ಸುಳ್ಯದಲ್ಲಿ ಬೃಹತ್ ಮಟ್ಟದ ಗಾಂಧಿಸ್ಮೃತಿ ಮತ್ತು ಜನಜಾಗೃತಿ ಸಮಾವೇಶ

0

ಧರ್ಮಸ್ಥಳ ಯೋಜನೆ ಹಾಗೂ ಜನಜಾಗೃತಿ ವೇದಿಕೆಯಿಂದ ಆಯೋಜನೆ

ಸಮಾವೇಶದಲ್ಲಿ ಕಿಕ್ಕಿರಿದು ಸೇರಿದ ಜನಸ್ತೋಮ – ಆಕರ್ಷಕ ಬೃಹತ್ ಕಾಲ್ನಡಿಗೆಯ ಜಾಥಾ

ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದ.ಕ ಜಿಲ್ಲೆ 2 ಇದರ ವತಿಯಿಂದ ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶವು ಸುಳ್ಯದ ಕೇರ್ಪಳ ಬಂಟರ ಸಮುದಾಯ ಭವನದಲ್ಲಿ ಅ.5 ರಂದು ನಡೆಯಿತು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ಎನ್.ವಿಶ್ವನಾಥ ರೈ ಕಳಂಜ ಅಧ್ಯಕ್ಷತೆವಹಿಸಿಮಾತನಾಡಿ “ಗಾಂಧೀಜಿಯವರ ಸ್ಮರಣೆಯೊಂದಿಗೆ ಸಮಾವೇಶದ ಮೂಲಕ ಯುವ ಮನಸ್ಸುಗಳ ಪರಿವರ್ತನೆ ಹಾಗೂ ಹೊಸತನವನ್ನು ತರುವ ಬಗ್ಗೆ ಚಿಂತನೆ ಮಾಡಲಾಗುವುದು.
ಕೃಷ್ಣರಾಜ ಒಡೆಯರು 60 ಸಾವಿರ ಕೆರೆ ನಿರ್ಮಿಸಿ ಚರಿತ್ರೆ ನಿರ್ಮಿಸಿದರೆ ಖಾವಂದರು ಅದನ್ನು ಮೀರಿ ಕೆರೆಗಳನ್ನು ನಿರ್ಮಿಸಿ ಇತಿಹಾಸ ಸೃಷ್ಟಿಸಿದವರು.‌ ಮನುಷ್ಯನ ಹುಟ್ಟಿನಿಂದ ಸಾವಿನ ಮಧ್ಯೆ ಏನೆಲ್ಲಾ ವ್ಯವಸ್ಥೆ ಇರಬೇಕು ಅದೆಲ್ಲವೂ ಕ್ಷೇತ್ರದ ಯೋಜನೆಯಿಂದ ಲಭಿಸಿದೆ. ಹೊಟ್ಟೆಗೆ
ಅನ್ನ ನೀಡಿದವರನ್ನು ಮರೆಯುವ ಜಾಯಮಾನ ನಮ್ಮದಲ್ಲ. ಹಾದಿ ತಪ್ಪಿಸುವ ಕಿವಿ ತುಂಬುವ ಜನರಿಗೆ ಈ ಬೃಹತ್ ಸಮಾವೇಶ ಉತ್ತರ ನೀಡಿದೆ. ಇದಕ್ಕೆ ಸಹಕರಿಸಿದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ
ಕು. ಭಾಗೀರಥಿ ಮುರುಳ್ಯ ದೀಪ ಪ್ರಜ್ವಲಿಸಿ ಮಾತನಾಡಿ “ಧರ್ಮಸ್ಥಳ ಯೋಜನೆ ಎಂದರೆ ಶಿಸ್ತು ಸಂಯಮಕ್ಕೆ ಒತ್ತು ನೀಡಿ ಮನೆಯಲ್ಲಿ ಉಳಿಯುವ ಮಹಿಳೆಯನ್ನು ಸ್ವಾವಲಂಭಿನ್ನಾಗಿಸುವಲ್ಲಿ ಮಹತ್ತರ ಜವಬ್ದಾರಿ ನಿರ್ವಹಿಸಿದೆ. ಯೋಜನೆಯಿಂದ ಸಾಲ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಮನೆಗಳು ಸಾಕಷ್ಟಿದೆ. ಸಂಘದಿಂದ ಸಾಲ ಪಡೆದು ತಮ್ಮ ಮನೆಗಳಲ್ಲಿ ದೈವದ ಕೋಲ ನೇಮೊತ್ಸವವನ್ನು ನಡೆಸಿದವರಿದ್ದಾರೆ. ಗಾಂಧಿಯವರ ತತ್ವದ ಜತೆಗೆ ರಾಮರಾಜ್ಯ ನಿರ್ಮಾಣದ ಕನಸು ಹಾಗೂ ಪ್ರಧಾನಿಯವರ ಆತ್ಮ ನಿರ್ಭರ ಭಾರತದ ನಿರ್ಮಾಣಕ್ಕೆಹೆಗ್ಗಡೆಯವರು ಒತ್ತು ನೀಡಿ ಅದನ್ನು ಆಧಾರವಾಗಿಟ್ಟುಕೊಂಡು ಸರಕಾರದ ಯೋಜನೆ ಸಾಕಾರಗೊಳಿಸಲು ಕೈ ಜೋಡಿಸುತ್ತಿರುವುದು ಅಭಿನಂದನೀಯ. ಮದ್ಯವರ್ಜನ ಶಿಬಿರವೆಂಬ ದೂರ ದೃಷ್ಟಿಯ ಕಲ್ಪನೆ ಸಮಾಜದಲ್ಲಿ ವ್ಯಕ್ತಿಯ ಬದಲಾವಣೆಗೆ ಪೂರಕವಾಗಿದೆ. ಒಂದಲ್ಲ ಒಂದು ರೀತಿಯಲ್ಲಿ ಯೋಜನೆಯಪ್ರಯೋಜನವನ್ನು ಪಡೆಯದೆ ಇರುವವರು ವಿರಳ ಎಂದು ಹೇಳಿದರು.

