ಪೆರುವಾಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರ

0

ಪೆರುವಾಜೆಯ ಡಾ. ಕೆ. ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ದಿನದ ಅಂಗವಾಗಿ ಆಂತರಿಕ ಗುಣಮಟ್ಟ ಭರವಸ ಕೋಶ (IQAC), ರಾಷ್ಟ್ರೀಯ ಸೇವಾ ಯೋಜನೆ (NSS), ಯುವ ರೆಡ್ ಕ್ರಾಸ್ (YRC), ರೋವರ್ ಘಟಕ, ಲಯನ್ಸ್ ಕ್ಲಬ್, ಬೆಳ್ಳಾರೆ ಮತ್ತು ರೋಟರಿ ಕ್ಲಬ್‌, ಬೆಳ್ಳಾರೆ ಹಾಗೂ ವೆನ್ ಲಾಕ್ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ IQAC ಸಂಚಾಲಕರಾದ ಗಿರೀಶ್ ಸಿ.ಆರ್. ಅವರು ಎನ್ ಎಸ್ ಎಸ್ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎನ್.ಎಸ್.ಎಸ್. ಘಟಕದ ಸಹ ಸಂಚಾಲಕರಾದ ಶ್ರೀಮತಿ ಶಾಲಿನಿ ಆರ್. ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ YRC ಗೀತೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಕಿರಣ್ ಎ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಆಶಯ, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸುವ ಅಗತ್ಯ ಹಾಗೂ ರಕ್ತದಾನದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಯನ್ಸ್ ಕ್ಲಬ್ ಬೆಳ್ಳಾರೆ ಇದರ ಅಧ್ಯಕ್ಷರಾದ ದಿನಕರ ಆಳ್ವಾ ಅವರು, ರಕ್ತದಾನವು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಮತ್ತೊಂದು ಜೀವ ಉಳಿಸುವ ಮಹತ್ವದ ಮಾನವೀಯ ಸೇವೆಯಾಗಿದೆ. ಯುವಜನತೆ ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮಾಜದ ಒಳಿತಿಗೆ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು. ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಶ್ರೀ ಮಧು ಎನ್.ಎಂ. ಅವರು ಮಾತನಾಡಿ, NSS, YRC ಹಾಗೂ ಇತರ ಸೇವಾ ಘಟಕಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ ಗುಣ ಮತ್ತು ಸಾಮಾಜಿಕ ಕಾಳಜಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಗಿರೀಶ್ ಸಿ.ಆರ್. ಅವರು, ವಿದ್ಯಾರ್ಥಿ ಜೀವನವು ಕೇವಲ ಶೈಕ್ಷಣಿಕ ಸಾಧನೆಗೆ ಸೀಮಿತವಾಗದೆ, ಸಮಾಜದ ಅಗತ್ಯಗಳಿಗೆ ಸ್ಪಂದಿಸುವಂತಹ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವಂತಿರಬೇಕು ಎಂದು ನುಡಿದರು. ರಕ್ತದಾನದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಮಾನವೀಯತೆ ಮತ್ತು ಪರಸ್ಪರ ಸಹಕಾರದ ಮನೋಭಾವವನ್ನು ಬೆಳೆಸುತ್ತವೆ ಎಂದರು.


ಲಯನ್ಸ್ ಕ್ಲಬ್ ಮತ್ತು ರೋಟರಿ ಕ್ಲಬ್ ಬೆಳ್ಳಾರೆ ಇವರ ಪ್ರಾಯೋಜಕತ್ವದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಒಟ್ಟು 33 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ವಿದ್ಯಾರ್ಥಿಗಳು, ಸ್ವಯಂಸೇವಕರು ಹಾಗೂ ಲಯನ್ಸ್ ಮತ್ತು ರೋಟರಿ ಕ್ಲಬ್ ನ ಸದಸ್ಯರು ಉತ್ಸಾಹದಿಂದ ಭಾಗವಹಿಸುವ ಮೂಲಕ ರಕ್ತದಾನ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದರು. ರಕ್ತದಾನವು ಜೀವ ಉಳಿಸುವ ಮಹತ್ವದ ಸಾಮಾಜಿಕ ಸೇವೆಯಾಗಿದ್ದು, ಆರೋಗ್ಯವಂತ ಪ್ರತಿಯೊಬ್ಬರೂ ಸೂಕ್ತ ವೈದ್ಯಕೀಯ ಸಲಹೆಯೊಂದಿಗೆ ರಕ್ತದಾನ ಮಾಡುವಂತೆ ಕಾರ್ಯಕ್ರಮದಲ್ಲಿ ಪ್ರೇರೇಪಿಸಲಾಯಿತು.


ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ NSS, YRC ಹಾಗೂ ರೋವರ್ ಘಟಕದ ಸ್ವಯಂಸೇವಕರು ಸಹಕರಿಸಿದರು. ಸ್ವಯಂಸೇವಕರಾದ ಶಮಿತ್ ಸ್ವಾಗತಿಸಿ ಕು.ಅನಿತಾ ವಂದನಾರ್ಪಣೆ ಮಾಡಿದರು. ಯೋಗೀಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ, ಲಯನ್ಸ್ ಕ್ಲಬ್ ಬೆಳ್ಳಾರೆ ಇದರ ಸರ್ವ ಸದಸ್ಯರು, ರೋಟರಿ ಕ್ಲಬ್ ಬೆಳ್ಳಾರೆ ಅಧ್ಯಕ್ಷರಾದ ಶ್ರೀ ಆರಿಫ್ ಹಾಗೂ ಸದಸ್ಯರು, ರಕ್ತಪೂರಣ ಕೇಂದ್ರ ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವು ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳ ಸಂದೇಶಗಳನ್ನು ಸಾರುವುದರೊಂದಿಗೆ ಯಶಸ್ವಿಯಾಗಿ ನೆರವೇರಿತು.