ಕಸ್ತೂರಿ ರಂಗನ್ ವರದಿ ಬಗ್ಗೆ ಪಂಜದಲ್ಲಿ ವಿಶೇಷ ಗ್ರಾಮ ಸಭೆ

0

ಪ್ರತಿ ಮನೆಯಿಂದ ಪ್ರತ್ಯೇಕ ಅಕ್ಷೇಪಣೆ ಸಲ್ಲಿಕೆಯ ನಿರ್ಣಯ

ಸೆ. 21 ರಂದು ಪ್ರತ್ಯೇಕ ಆಕ್ಷೇಪಣೆ ಪಂಜ ಸಿ ಎ ಬ್ಯಾಂಕ್ ಸೇವಾ ಕೇಂದ್ರದಲ್ಲಿ ಅರ್ಜಿ ಸಿದ್ಧಪಡಿಸುವ ಕಾರ್ಯಕ್ರಮ

ಕೂತ್ಕುಂಜ, ಐವತ್ತೊಕ್ಲು, ಪಂಬೆತ್ತಾಡಿ ಗ್ರಾಮದ ಪ್ರತಿ ಮನೆಯವರು ಪಾಲ್ಗೊಂಡು ಆಕ್ಷೇಪ ಸಲ್ಲಿಸಲು ವಿನಂತಿ

ಗ್ರಾಮ ಪಂಚಾಯತ್ ವತಿಯಿಂದ ಕಸ್ತೂರಿ ರಂಗನ್ ವರದಿ ಬಗ್ಗೆ ಸೆ. 19 ರಂದು ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ವಿಶೇಷ ಗ್ರಾಮ ಸಭೆ ಜರುಗಿತು.
ಸಭೆಯ ನಿರ್ಣಯ ಕಳುಹಿಸುವುದು. ಪ್ರತಿ ಮನೆಯವರು ರಿಜಿಸ್ಟರ್ ಪೋಸ್ಟ್ ಮತ್ತು ಇ-ಮೇಲ್ ಪ್ರತ್ಯೇಕ ಆಕ್ಷೇಪಣೆ ಸಲ್ಲಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಬಗ್ಗೆ ಸೆ. 21 ರಂದು ಪಂಜ ಸಿ ಎ ಬ್ಯಾಂಕ್ ಸೇವಾ ಕೇಂದ್ರದಲ್ಲಿ ಪ್ರತ್ಯೇಕ ಆಕ್ಷೇಪಣೆ ಸಲ್ಲಿಕೆಗೆ ಅರ್ಜಿ ಸಿದ್ದಪಡಿಸುವ ಕಾರ್ಯಕ್ರಮ ನಡೆಯಲಿದೆ. ಕೂತ್ಕುಂಜ ಗ್ರಾಮದ ಮತ್ತು ಬಫರ್ ಜೋನ್ ಗೆ ಒಳಪಡುವ ಐವತ್ತೊಕ್ಲು, ಪಂಬೆತ್ತಾಡಿ ಗ್ರಾಮದ ಪ್ರತಿ ಮನೆಯವರು ಪಾಲ್ಗೊಳ್ಳಲು ಆಕ್ಷೇಪಣೆ ಸಲ್ಲಿಕೆಗೆ ಸರ್ವೆ ನಂಬರ್,ಮನೆ ನಂಬರ್, ವಾಸಸ್ಥಳದ ಪೂರ್ಣ ವಿಳಾಸದೊಂದಿಗೆ ಆಗಮಿಸಬೇಕಾಗಿ ವಿನಂತಿಸಿದ್ದಾರೆ.