ಪುತ್ತೂರು ವಿಭಾಗದ ಪೋಲಿಸ್ ಉಪ ಅಧೀಕ್ಷಕರಾದ ಪ್ರಮೋದ್ ಕುಮಾರ್ ರವರು ಮಾತನಾಡಿ” ವೇದಿಕೆಯ ವತಿಯಿಂದ ಸಮಾಜದಲ್ಲಿ ಧನಾತ್ಮಕಪರಿವರ್ತನೆಯಾಗಿದೆ. ವ್ಯಕ್ತಿ, ಊರು, ಕುಟುಂಬ, ಸಮಾಜ, ದೇಶದ ಉದ್ಧಾರಕ್ಕಾಗಿ ದೃಢ ಸಂಕಲ್ಪ ಹೊಂದಿರುವ ತಂಡ ಇದಾಗಿದ್ದು ಇಲಾಖೆಯು ಕೈ ಜೋಡಿಸಲಿದೆ. ದುಶ್ಚಟ ಮುಕ್ತ, ಯುವಜನತೆಗೆ ಮಾರಕವಾಗಿರುವ ಡ್ರಗ್ಸ್ ಮುಂತಾದ ಮಾದಕ ವ್ಯಸನಗಳ ಮುಕ್ತ ಸಮಾಜ ನಿರ್ಮಾಣಕ್ಕೆ ಇಲಾಖೆಯೊಂದಿಗೆ ಯೋಜನೆಯ ಸದಸ್ಯರು ಸಹಕರಿಸಬೇಕು. ಒಳ್ಳೆಯ ಯೋಚನೆ,ಯೋಜನೆಯಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಕರೆ ನೀಡಿದರು.

