರಬಾರದು.

ಗ್ರಾಮದಲ್ಲಿ ಈಗಾಗಲೇ ಮಾನವ , ವನ್ಯಜೀವಿ ಸಂಘರ್ಷ ಅತಿರೇಕಕ್ಕೆ ತಲುಪಿದ್ದು , ರೈತರ ಜೀವಹಾನಿ ಮತ್ತು ಅಡಿಕೆ, ಭತ್ತ, ಬಾಳೆ, ಕೊಕ್ಕೊ, ಕಾಫಿ, ರಬ್ಬರ್ ಕರಿಮೆಣಸು ಇತರ ಬೆಳೆಗಳನ್ನು ಆನೆ, ಮಂಗಗಳು, ಹಂದಿ ವನ್ಯ ಜೀವಿಗಳು ನಿರಂತರವಾಗಿ ನಾಶಪಡಿಸುತ್ತಿದೆ.
ಈ ವರದಿಯ ಅನುಷ್ಠಾನದಿಂದ ಅರಣ್ಯ ಇಲಾಖೆಯ ನಿಯಮಗಳು ಇನ್ನಷ್ಟು ಬಿಗಿಯಾಗಲಿದ್ದು , ಗ್ರಾಮದಲ್ಲಿ ವನ್ಯ ಪ್ರಾಣಿಗಳ ಉಪಟಳದಿಂದ ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಬಹುದು.ಕಸ್ತೂರಿ ರಂಗನ್ ವರದಿಯಲ್ಲಿ ವನ್ಯ ಪ್ರಾಣಿಗಳ ಹಾವಳಿ ತಡೆಗೆ ಯಾವುದೇ ಮಾರ್ಗ ಸೂಚಿ ಮತ್ತು ಕಾರ್ಯ ಯೋಜನೆಗಳನ್ನು ಕೈ ಹೊಂದಿರುವುದಿಲ್ಲ.
ಪರಿಸರ ಸೂಕ್ಷ್ಮ ವಲಯವಾಗಿ ಪರಿವರ್ತನೆ ಮಾಡುವುದರ ಜೊತೆಯಲ್ಲಿ ಸರಿ ಸುಮಾರು ಅದರ ಅರ್ಧದಷ್ಟು ಪ್ರದೇಶದಲ್ಲಿ ಮತ್ತೆ ಬಫರ್ ಜೋನ್ ನಿರ್ಬಂಧ ಹೇರುವ ಪ್ರಯತ್ನ ದುರುದ್ದೇಶಪೂರಿತವಾಗಿದ್ದು ಮತ್ತೆ ಯಾವುದೇ ರೀತಿಯಲ್ಲಿ ಸಮರ್ಥನೀಯವಲ್ಲ ಆದುದರಿಂದ ಸದ್ರಿ ಬಫರ್ ಜೋನ್ ಪ್ರಸ್ತಾವನೆಯನ್ನು ಕೈ ಬಿಡಬೇಕು.
ಗ್ರಾಮವು ಪಶ್ಚಿಮ ಗಟ್ಟ ತಪ್ಪಲು ಪ್ರದೇಶವಾಗಿದ್ದು , ಇಲ್ಲಿ ಯಾವುದೇ ರೀತಿಯಾದಂತಹ ಬಫರ್ ಜೋನ್ ಕಾನೂನುಗಳ ನಿರ್ಬಂಧನೆಯನ್ನು ಹೇರಲು ಸಮಸ್ತ ಗ್ರಾಮಸ್ಥರ ಆಕ್ಷೇಪಣೆ ಹಾಗೂ ಪರಿಸರ ಸಂರಕ್ಷಣೆಯ ಜೊತೆಯಲ್ಲಿ ವಾಸವಿರುವ ಜನರ ಜೀವನವು ನಿರಂತರವಾಗಿ ಸಾಗಲು ಅವಕಾಶ ಮಾಡಿ ಕೊಡುವುದು ಸರಕಾರದ ಜವಾಬ್ದಾರಿಯಾಗಿರುತ್ತದೆ ಎಂದು ಕಸ್ತೂರಿ ರಂಗನ್ ವರದಿಗೆ ಗ್ರಾಮಸ್ಥರೆಲ್ಲರೂ ಸರ್ವಾನುಮತದಿಂದ ಸಹಿ ಹಾಕಿ ಆಕ್ಷೇಪಣೆ ಸಲ್ಲಿಸಿದರು.

ಮೊದಲಾದವರು ಸೇರಿದಂತೆ ಕಸ್ತೂರಿ ರಂಗನ್ ವರದಿಯೇ ಬೇಡ, ಸರಕಾರ ಜಾರಿಗೊಳಿಸಿದ ವರದಿಯನ್ನು ಹಿಂಪಡೆದು ಸ್ಟೇ ಮಾಡಿ ಜನರನ್ನು, ಮುಂದಿನ ಪೀಳಿಗೆಯನ್ನು, ಗ್ರಾಮವನ್ನು ,ಪರಿಸರವನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷ ಜಿ. ಕೆ ಹಮೀದ್ , ಕೆ.ಆರ್ ಜಗದೀಶ್ ರೈ , ಸುಂದರಿ ಮುಂಡಡ್ಕ , ಸುಮತಿ ಶಕ್ತಿ ವೇಲ್ , ಮಾಜಿ ಗ್ರಾ.ಪಂ ಉಪಾಧ್ಯಕ್ಷ ಎಸ್.ಕೆ ಹನೀಫ್ , ನಿವೃತ್ತ ಮುಖ್ಯಪಾಧ್ಯಾಯರು ದಾಮೋದರ ಮಾಸ್ಟರ್ , ಉಮ್ಮರ್ ಬೀಜದ ಕಟ್ಟೆ , ಚಿದಾನಂದ ಯು.ಎಸ್ , ರಾಜಗೋಪಾಲ ಯು. ಬಿ, ಜಿ ರಾಮಚಂದ್ರ , ನಾಗೇಶ್ ಬಾಚಿ ಗದ್ದೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದು, ಕಸ್ತೂರಿ ರಂಗನ್ ವರದಿಗೆ ಗ್ರಾಮಸ್ಥರೆಲ್ಲರೂ ಸರ್ವಾನುಮತದಿಂದ ಸಹಿ ಹಾಕಿ ಆಕ್ಷೇಪಣೆ ಸಲ್ಲಿಸಿದರು.

ಶ್ರೀಮತಿ ಸರಿತಾ ವೋಲ್ಗಾ ಡಿಜೋಜ ಸರ್ವರನ್ನು ಸ್ವಾಗತಿಸಿ, ಹಾಲಿ ಮಾಜಿ ಗ್ರಾ.ಪಂ ಸದಸ್ಯ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಅಬುಸಾಲಿ ಗೂನಡ್ಕ ವಂದಿಸಿ, ರಾಷ್ಟಗೀತೆ ಹಾಡುವುದರ ಜೊತೆಗೆ ಸಭೆಯು ಮುಕ್ತಾಯಗೊಂಡಿತು.