” ಕಸ್ತೂರಿ ರಂಗನ್ ವರದಿ ಇದೊಂದು ಗಂಭೀರ ವಿಚಾರವಾಗಿದೆ. ಈ ಬಗ್ಗೆ ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದ ಜೀವನದ ಪ್ರಶ್ನೆಯಾಗಲಿದೆ. ಇದರಲ್ಲಿ ಅವರು ಉಪಗ್ರಹ ಆಧಾರಿತ ಸರ್ವೆ ಮಾಡುವುದು ಸರಿಯಲ್ಲ.ಗ್ರಾಮದ ಗಡಿಯನ್ನು ಮರು ಪರಿಶೀಲಿಸಿ ನಿಖರವಾದ ಭೌಗೋಳಿಕ ಗಡಿ ಪ್ರಕಟಿಸಬೇಕು,ಸರ್ವೆ ನಂಬರ್ ಆಧಾರಿತ ನಕ್ಷೆಯನ್ನು ಸಾರ್ವಜನಿಕರಿಗೆ ಒದಗಿಸಬೇಕು,ಜನವಸತಿ ಕೃಷಿ ಮತ್ತು ತೋಟಗಾರಿಕೆ ಪ್ರದೇಶಗಳ ವಾಸ್ತವ ಪರಿಸ್ಥಿತಿಯನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು,ಸ್ಥಳೀಯ ಜನರ ಜೀವನೋಪಾಯ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅನಗತ್ಯ ಅಡಚಣೆ ಆಗದಂತೆ ಸ್ಪಷ್ಟ ರಕ್ಷಣೆ ನೀಡಬೇಕು.ಅಂತಿಮ ನಿರ್ಧಾರಕ್ಕೂ ಮೊದಲು ಸ್ಥಳ ಪರಿಶೀಲನೆ ಮತ್ತು ಸ್ಥಳೀಯ ಸಾರ್ವಜನಿಕ ಸಮಾಲೋಚನೆ ನಡೆಸಬೇಕು.” ಎಂದು ಲೋಕೇಶ್ ಪೀರನಮನೆ ಅವರು ಕಸ್ತೂರಿನ ವರದಿಗೆ ಆಕ್ಷೇಪಣೆ ಬಗ್ಗೆ ಸಭೆಗೆ ವಿವರಿಸಿದರು.

ಕಸ್ತೂರಿ ರಂಗನ್ ವರದಿಯಲ್ಲಿ ಸೇರಿರುವ ಗ್ರಾಮದ ಪ್ರತೀ ಮನೆಯವರು ಮತ್ತು ಬಪ್ಪರ್ ಜೋನ್ ನಲ್ಲಿರುವ ಪ್ರತೀ ಮನೆಯವರು ತಮ್ಮ ಜಾಗದ ಸರ್ವೆ ನಂಬರ್ ವಿಳಾಸದೊಂದಿಗೆ ಇ-ಮೇಲ್ ಮತ್ತು ಅಂಚೆ ಆಕ್ಷೇಪಣೆ ಸಲ್ಲಿಸುವ. ಸೆ. 25 ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ ಎಂದು ಅವರು ಹೇಳಿದರು.

ಕಸ್ತೂರಿ ರಂಗನ್ ವರದಿಯಲ್ಲಿರುವ ನಿರ್ಬಂಧ, ನಿಯಂತ್ರಣ ಮತ್ತು ನಮ್ಮ ಆಕ್ಷೇಪಣೆ ಬಗ್ಗೆ ಪರದೆ ಮೂಲಕ ತೋರಿಸಿ ಸಭೆಗೆ ವಿವರಿಸಿದರು.