ಗಾಂಧೀಜಿಯವರು ಕಂಡ ಕನಸಿನಂತೆ ಹೆಗ್ಗಡೆಯವರು ಅನೇಕ ಆಯಾಮಗಳಲ್ಲಿ ಅದನ್ನು ಪೂರೈಸುವಲ್ಲಿ ಮುಂದಡಿ ಇಟ್ಟವರು. ಗ್ರಾಮ ಕಲ್ಯಾಣವಾದರೆ ದೇಶ ಸುಭೀಕ್ಷೆ ಹೊಂದಲು ಸಾಧ್ಯ. ಬಡವರಿಗೆ ದಾಖಲೆ ಪತ್ರ ಇಲ್ಲದೆ ಬ್ಯಾಂಕ್ ನಿಂದ ಸಾಲ ಕೊಡುವುದಿಲ್ಲವೆಂದಾಗ ಪರ್ಯಾಯವಾಗಿ ಬಡವರ ಪರವಾಗಿ ಗ್ಯಾರಂಟಿ ನಿಂತು ಸಾಲ ಕೊಡಿಸಿದವರು ಖಾವಂದರು. ಯೋಜನೆಯಿಂದ ಬಡಜನರ ಸರ್ವಾಂಗೀಣ ಅಭಿವೃದ್ಧಿಗೆ ಆರ್ಥಿಕ ಅಡಿಪಾಯವನ್ನು ಹಾಕೊಕೊಟ್ಟವರು. ರಾಜ್ಯದಲ್ಲಿ ಸಾವಿರಾರು ಸರಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಕ್ಷೇತ್ರದ ವತಿಯಿಂದ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಮಣ್ಣಿನ ಮಡಕೆಯಲ್ಲಿ ತೂತು ಇದ್ದರೆ ಹೇಗೆ ನಿಲ್ಲುವುದಿಲ್ಲ ಹಾಗೆಯೇ ದುರಭ್ಯಾಸ ಹೊಂದಿದ ವ್ಯಕ್ತಿ ಇರುವ ಯಾವುದೇ ಮನೆಏಳಿಗೆಯಾಗಲಾರದುಮದ್ಯವರ್ಜನ ಶಿಬಿರ, ಆತ್ಮನಿರ್ಭರ ಭಾರತ ನಿರ್ಮಾಣ ಯೋಜನೆಯಿಂದ ಜೀವನಕ್ಕೆ ಮೌಲ್ಯ ತುಂಬುವ ದೃಢ ಸಂಕಲ್ಪವನ್ನು ಗ್ರಾಮೀಣ ಸೊಗಡನ್ನು ಉಳಿಸಿಕೊಂಡು ಮಾಡಬೇಕಾಗಿದೆ ಎಂದು ಧರ್ಮಸ್ಥಳ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ರವರು ತಮ್ಮ ಆಶಯ ಭಾಷಣದಲ್ಲಿ ಹೇಳಿದರು.

ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ರಾಜ್ಯ ಸಂಘಟನಾಧ್ಯಕ್ಷ ನಟರಾಜ ಬಾದಾಮಿ, ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಾಕಾಧ್ಯಕ್ಷ ಎನ್.ಎ.ರಾಮಚಂದ್ರ, ನಿಕಟ ಪೂರ್ವಾಧ್ಯಕ್ಷ ಪದ್ಮನಾಭ ಶೆಟ್ಟಿ,
ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ರೈ ತೋಟ, ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಕಡಬ ತಾಲೂಕು ಅಧ್ಯಕ್ಷ ಇಂದುಶೇಖರ ಶೆಟ್ಟಿ, ಪುತ್ತೂರು ತಾಲೂಕು ಅಧ್ಯಕ್ಷ ಸತೀಶ್ ನಾಯ್ಕ್, ಕಾಸರಗೋಡು ತಾಲೂಕು ಅಧ್ಯಕ್ಷ ಜಯರಾಮ ಪಾಟಾಳಿ, ಮಂಜೇಶ್ವರ ತಾಲೂಕು ಅಧ್ಯಕ್ಷ ಮಂಜುನಾಥ ಆಳ್ವ, ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರದ ಕಾರ್ಯಕ್ರಮ ನೆರವೇರಿಸಲಾಯಿತು.
ಶಾಸಕರನ್ನು, ಪೋಲಿಸ್ ಅಧೀಕ್ಷಕರನ್ನು,ಯೋಜನೆಯ ಸಿ.ಇ.ಒ ರವರನ್ನು ಸನ್ಮಾನಿಸಲಾಯಿತು.

