ಊರನ್ನು ಬೆಳಗಿಸಿದ ಹಿರಿಯರನ್ನು ಊರವರೇ ಒಟ್ಟುಸೇರಿ ಸಂಸ್ಥೆ ಕಟ್ಟಿಕೊಂಡು ಪ್ರತಿ ವರ್ಷ ಸ್ಮರಿಸುವುದು ಸುಳ್ಯದಲ್ಲಿ ಮಾತ್ರ

0

ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಕಚೇರಿಯಲ್ಲಿ ಸಚಿವ ಯು.ಟಿ.ಖಾದರ್

ಸುಳ್ಯದಲ್ಲಿ ಎಲ್ಲಾ ರೀತಿಯ ವೃತ್ತಿ ವಿದ್ಯಾಸಂಸ್ಥೆಗಳನ್ನು ಕಟ್ಟಿದ ಕುತುಂಜಿ ವರಂಕಟ್ರಮಣ ಗೌಡರು ಊರಿನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದವರು. ಅವರ ಸಾಧನೆಗಳನ್ನು ಸ್ಮರಿಸುವುದಕ್ಕಾಗಿ ಊರವರೇ ಪಕ್ಷಭೇದವಿಲ್ಲದೆ ಸೇರಿಕೊಂಡು ಸದಸ್ಯತ್ವ ಹಣ ಹಾಕಿ ಸಂಸ್ಥೆ ಕಟ್ಟಿಕೊಂಡು ಪ್ರತೀವರ್ಷ ಕಾರ್ಯಕ್ರಮ ಮಾಡುತ್ತಿರುವುದು ಸುಳ್ಯದಲ್ಲಿ ಮಾತ್ರ ಎಂದು ಕಾಣುತ್ತದೆ ” ಎಂದು ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಇಂದು ಸಂಜೆ ಸುಳ್ಯಕ್ಕೆ ಬಂದಾಗ ಚೆನ್ನಕೇಶವ ದೇವಸ್ಥಾನದ ವಾಣಿಜ್ಯ ಸಂಕೀರ್ಣದಲ್ಲಿರುವ ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಕಚೇರಿಗೆ ಭೇಟಿ ನೀಡಿ ಮಾತನಾಡಿದರು.
ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಎಸ್.ಸಂಶುದ್ದೀನ್, ಖಜಾಂಚಿ ಚಂದ್ರಶೇಖರ ನಂಜೆ, ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ಮತ್ತು ಇತರರು ಸಚಿವ ಖಾದರ್ ರನ್ನು ಸ್ವಾಗತಿಸಿದರು. ಮಾಜಿ ಅಧ್ಯಕ್ಷರುಗಳಾದ ಪಿ.ಸಿ.ಜಯರಾಮ, ಕೆ.ಟಿ.ವಿಶ್ವನಾಥ್, ಕೆ.ಎಂ.ಮುಸ್ತಫ, ಡಾ.ಲೀಲಾಧರ್ ಡಿ.ವಿ., ಪಿ.ಎಸ್.ಗಂಗಾಧರ್, ಶ್ರೀಮತಿ ರಾಜೀವಿ ಆರ್.ರೈ, ಶ್ರೀಮತಿ ವಿಮಲ ರಂಗಯ್ಯ, ರಾಧಾಕೃಷ್ಣ ಬೊಳ್ಳೂರು, ತಹಶೀಲ್ದಾರ್ ಮಂಜುಳ, ಹೇಮಂತ್ ಕಾಮತ್, ಶೈಲೇಶ್ ಅಂಬೆಕಲ್, ಶಾಫಿ ಕುತ್ತಮೊಟ್ಟೆ, ರಾಜು ಪಂಡಿತ್, ಶರೀಫ್ ಕಂಠಿ, ಧರ್ಮಪಾಲ ಕೊಯಿಂಗಾಜೆ ಮೊದಲಾದವರಿದ್ದರು.

ಕೆ.ಎಂ.ಮುಸ್ತಫರವರು ಕೆ.ವಿ.ಜಿ.ಸುಳ್ಯ ಹಬ್ಬ ಸಮಿತಿ ರಚನೆಯ ಹಿನ್ನೆಲೆ ವಿವರಿಸಿ , ” ಡಾ.ಕೆ.ವಿ.ಜಿ.ಯವರ ಹುಟ್ಟುಹಬ್ಬವನ್ನು ಹರೀಶ್ ಬಂಟ್ವಾಳ್ ರವರು ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುವಾಗ ಭವ್ಯ ಸುಳ್ಯ ಸಂಕಲ್ಪ ದಿನ ಎಂದು ಪತ್ರಕರ್ತರ ಸಂಘದ ವತಿಯಿಂದ ಆಚರಿಸಲು ಆರಂಭಿಸಿದರು. ಅದರ ಸ್ಫೂರ್ತಿಯಿಂದ ಜಯಪ್ರಕಾಶ ರೈಯವರು 10 ಸಾವಿರ ರೂ.ಗಳ ಸದಸ್ಯತ್ವದ ಕಲ್ಪನೆ ಮುಂದಿಟ್ಟು ಯಾರಿಂದಲೂ ಕೈ ಚಾಚದೆ ಡಾ.ಕುರುಂಜಿಯವರ ಹುಟ್ಟುಹಬ್ಬವನ್ನು ಪ್ರತೀ ವರ್ಷ ಸಾರ್ವಜನಿಕವಾಗಿ ಆಚರಿಸಬೇಕೆಂದು ಕೆ.ವಿ.ಜಿ.ಸುಳ್ಯ ಹಬ್ಬ ಸಮಾಜ ಸೇವಾ ಸಂಘವನ್ನು ಸ್ಥಾಪಿಸಿದರು. ಆ ನಂತರ ಈ 16 ವರ್ಷಗಳಿಂದ ನಿರಂತರವಾಗಿ ಕೆ.ವಿ.ಜಿ. ಸುಳ್ಯ ಹಬ್ಬವನ್ನು ಆಚರಿಸಲಾಗುತ್ತಿದೆ ” ಎಂದರು.
ಸುಳ್ಯ ಹಬ್ಬ ಸಮಿತಿಯ ಮಾಜಿ ಅಧ್ಯಕ್ಷ ಕೆ.ಟಿ.ವಿಶ್ವನಾಥರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಧ್ಯಕ್ಷ ಸಂಶುದ್ದೀನ್ ಹಾಗೂ ಮಾಜಿ ಅಧ್ಯಕ್ಷರುಗಳು ಸಚಿವರನ್ನು ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಚಿವರು ತನ್ನ ಮತ್ತು ಕುರುಂಜಿಯವರ ಒಡನಾಟ ಹಾಗೂ ಸುಳ್ಯದ ತನ್ನ ಒಡನಾಟವನ್ನು ಸ್ಮರಿಸಿಕೊಂಡರು.