ಬಾಂಜಿಕೋಡಿಯಲ್ಲಿ ಕೃಷಿ ತೋಟಗಳನ್ನು ಧ್ವಂಸಗೊಳಿಸಿದ ಕಾಡಾನೆಗಳ ಹಿಂಡು

0

ಅರಣ್ಯಾಧಿಕಾರಿಗಳ ಭೇಟಿ – ಬೇಂಗಮಲೆ ಕಾಡಲ್ಲಿ 7 ಆನೆಗಳ ಪತ್ತೆ

ಐವರ್ನಾಡು ಗ್ರಾಮದಲ್ಲಿ ಆನೆಗಳ ಉಪಟಳ ಹೆಚ್ಚಾಗುತ್ತಿದ್ದು ಸೆ.23 ರಂದು ರಾತ್ರಿ ಆನೆಗಳು ಕೃಷಿ ತೋಟಗಳಿಗೆ ನುಗ್ಗಿ ಅಪಾರ ಕೃಷಿ ನಾಶ ಮಾಡಿವೆ.
ಬೇಂಗಮಲೆ ಕಾಡಿನಿಂದ ಇಳಿದ ಆನೆಗಳು ಡಾಮರು ರಸ್ತೆಯನ್ನು ದಾಟಿ ಮಹಾಬಲ ಗುಂಪಕಲ್,ವಾಸುದೇವ ಕೆದ್ಕಾರ್, ಸುದೇಶ್ ಚೆಮ್ನೂರು, ಸುಬ್ರಹ್ಮಣ್ಯ ಕೆ.ಎಂಬವರ ತೋಟಗಳಲ್ಲಿ ಕೃಷಿಗೆ ಹಾನಿ ಮಾಡಿವೆ.


ಬಾಳೆ ಗಿಡಗಳು,ಅಡಿಕೆ ಸಸಿ, ತೆಂಗಿನ ಗಿಡಗಳು ,ಕುಡಿಯುವ ನೀರಿನ ಪೈಪ್ ಗಳನ್ನು ಪುಡಿಗಟ್ಟಿದೆ. 6 ಚಿಕ್ಕ ಬೈನೆ ಮರಗಳನ್ನು ಧ್ವಂಸಗೊಳಿಸಿದೆ.
ಇತ್ತೀಚೆಗೆ ಆನೆಗಳು ಬೇಂಗಮಲೆಯಲ್ಲಿ ಬೀಡುಬಿಟ್ಟಿದ್ದು ನಿರಂತರ ಕೃಷಿ ತೋಟಗಳಿಗೆ ಹಾನಿ ಮಾಡುತ್ತಿದ್ದು ಕೃಷಿಕರಿಗೆ ತೊಂದರೆಯಾಗಿದೆ.
ಹಾನಿಯಾದಲ್ಲಿಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ಸ್ಥಳದಲ್ಲಿ ಕೃಷಿ ಹಾನಿಯಾಗಿರುವುದನ್ನು ವೀಕ್ಷಿಸಿದರು.


ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಗ್ರಾಮಸ್ಥರು ಹಾನಿಗೊಳಗಾದಲ್ಲಿಗೆ ಭೇಟಿ ನೀಡಿದ್ದು ಆನೆಗಳಿಂದಾಗಿರುವ ಕೃಷಿ ಹಾನಿಯ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು.


ಬಳಿಕ ಅರಣ್ಯಾಧಿಕಾರಿಗಳು ಕೆಲ ಮಂದಿ ಅರಣ್ಯ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿದ್ದು ಆನೆಗಳು ಹೋದ ಜಾಡನ್ನು ಹಿಡಿದು ಎರಡು ತಂಡಗಳನ್ನು ಮಾಡಿ ಬೇಂಗಮಲೆ ಕಾಡಿಗೆ ಹೋದರು.
ಕಾಡಲ್ಲಿ ಏಳು ಆನೆಗಳು ಇವರಿಗೆ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.