‘ಈ ರೀತಿಯ ಪರಿಸರ ಸೂಕ್ಷ್ಮ ವಲಯ ಘೋಷಣೆಯಾದ ನಂತರ ಅರಣ್ಯಕ್ಕೆ ಅನೇಕ ಸಂಬಂಧಪಟ್ಟ ಕಾನೂನುಗಳು ಬಂದರೆ ಬಹಳಷ್ಟು ತೊಂದರೆ ಆಗಿರುವುದನ್ನು ರಾಜ್ಯದ ಹಲವು ಕಡೆ ಅಭಯಾರಣ್ಯ ಘೋಷಣೆಯಾದ ಕಡೆ ಕಂಡಿದ್ದೇವೆ. ಮೂಲ ಸೌಕರ್ಯಗಳಿಗೆ ಬಹಳಷ್ಟು ತೊಂದರೆಗಳು ಇದರಲ್ಲಿ ಕಂಡು ಕೊಂಡಂತ ವಿಚಾರ. ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆಯಾದರೆ ನಾವು ಯಾವುದೇ ಕೆಲಸ ಮಾಡ ಬೇಕಾದರೆ ಅವರಿಂದ ಅನುಮತಿ ಪಡೆಯಬೇಕು. ಗ್ರಾಮ ಪಂಚಾಯತ್ ಕಾಮಗಾರಿ ಆಗಬೇಕೆಂದರೆ ಕೂಡ ಅವರಿಂದ ಅನುಮತಿಗಳನ್ನು ಪಡೆಯ ಬೇಕಾಗು ಬಹುದು. ನಮ್ಮ ಜಾಗಗಳ ಪಕ್ಕ ನಮ್ಮಲ್ಲಿರುವ ಕೃಷಿ ಇರುವ ಸರಕಾರಿ ಭೂಮಿಗಳು ಇವೆ. ಇದಕ್ಕೆ ಹಕ್ಕುಪತ್ರ ಇದ್ದವರು ಇದ್ದಾರೆ. ಪ್ಲಾಟಿಂಗ್ ಆಗದವರು ಇದ್ದಾರೆ. ಈಗಾಗಲೇ ಹಕ್ಕುಪತ್ರ ಸಿಕ್ಕಿ ರದ್ದಾದ ವಿಚಾರಗಳನ್ನು ನಾವು ನೋಡಿದ್ದೇವೆ.
ಒಮ್ಮೆ ಪರಿಸರ ಸೂಕ್ತ ಎಂದು ಘೋಷಣವಾದರೆ ಎಲ್ಲಾ ಸರಕಾರಿ ಜಮೀನು ಅರಣ್ಯವೇ ಆಗತ್ತದೆ.ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಬರುತ್ತದೆ.
ಅನೇಕ ಸಮಸ್ಯೆಗಳು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳಿಂದ ಇದೆ. ಅದನ್ನೆಲ್ಲವನ್ನು ಜಾಗೃತ ಜನರು ಪ್ರಶ್ನಿಸಿ ಬೇಕು. ಒಂದು ಅಧ್ಯಾಯನ ತಂಡ ಇರಬೇಕು. ನಾವೆಲ್ಲರೂ ಒಂದಾಗಿ ಮರಣ ಶಾಸನದಂತ ಕಾನೂನುಗಳನ್ನು ಬಂದರೆ ತಡೆಯಲು ಸಾಧ್ಯವಿದೆ.ಅನೇಕ ಹೋರಾಟಗಳಿಂದ ನಾವು ಯಶಸ್ವಿ ಕಂಡಿದ್ದೇವೆ”.ಎಂದು ರಮಾನಂದ ಎಣ್ಣೆಮೆಜಲು ರವರು ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಿದರು .

ಶಿವರಾಮಯ್ಯ ಕರ್ಮಾಜೆ, ಲಿಗೋದರ ಆಚಾರ್ಯ, ಲಕ್ಷ್ಮಣ ಗೌಡ ಬೊಳ್ಳಾಜೆ, ಆಶೀತ್ ಕಲ್ಲಾಜೆ, ಜಯರಾಮ ಕಲ್ಲಾಜೆ, ಪರಮೇಶ್ವರ ಭಟ್ ಕೂತ್ಕುಂಜ, ವೆಂಕಟೇಶ್ವರ ಜೋಯಿಷ, ಲೋಕೇಶ್ ಬರೆಮೇಲು, ರಾಧಾಕೃಷ್ಣ ಸಿ ಟಿ ಮೊದಲಾದವರು ಕಸ್ತೂರಿರಂಗನ್ ವರದಿ ವಿರೋಧಿಸಿ ಚರ್ಚಿಸಿದರು.

ಗ್ರಾಮ ಪಂಚಾಯತ್ ಆಡಳಿತಾಧಿಕಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ
ಶ್ರೀಮತಿ ಚೈತ್ರ ಎಸ್.ಆರ್. ಸಭಾಧ್ಯಕ್ಷತೆ ವಹಿಸಿದ್ದರು. ಉಪ ವಲಯ ಅರಣ್ಯಅಧಿಕಾರಿ ಹರೀಶ್ , ಗ್ರಾಮ ಆಡಳಿತ ಅಧಿಕಾರಿ ದುರ್ಗಪ್ಪ,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್ ಶಾಸ್ತ್ರಿ, ಹಿರಿಯ ವೈದ್ಯರಾದ ಡಾ.ರಾಮಯ್ಯ ಭಟ್,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿ ಪ್ರಸಾದ್ ಸಿ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೀರ್ತಿ ಪ್ರಸಾದ್ ಸಿ ಎಂ ಸ್ವಾಗತಿಸಿದರು. ಚಂದ್ರಶೇಖರ್ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಚಿತ್ರಕಲಾ ಮಾಧವ ಬೊಳ್ಳಾಜೆ ಪ್ರಾರ್ಥಿಸಿದರು. ಕಾರ್ಯದರ್ಶಿ ಬಿ.ಟಿ.ಕೃಷ್ಣಪ್ಪ ವಂದಿಸಿದರು.