ಗಾಂಧಿ ಜಯಂತಿ ಹಾಗೂ ಶಾಸ್ತ್ರಿ ಜಯಂತಿಯ ಅಂಗವಾಗಿ ಅರಣ್ಯದಲ್ಲಿ ಸೀಡ್ ಬಾಲ್ ಎಸೆತ ಕಾರ್ಯಕ್ರಮ

0

ಸ್ನೇಹ ಶಾಲೆಯ ಕಾರ್ಯಕ್ಕೆ ಅರಣ್ಯ ಇಲಾಖೆಯ ಸಾಥ್

ಕಾಡಿನಿಂದ ಮಂಗಗಳು ನಾಡಿಗೆ ಬಂದು ತೋಟದ ಹಣ್ಣು ಹಂಪಲುಗಳನ್ನು ಮತ್ತು ತರಕಾರಿಗಳನ್ನು ಹಾಳುಮಾಡುತ್ತಿರುವ ಘಟನೆಗಳು ನಾನಾ ಕಡೆಗಳಲ್ಲಿ ಸಂಭವಿಸುತ್ತಿದೆ.

ಕಾಡಿನಲ್ಲಿ ಆಹಾರ ಸಿಕ್ಕದೆ ಇದ್ದಾಗ ಈ ಹಾವಳಿ ನಡೆಯುತ್ತಿದ್ದು, ಆದರೆ ಕಾಡಿನಲ್ಲೇ ಅವುಗಳಿಗೆ ಆಹಾರ ಸಿಕ್ಕಿದರೆ ಅವು ನಾಡಿಗೆ ಪ್ರಯಾಣ ಬೆಳೆಸಲಾರವು ಎಂಬ ಕಾರಣಕ್ಕಾಗಿ ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆ ವತಿಯಿಂದ ಕಾಡಿನಲ್ಲಿ ಹಣ್ಣು ಹಂಪಲುಗಳ ಬೀಜಗಳನ್ನು ಎಸೆಯುವ ಕಾರ್ಯಕ್ರಮ ಗಾಂಧಿ ಜಯಂತಿ ಮತ್ತು ಶಾಸ್ತ್ರಿ ಜಯಂತಿ ಅಂಗವಾಗಿ ನೆರವೇರಿಸಲಾಯಿತು.

ಮೇದಿನಡ್ಕ ಅರಣ್ಯ ಪ್ರದೇಶದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅರಣ್ಯ ಇಲಾಖೆಯ ವತಿಯಿಂದ ಈ ಕಾರ್ಯಕ್ಕೆ ಸಾಥ್ ನೀಡಲಾಯಿತು.

ಕಾಡಿನಲ್ಲಿ ಬೆಳೆಸಿದ ಫಲರಹಿತ ಮ್ಯಾಂಜಿಯಂ, ಅಕೇಶಿಯಾ ಇತ್ಯಾದಿ ಮರಗಳನ್ನು ಕಡಿದು ಖಾಲಿಯಾದ ಅರಣ್ಯದಲ್ಲಿ ಹಣ್ಣಿನ ಬೀಜಗಳನ್ನು ಎಸೆಯುವುದು ಒಂದು ಉಪಾಯ. ಮಣ್ಣಿನೊಂದಿಗೆ ಸೆಗಣಿ ಮಿಶ್ರ ಮಾಡಿ ನೀರಿನಲ್ಲಿ ತೋಯಿಸಿ ಉಂಡೆಕಟ್ಟಿ ಅದರೊಳಗೆ ಹಣ್ಣಿನ ಬೀಜವನ್ನು ಇಟ್ಟು ಸಂರಕ್ಷಿಸಲಾಗುತ್ತದೆ. ಇಂತಹ ಬೀಜದ ಉಂಡೆಗಳನ್ನು ಕಾಡಿನಲ್ಲಿ ಎಸೆದಾಗ ಅವು ಬಿದ್ದ ನೆಲದ ಸಂಪರ್ಕದಿಂದ ಮೊಳಕೆಯೊಡೆದು ಮಳೆನೀರಿನ ಪೋಷಣೆಯಿಂದ ಗಿಡವಾಗಿ, ಮರವಾಗಿ ಬೆಳೆಯುವ ಅವಕಾಶವಿರುತ್ತದೆ. ಇಂತಹ ನಿರೀಕ್ಷೆಯಿಂದ ಅರಣ್ಯದಲ್ಲಿ ಬೀಜದುಂಡೆಗಳನ್ನು ಎಸೆಯಲಾಗುತ್ತದೆ ಮತ್ತು ಒಂದು ಕಾಡು ಮತ್ತು ನಾಡಿನ ಸಮತೋಲಿತ ಸಂಬಂಧವು ಪರಿಸರ ರಕ್ಷಣೆಯನ್ನು ಮಾಡುತ್ತದೆ. ಕೃಷಿ ಜಗತ್ತಿನ ಯಶಸ್ಸಿಗೆ ಅರಣ್ಯಗಳು ಉಳಿಯಬೇಕು. ಇದನ್ನು ಮನಗಂಡ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪರಿಸರಪ್ರೇಮಿ ಡಾ. ಚಂದ್ರಶೇಖರ ದಾಮ್ಲೆಯವರು ಈ ಪ್ರಯೋಗವನ್ನು ಪ್ರೋತ್ಸಾಹಿಸಿದರು.

