ಮುಕ್ಕೂರಿನಲ್ಲಿ ಚಿತ್ರಕಲೆಯ ಹೊಸ ದಾಖಲೆ

0

140ಕ್ಕೂ ಅಧಿಕ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ

ಬಣ್ಣದ ಲೋಕದಲ್ಲಿ ಅರಳಿದ ಬಾಲ ಪ್ರತಿಭೆಗಳು

ಮುಕ್ಕೂರು: ಬಿಳಿ ಹಾಳೆಯ ಮೇಲೆ ಮೂಡಿದ ಮೊದಲ ಗೆರೆ… ಅದರ ಬೆನ್ನಲ್ಲೇ ಒಂದೊಂದಾಗಿ ಸೇರಿದ ಬಣ್ಣಗಳು… ಕಣ್ಣಿನಲ್ಲಿ ಕಂಡ ಕಲ್ಪನೆಗೆ ಕೈಯಲ್ಲಿದ್ದ ಪೆನ್ಸಿಲ್‌–ಕುಂಚ ಜೀವ ತುಂಬುತ್ತಿದ್ದಂತೆ ಮುಕ್ಕೂರು ಶಾಲಾ ವಠಾರವೇ ಬಣ್ಣಗಳ ಲೋಕವಾಗಿ ಕಂಗೊಳಿಸಿತು. ಮಕ್ಕಳ ಏಕಾಗ್ರತೆ, ಪೋಷಕರ ಉತ್ಸಾಹ ಹಾಗೂ ಆಯೋಜಕರ ಕಾಳಜಿಯ ನಡುವೆ ನಡೆದ ಅಂತರ್‌ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಮುಕ್ಕೂರಿನ ಗಣೇಶೋತ್ಸವಕ್ಕೆ ವಿಶಿಷ್ಟ ಮೆರುಗು ನೀಡಿತು.

ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 17ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಸೆ.13ರಂದು ನಡೆದ ಸ್ಪರ್ಧೆಯಲ್ಲಿ ಸುಳ್ಯ, ಪುತ್ತೂರು ಹಾಗೂ ಕಡಬ ತಾಲೂಕುಗಳಿಂದ 140ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡರು. ಮುಕ್ಕೂರಿನಲ್ಲಿ ಈವರೆಗೆ ನಡೆದ ಚಿತ್ರಕಲಾ ಸ್ಪರ್ಧೆಗಳಲ್ಲೇ ಇಷ್ಟೊಂದು ಸಂಖ್ಯೆಯಲ್ಲಿ

ವಿದ್ಯಾರ್ಥಿಗಳು ಭಾಗವಹಿಸಿರುವುದು ಹೊಸ ದಾಖಲೆಯಾಗಿ ಮೂಡಿತು.

1ರಿಂದ 2ನೇ, 3ರಿಂದ 4ನೇ, 5ರಿಂದ 7ನೇ ಹಾಗೂ 8ರಿಂದ 10ನೇ ತರಗತಿ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಮೊದಲ ಮೂರು ವಿಭಾಗದ ವಿದ್ಯಾರ್ಥಿಗಳಿಗೆ ತಮ್ಮಿಷ್ಟದ ಚಿತ್ರ ಬಿಡಿಸುವ ಅವಕಾಶವಿದ್ದರೆ, 8ರಿಂದ 10ನೇ ತರಗತಿಯವರಿಗೆ ವಿಷಯವನ್ನು ಸ್ಥಳದಲ್ಲೇ ನೀಡಲಾಯಿತು. ಬೆಳಗ್ಗೆ 10ರಿಂದ 11.30ರವರೆಗೆ ನಡೆದ ಸ್ಪರ್ಧೆಯಲ್ಲಿ ಮಕ್ಕಳು ತಮ್ಮ ಕಲ್ಪನೆಗೆ ಬಣ್ಣ ತುಂಬಿದರು. ಯಾರ ಹಾಳೆಯಲ್ಲಿ ಪ್ರಕೃತಿ ಅರಳಿದರೆ, ಮತ್ತೊಬ್ಬರ ಹಾಳೆಯಲ್ಲಿ ಕಲ್ಪನೆಯ ಲೋಕ ಮೂಡಿತು. ಸಮಯ ಮುಗಿಯುವವರೆಗೂ ಮಕ್ಕಳ ಕೈಯಲ್ಲಿನ ಪೆನ್ಸಿಲ್‌, ಕುಂಚಗಳು ವಿಶ್ರಾಂತಿ ಪಡೆಯಲಿಲ್ಲ.

ಸ್ಪರ್ಧೆಗೆ ಸ್ಥಳದಲ್ಲೇ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಚಿತ್ರ ಬಿಡಿಸಲು ಬೇಕಾದ ಹಾಳೆಯನ್ನು ಆಯೋಜಕರು ಒದಗಿಸಿದ್ದು, ಅಗತ್ಯ ಪರಿಕರಗಳನ್ನು ವಿದ್ಯಾರ್ಥಿಗಳೇ ತಂದಿದ್ದರು. ಪ್ರತಿ ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಯಿತು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರ ವಿತರಿಸಲಾಯಿತು.