ಚೆಕ್ ವಿತರಣೆ:

ಹೃದಯದ ಸಮಸ್ಯೆಯಿಂದ ಅನಾರೋಗ್ಯ ಪೀಡಿತರಿಗೆ ಕ್ರಿಟಿಕಲ್ ಫಂಡ್ ನಿಂದ ರೂ.50 ಸಾವಿರ, ಸುರಕ್ಷಾ ಯೋಜನೆಯಿಂದ
ರೂ. 1.20 ಲಕ್ಷ ಮತ್ತು ರೂ. 80 ಸಾವಿರ ಮೊತ್ತದ ಚೆಕ್ ವಿತರಿಸಲಾಯಿತು.

ವಿದ್ಯಾರ್ಥಿನಿಗೆ ಸುಜ್ಞಾನ ನಿಧಿ ಶಿಷ್ಯ ವೇತನದ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.
ನವಜೀವನ ಸಮಿತಿಯ ಸದಸ್ಯರಿಗೆ ಶಾಲು
ನೀಡಿ ಗೌರವಿಸಿ ಅಭಿನಂದಿಸಲಾಯಿತು.

ಶ್ರೀಮತಿ ಆರತಿ ಪುರುಷೋತ್ತಮ ಪ್ರಾರ್ಥಿಸಿ ದರು. ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಸ್ವಾಗತಿಸಿದರು. ಅತಿಥಿಗಳು ಗಾಂಧೀಜಿಯ ಭಾವ ಚಿತ್ರ ಕ್ಕೆ ಪುಷ್ಪ ನಮನ ಸಲ್ಲಿಸಿದರು. ಭಜನಾ ಪರಿಷತ್ ಸುಳ್ಯ ವಲಯದ ಅಧ್ಯಕ್ಷೆ ಶ್ರೀಮತಿ ಸವಿತಾ ಸಂದೇಶ್ ವೈಷ್ಣವ ಜನತೋ ಭಜನೆ ಹಾಡು ಹಾಡಿದರು. ವಿಜಯ್ ಮೇನಾಲ, ಯತೀಶ್ ಮುರೂರು ಪಕ್ಕ ವಾದ್ಯದಲ್ಲಿ ಸಹಕರಿಸಿದರು. ನವಜೀವನ ಸಮಿತಿ ಸದಸ್ಯರಾದ ದಯಾನಂದ ಗುಡ್ಡೆಮನೆ ಮತ್ತು ಶ್ರೀಮತಿ ಲಲಿತಾ ಸಂಪಾಜೆ ಯವರು ಅನಿಸಿಕೆ ವ್ಯಕ್ತ ಪಡಿಸಿದರು.
ಯೋಜನಾಧಿಕಾರಿ ಮಾಧವ ಗೌಡ ವಂದಿಸಿದರು. ಪ್ರಕಾಶ್ ಕಡಬ ಮತ್ತು ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಸಮಯಕ್ಕೆ ಸರಿಯಾಗಿ ದ್ವಾರಕಾ ಹೋಟೆಲ್ ಬಳಿಯ ರಾಜಶ್ರೀ ಕಾಂಪ್ಲೆಕ್ಸ್ ಆವರಣದಿಂದ ಬೃಹತ್ ಜನಜಾಗೃತಿ ಕಾಲ್ನಡಿಗೆಯ ಜಾಥಾವುಆರಂಭಗೊಂಡು ಮುಖ್ಯ ರಸ್ತೆಯಲ್ಲಿ ಸಾಗಿ ರಥಬೀದಿಯಾಗಿ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಕೇರ್ಪಳ ಬಂಟರ ಭವನದ ತನಕ ಸಾಗಿ ಬಂತು. ಸಹಸ್ರಾರು ಸಂಖ್ಯೆಯಲ್ಲಿ ಜಾಥಾದಲ್ಲಿ ಭಾಗವಹಿಸಿದ್ದರು.
ಆಗಮಿಸಿದ ಎಲ್ಲರಿಗೂ ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಸಭಾಭವನದಲ್ಲಿ ಕಿಕ್ಕಿರಿದು ಜನಸ್ತೋಮ ಸೇರಿದ್ದರು. ಸಭಾಭವನದ ಹೊರಗೆ ಶಾಮಿಯಾನ ಹಾಕಿ ವ್ಯವಸ್ಥೆ ಮಾಡಲಾಗಿತ್ತು.