ಸ್ನೇಹದ ಸಸ್ಯ ಶಾಸ್ತ್ರದ ಶಿಕ್ಷಕಿ ಶ್ರೀಮತಿ ಮಾಲತಿಯವರು ಇದರಲ್ಲಿ ಆಸಕ್ತಿ ವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಔಷಧೀಯ ಸಸ್ಯಗಳ ತಜ್ಞರಾಗಿರುವ ಶಾಲಾ ಶೈಕ್ಷಣಿಕ ನಿರ್ದೇಶಕಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಈ ಪ್ರಯೋಗದ ಯಶಸ್ಸಿಗಾಗಿ ಕೈಜೋಡಿಸಿದರು. 5 ನೇ ಯಿಂದ 10 ನೇ ವರೆಗಿನ ವಿದ್ಯಾರ್ಥಿಗಳು ಒಂದು ತಂಡವಾಗಿ ಬೀಜದ ಉಂಡೆಗಳ ತಯಾರಿಯಲ್ಲಿ ಭಾಗವಹಿಸಿದರು.

ವಿದ್ಯಾರ್ಥಿಗಳು ತಮ್ಮ ಮನೆಗಳಿಂದಲೇ ತಂದ ಸೆಗಣಿಯನ್ನು ಇಲ್ಲಿ ಮಣ್ಣಿಗೆ ಸೇರಿಸಿ ಅದರ ಸುತ್ತಲೂ ಕುಳಿತು ಶಿಕ್ಷಕರೂ ಸೇರಿ ಸುಮಾರು 700 ಬೀಜದ ಉಂಡೆಗಳನ್ನು ತಯಾರಿಸಲಾಯಿತು. ಪ್ರತಿಯೊಂದು ಉಂಡೆಯಲ್ಲಿ
ಹಲಸು, ಮಾವು, ಪಪ್ಪಾಯಿ, ಜಂಬುನೇರಳೆ, ನಕ್ಷತ್ರ ನೇರಳೆ, ಕಲ್ಲಂಗಡಿ, ರಾಮಫಲ, ಸೀತಾಫಲ, ಲಕ್ಷ್ಮಣ ಫಲ, ಜಾರಿಗೆಹಣ್ಣು, ಪುನರ್ ಪುಳಿ, ರಂಬುತಾನ್, ಬೆಣ್ಣೆಹಣ್ಣು ಮುಂತಾಗಿ ಒಂದಲ್ಲ ಒಂದು ಹಣ್ಣಿನ ಬೀಜವನ್ನು ಇಡಲಾಗಿತ್ತು. ಈ ವರ್ಷದ ಅನಿಯಮಿತ ಮಳೆಯಿಂದಾಗಿ ಇವುಗಳನ್ನು ಎಸೆಯುವ ಸಮಯ ಕೂಡಿ ಬಂದಿರಲಿಲ್ಲ.

ಕೊನೆಗೂ ಗಾಂಧೀಜಿ- ಶಾಸ್ತ್ರೀಜಿಯವರ ಜನ್ಮದಿನವಾದ ಅಕ್ಟೋಬರ್ 2 ರಂದು ಅರಣ್ಯದಲ್ಲಿ ಸೀಡ್ ಬಾಲ್ ಗಳನ್ನು ಎಸೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸುಳ್ಯದ ಅರಣ್ಯ ಇಲಾಖೆಯವರ ಸಹಕಾರದಿಂದ ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ ಈ ಕಾರ್ಯಕ್ರಮ ನಡೆದಿದ್ದು ಅರಣ್ಯ ಇಲಾಖೆಯ ವಿವಿಧ ಹುದ್ದೆಗಳಲ್ಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.
ಶಾಲಾ ಮುಖ್ಯೋಪಾಧ್ಯಾಯ ದೇವಿಪ್ರಸಾದ್ ರವರು ಶಾಲಾ ಅಧ್ಯಕ್ಷರು ಹಾಗೂ ಶಿಕ್ಷಕರೆಲ್ಲರೂ ಬಂದು ಸೇರಿ ಮೇದಿನಡ್ಕದ ಅರಣ್ಯದಲ್ಲಿ ಬೀಜದ ಉಂಡೆಗಳನ್ನು ಎಸೆಯಲಾಯಿತು. ಹೀಗೆ ಎಸೆದ ಬೀಜಗಳಲ್ಲಿ ನೂರಕ್ಕೆ15 ಮೊಳೆತು ಮರವಾದರೂ ಅದೊಂದು ದೊಡ್ಡ ಯಶಸ್ಸೆಂಬುದಾಗಿ ವಲಯ ಅರಣ್ಯಾಧಿಕಾರಿ ಶ್ರೀ ನಿರಂಜನ್ ಶೆಟ್ಟಿಯವರು ಹೇಳಿದರು. ಅರಣ್ಯ ಡಿಪೊ ದಲ್ಲಿ ಸ್ನೇಹ ಶಾಲೆಯವರನ್ನೆಲ್ಲ ಕರೆದು ಸತ್ಕಾರ ನೀಡಿದರು. ಅಲ್ಲದೆ 72 ನೇ ವನ್ಯಜೀವಿ ಸಂರಕ್ಷಣೆಯ ಆಚರಣೆಯ ಅಂಗವಾಗಿ
ವಿದ್ಯಾರ್ಥಿಗಳಿಗೆ ಚಿತ್ರರಚನಾ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ನೀಡಿದರು. ಸ್ನೇಹ ಶಾಲೆಯ ಅಧ್ಯಕ್ಷ ಡಾ.
ಚಂದ್ರಶೇಖರ ದಾಮ್ಲೆಯವರಿಗೆ
ಸ್ಮರಣಿಕೆಯನ್ನು ನೀಡಿ ಗೌರವಿಸಿದರು.