ತುಳುಭಾಷೆಯನ್ನು ರಾಜ್ಯದ ಎರಡನೇ ರಾಜ್ಯಭಾಷೆಯಾಗಿ ಘೋಷಿಸಿದ ಕರ್ನಾಟಕ ಸರಕಾರಕ್ಕೆ ದೆಹಲಿ ತುಳುಸಿರಿ ಅಭಿನಂದನೆ

0

ಪಂಚ ದ್ರಾವಿಡ ಭಾಷೆಯಲ್ಲೊಂದಾದ ತುಳುವನ್ನು ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂಬ ತುಳುವರ ಒಕ್ಕೊರಲ ಬೇಡಿಕೆಯನ್ನು ಕರ್ನಾಟಕ ಸರಕಾರವು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತವಾಗಿ ತೀರ್ಮಾನಿಸಿರುವುದು ಸಂತಸದ ಸಂಗತಿ” ಎಂದು ದೆಹಲಿಯ ತುಳುಸಿರಿ ಸರಕಾರವನ್ನು ಅಭಿನಂದಿಸಿದೆ.

ಕಳೆದ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ಎಲ್ಲ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಪಂಚ ದ್ರಾವಿಡ ಭಾಷೆಯಾದ ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕೆಂಬ ಮನವಿಯನ್ನು ದೆಹಲಿ ತುಳುಸಿರಿಯ ವತಿಯಿಂದ ಮಾಡಲಾಗಿತ್ತು. ಕರ್ನಾಟಕ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ತನ್ನ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಉಲ್ಲೇಖಿಸಿ ಭರವಸೆ ನೀಡಿತ್ತು. ಇದೀಗ ತನ್ನ ಪ್ರಣಾಳಿಕೆಯಂತೆ ನಡೆದುಕೊಂಡಿರುವುದು ತುಳುನಾಡಿನ ಜನತೆಗೆ ಅತೀವ ಸಂತಸವನ್ನುಂಟುಮಾಡಿದೆ ಎಂದು ದೆಹಲಿ ತುಳುಸಿರಿ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ತಿಳಿಸಿದ್ದಾರೆ.

ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸಬೇಕಾದರೆ ಕರ್ನಾಟಕ ಸರಕಾರವು ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿಸಬೇಕೆಂಬ ಪ್ರಸ್ತಾಪವನ್ನು ಮೊದಲು ಸರಕಾರದ ಗಮನಕ್ಕೆ ತಂದದ್ದು ದೆಹಲಿ ತುಳುಸಿರಿ. ದೆಹಲಿ ತುಳುಸಿರಿಯ ಈ ಕೋರಿಕೆಯ ಮೇರೆಗೆ ವಿಶೇಷವಾಗಿ ಮುತುವರ್ಜಿ ವಹಿಸಿ ಕಾರ್ಯಗೈದ ಪ್ರೊ.ರಾಧಾಕೃಷ್ಣ ಅವರಿಗೆ ಇದರ ಪೂರ್ಣ ಶ್ರೇಯಸ್ಸು ಸಲ್ಲಬೇಕು. ಅವರು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷರಾಗಿದ್ದರು. ಸಮಿತಿ ಅಧ್ಯಕ್ಷರಾಗಿದ್ದ ಇಂದಿನ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರಿಗೆ, ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಇಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ದೆಹಲಿ ತುಳುಸಿರಿಯು ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಪ್ರಸ್ತುತ ಸರಕಾರದ ಸಚಿವ ಸಂಪುಟಕ್ಕೆ, ಈ ಹೋರಾಟದ ಹಿಂದೆ ಶ್ರಮಿಸಿದ ಕರಾವಳಿಯ ಶಾಸಕರಿಗೆ, ಸಂಸದರಿಗೆ ಹಾಗೂ ಮಹನೀಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಈ ಐತಿಹಾಸಿಕ ಕ್ಷಣವನ್ನು ಒದಗಿಸಿಕೊಟ್ಟ ಮುಖ್ಯಮಂತ್ರಿಗಳನ್ನು ದೆಹಲಿಯಲ್ಲಿ ತುಳುವರು ಆದರಾಭಿಮಾನದಿಂದ ಅಭಿನಂದಿಸಲಿದ್ದಾರೆ.

ತುಳು ಭಾಷೆ, ಸಂಸ್ಕೃತಿಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೆಹಲಿ ತುಳುಸಿರಿಯು ಸುಮಾರು ಮೂರು ದಶಕಗಳಿಂದ ನಿರಂತರವಾಗಿ ಕಾರ್ಯಗೈಯುತ್ತಿದೆ. ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸಲು ಅಪಾರ ಶ್ರಮವಹಿಸುತ್ತಿದೆ. ಮುಂದಿನ ದಿನಗಳಲ್ಲಿಯೂ ಈ ಪ್ರಯತ್ನವು ಮುಂದುವರಿಯಲಿದೆ ಎಂದು ದೆಹಲಿ ತುಳುಸಿರಿ ಅಧ್ಯಕ್ಷ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ವಸಂತ ಶೆಟ್ಟಿ ಬೆಳ್ಳಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.