ಚಿತ್ರದ ಜತೆಗೆ ಗಿಫ್ಟ್ ಆ್ಯಂಪರ್
ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ವಿದ್ಯಾರ್ಥಿಯ ಮುಖದಲ್ಲೂ ಸಂಭ್ರಮ ಮೂಡಿಸುವ ಉದ್ದೇಶದಿಂದ ಸಿಹಿತಿಂಡಿ ಹಾಗೂ ವಿವಿಧ ಉಡುಗೊರೆಗಳನ್ನೊಳಗೊಂಡ ಗಿಫ್ಟ್ ಆ್ಯಂಪರ್ ಸಿದ್ಧಪಡಿಸಲಾಗಿತ್ತು. ವಿಶೇಷವೆಂದರೆ ಈ ಆ್ಯಂಪರ್ ರೂಪುಗೊಳ್ಳಲು ವಿವಿಧ ದಾನಿಗಳು ತಮ್ಮದೇ ಆದ ಕೊಡುಗೆ ನೀಡಿದರು.


ರಕ್ಷಿತ್ ಕಾನಾವು ಅವರಿಂದ ಚಾಕಲೇಟ್, ಕಾರ್ತಿಕ್ ರೈ ಕನ್ನೆಜಾಲು ಅವರಿಂದ ಲಾಡು ಹಾಗೂ ಮಿಕ್ಸರ್ ಪ್ಯಾಕ್, ಪುತ್ತೂರಿನ ಉಮೇಶ್ ನಾಯಕ್ ಅವರಿಂದ ನೀತಿ ಪುಸ್ತಕ, ರುಮೈಝಾ ಕೆ. ಅವರಿಂದ ಐಸ್ ಕ್ಯಾಂಡಿ, ಐವನ್ ಪ್ರಾನ್ಸಿಸ್ ಲೋಬೋ ಅವರಿಂದ ಬಿಸ್ಕೆಟ್, ಪುತ್ತೂರಿನ ಶಿವಪ್ರಕಾಶ್ ಆಚಾರ್ಯ ಅವರಿಂದ ಲೇಸ್, ಡಾ|ನರಸಿಂಹ ಶರ್ಮ

ಕಾನಾವು ಅವರಿಂದ ಕೈಚೀಲ, ಅನಘ ಅಲೆಕ್ಕಾಡಿ ಅವರಿಂದ ಡ್ರಾಯಿಂಗ್ ಶೀಟ್, ಹಿಮಾಂಶು ವಿಟ್ಲ ಅವರಿಂದ ರಾಗಿ ಮಾಲ್ಟ್, ಅಕ್ಷತಾ ಪಂಚೋಡಿ ಅವರಿಂದ ಪೆನ್ಸಿಲ್, ನಿರೀಕ್ಷ್ ರೈ ಪಟ್ಟೆ ಅವರಿಂದ ಪೆನ್ನು, ಭರತ್ ಬೊಣ್ಯಕುಕ್ಕು ಅವರಿಂದ ತರಕಾರಿ ಹಾಗೂ ರಾಮಚಂದ್ರ ಬರೆಪ್ಪಾಡಿ ಅವರಿಂದ ಅಕ್ಕಿ ಸೇರಿದಂತೆ ಹಲವು ಕೊಡುಗೆಗಳು ಗಿಫ್ಟ್ ಆ್ಯಂಪರ್ ಸೇರಿದ್ದವು.


ವಿದ್ಯಾರ್ಥಿಗಳಿಗಾಗಿ ಊಟ ಹಾಗೂ ರಾಗಿ ಮಾಲ್ಟ್ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಚಿತ್ರ ಬಿಡಿಸಲು ಬಂದ ಮಕ್ಕಳಿಗೆ ಬಣ್ಣಗಳ ಸಂಭ್ರಮ, ಭಾಗವಹಿಸಿದ್ದಕ್ಕೆ ಪ್ರಮಾಣಪತ್ರ, ಮನೆಗೆ ಕೊಂಡೊಯ್ಯಲು ಉಡುಗೊರೆ—ಹೀಗೆ ಮುಕ್ಕೂರಿನ ಚಿತ್ರಕಲಾ ಸ್ಪರ್ಧೆ ಬಾಲ ಪ್ರತಿಭೆಗಳ ಪಾಲಿಗೆ ವಿಶೇಷ ಅನುಭವವಾಗಿ ಪರಿಣಮಿಸಿತು.

ಪೋಷಕರಿಗೂ ಚಟುವಟಿಕೆ
ಇತ್ತ ಪುಟ್ಟ ಕೈಗಳಲ್ಲಿ ಪೆನ್ಸಿಲ್‌–ಕುಂಚಗಳು ಓಡಾಡಿ, ಹಾಳೆಗಳ ಮೇಲೆ ಕಲ್ಪನೆಗಳು ಬಣ್ಣವಾಗಿ ಅರಳುತ್ತಿದ್ದರೆ, ಅತ್ತ ಪೋಷಕರಿಗೂ ವಿಭಿನ್ನ ಅನುಭವ. ಮಕ್ಕಳ ಚಿತ್ರಕಲೆಯ

ಸಂಭ್ರಮದ ಜತೆಗೆ ಪೋಷಕರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಲಾವಿದ ಪದ್ಮನಾಭ ಎಸ್. ಅವರ ಮಾರ್ಗದರ್ಶನದಲ್ಲಿ ನಡೆದ ಚಟುವಟಿಕೆಗಳು ಪೋಷಕರಲ್ಲೂ ಹೊಸ ಚೈತನ್ಯ ಮೂಡಿಸಿ, ಕಾರ್ಯಕ್ರಮಕ್ಕೆ ಮತ್ತೊಂದು ವಿಶೇಷ ಆಯಾಮ ನೀಡಿದವು.